ಕೊಡಗು ಕಾಫಿ ಬ್ರ್ಯಾಂಡ್‌ ಸಂರಕ್ಷಣೆ ಅನಿವಾರ್ಯ: ಪೊನ್ನಣ್ಣ

KannadaprabhaNewsNetwork |  
Published : Nov 01, 2025, 02:45 AM IST
ಚಿತ್ರ :  31ಎಂಡಿಕೆ3 : ಕೂಗ್೯ ಪ್ಲಾಂಟಸ್೯ ಅಸೋಸಿಯೇಷನ್ ನ 146 ನೇ ವಾಷಿ೯ಕ ಮಹಾಸಭೆಯಲ್ಲಿ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.  | Kannada Prabha

ಸಾರಾಂಶ

ಸಿದ್ದಾಪುರ ಸಮೀಪದ ಇವೋಲ್ಯು ಬ್ಯಾಕ್ ರೆಸಾರ್ಟ್‌ನಲ್ಲಿ ಕೂರ್ಗ್‌ ಪ್ಲಾಂಟರ್ಸ್‌ ಅಸೋಸಿಯೇಷನ್‌ನ 146ನೇ ವಾರ್ಷಿಕ ಮಹಾಸಭೆ ನಡೆಯಿತು. ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಉದ್ಘಾಟಿಸಿದರು.

ಕೂರ್ಗ್‌ ಪ್ಲಾಂಟರ್ಸ್‌ ಅಸೋಸಿಯೇಷನ್ 146ನೇ ವಾರ್ಷಿಕ ಮಹಾಸಭೆ

ಕನ್ನಡಪ್ರಭ ವಾರ್ತೆ ಮಡಿಕೇರಿ

ತನ್ನದೇ ಆದ ವಿಶೇಷತೆಯನ್ನು ಹೊಂದಿರುವ ಕೊಡಗಿನ ಕಾಫಿ ಬ್ರ್ಯಾಂಡ್ ಅನ್ನು ಮುಂದಿನ ಪೀಳಿಗೆಯವರಿಗೆ ಸಂರಕ್ಷಿಸುವ ಅನಿವಾರ್ಯತೆ ಇದೆ ಎಂದು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.

ಸಿದ್ದಾಪುರ ಸಮೀಪದ ಇವೋಲ್ಯು ಬ್ಯಾಕ್ ರೆಸಾರ್ಟ್‌ನಲ್ಲಿ ಕೂರ್ಗ್‌ ಪ್ಲಾಂಟರ್ಸ್‌ ಅಸೋಸಿಯೇಷನ್‌ನ 146ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬದಲಾದ ಕಾಲಮಾನಕ್ಕೆ ತಕ್ಕಂತೆ ಕಾಫಿ ಉದ್ಯಮವೂ ಸಾಕಷ್ಟು ಸವಾಲುಗಳನ್ನು ಕಾಣುತ್ತಿದೆ. ಇಂಥ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಕಾಫಿ ಉದ್ಯಮವನ್ನು ಪ್ರಗತಿ ಪಥದಲ್ಲಿ ಸಾಗಿಸುವ ನಿಟ್ಟಿನಲ್ಲಿ ಕೂರ್ಗ್ ಪ್ಲಾಂಟರ್ಸ್‌ ಅಸೋಸಿಯೇಷನ್ ವಿವಿಧ ಕಾರ್ಯಯೋಜನೆಗಳಿಗೆ ಕೊಡಗಿನ ಕೃಷಿಕರೆಲ್ಲರೂ ಬೆಂಬಲ ನೀಡಬೇಕೆಂದರು.

ಸ್ವಚ್ಛತೆಗೆ ಆದ್ಯತೆ ನೀಡಿ:

ಇತ್ತೀಚೆಗೆ ಕೂರ್ಗ್ ಹೋಟೆಲ್, ರೆಸಾರ್ಟ್‌ ಅಸೋಸಿಯೇಷನ್ ಸ್ವಚ್ಛ ಕೊಡಗು - ಸುಂದರ ಕೊಡಗು ಅಭಿಯಾನದ ಮೂಲಕ ಈಗಾಗಲೇ ಗಮನ ಸೆಳೆದಿದೆ. ಈ ನಿಟ್ಟಿನಲ್ಲಿ ಕೃಷಿಕ ವರ್ಗದವರೂ ಕೂಡ ಕೊಡಗನ್ನು ಸ್ವಚ್ಛ- ಸುಂದರವಾಗಿಸುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ಮುಕ್ತ ಪರಿಸರಕ್ಕೆ ಪಣ ತೊಡಬೇಕಾಗಿದೆ. ಪ್ರತೀಯೋರ್ವರೂ ತ್ಯಾಜ್ಯ ವಿಲೇವಾರಿಗೆ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಬೇಕು ಎಂದರು.

ಜಮ್ಮಾಬಾಣೆ ಸಮಸ್ಯೆಗೆ ಶೀಘ್ರ ಪರಿಹಾರ:

ಕೊಡಗಿನ ಜಮ್ಮಾಬಾಣೆ ಸಮಸ್ಯೆ ಪರಿಹಾರಕ್ಕೆ ನ.10ರಂದು ಮೂರನೇ ಸಭೆಯನ್ನು ಕಂದಾಯ ಸಚಿವರು ಕರೆದಿದ್ದಾರೆ. ಈ ಸಭೆಯಲ್ಲಿ ನಿರ್ಣಯ ಕೈಗೊಂಡು ಡಿ.8ರಿಂದ ಪ್ರಾರಂಭವಾಗುವ ವಿಧಾನಸಭಾ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ ಮಂಡಿಸಲಾಗುತ್ತದೆ ಎಂದು ತಿಳಿಸಿದರು.

ಮಡಿಕೇರಿ ಶಾಸಕ ಡಾ.ಮಂಥರ್ ಗೌಡ ಮಾತನಾಡಿ, ಕೊಡಗಿನಲ್ಲಿ ಕಾಫಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳಲ್ಲಿ ಕಾಫಿ ಬಳಕೆ ಹೆಚ್ಚಿಸಬೇಕು. ಮನೆಗಳಲ್ಲಿಯೂ ಕಾಫಿಯನ್ನೇ ಕುಡಿಯುವಂತಾಗಬೇಕು. ಈ ಮೂಲಕ ದೇಶದಲ್ಲಿ ಆಂತರಿಕವಾಗಿ ಕಾಫಿ ಸೇವನೆ ಪ್ರಮಾಣ ಏರಿಕೆ ಮಾಡುವಲ್ಲಿ ಕೊಡಗಿನ ಪ್ರತೀಯೋರ್ವರೂ ಕಾರಣರಾಗಬೇಕು. ಈಗಾಗಲೇ ದೇಶಾದ್ಯಂತ ಕಾಫಿ ಕೆಫೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೊಡಗಿನಲ್ಲಿಯೂ ಕೆಫೆ ಸಂಸ್ಕೃತಿಗೆ ಯುವಪೀಳಿಗೆ ಮನಸೋತಿರುವುದು ಉತ್ತಮ ಬೆಳವಣಿಗೆ ಎಂದರು.

ಈ ವರ್ಷ ಅತ್ಯುತ್ತಮ ಬೆಲೆಯನ್ನು ಕಾಫಿ ಬೆಳೆಗೆ ಪಡೆದಿದ್ದರೂ ಕಾರ್ಮಿಕರ ಕೊರತೆ, ಬೆರಿ ಬೋರರ್ ಹಾವಳಿ, ನಿರ್ವಹಣೆಯಲ್ಲಿ ಉಂಟಾದ ದರ ಹೆಚ್ಚಳ ಮುಂತಾದ ಸಮಸ್ಯೆಯಿಂದ ಬೆಳೆಗಾರರು ನಲುಗಿದ್ದಾರೆ. ಅಕಾಲಿಕ ಮಳೆಯಿಂದಾಗಿ ಕಾಫಿ ಕೃಷಿ ಸಾಕಷ್ಟು ಹಾನಿಗೊಳಗಾಗಿದೆ. ಇಂಥ ಪರಿಸ್ಥಿತಿಯಲ್ಲಿ ಕಾಫಿ ಕೃಷಿಕರು ದೃತಿಗೆಡಬಾರದು. ಎಲ್ಲರೂ ಒಗ್ಗಟ್ಟಾಗಿ ಸಮಸ್ಯೆ ನಿವಾರಿಸಿ ಪರಿಸ್ಥಿತಿ ನಿಭಾಯಿಸೋಣ ಎಂದು ಬೆಳೆಗಾರರಲ್ಲಿ ಮನವಿ ಮಾಡಿದರು.

ಕುಶಾಲನಗರದಿಂದ ಮಂಗಳೂರು ಬಂದರಿಗೆ ಕಾಫಿ ಸಾಗಾಣೆ ನಿಟ್ಟಿನಲ್ಲಿ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣಕ್ಕೂ ಸರ್ಕಾರದ ಮೂಲಕ ವ್ಯವಸ್ಥೆ ಕೈಗೊಳ್ಳಲಾಗುತ್ತದೆ ಎಂದೂ ಮಂಥರ್ ಗೌಡ ಹೇಳಿದರು.ಕೂರ್ಗ್‌ ಪ್ಲಾಂಟರ್ಸ್‌ ಅಸೋಸಿಯೇಷನ್ ಅಧ್ಯಕ್ಷ ಎ.ನಂದಾಬೆಳ್ಯಪ್ಪ ಮಾತನಾಡಿ, ಭಾರತದಲ್ಲಿಯೇ ಕೃಷಿಕರ ಅತ್ಯಂತ ಹಿರಿಯ ಸಂಘಟನೆಯಾಗಿ ಗುರುತಿಸಿಕೊಂಡಿರುವ ಕೂರ್ಗ್‌ ಪ್ಲಾಂಟರ್ಸ್‌ ಅಸೋಸಿಯೇಷನ್ ಮುಂದಿನ 4 ವರ್ಷಗಳಲ್ಲಿ 150 ವರ್ಷ ಪೂರೈಸಲಿದೆ. ಸಂಸ್ಥೆಯನ್ನು ಬೆಳೆಸುವಲ್ಲಿ ಕೊಡಗಿನ ಅನೇಕ ಹಿರಿಯ ಕಾಫಿ ದಿಗ್ಗಜ ಬೆಳೆಗಾರರ ಶ್ರಮವಿದೆ. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿಯೇ ಸಂಸ್ಥೆ ಮುನ್ನುಗ್ಗುತ್ತಿದೆ ಎಂದರು.

ಸಭಾಕಾರ್ಯಕ್ರಮದಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಪ್ಲಾಂಟೇಷನ್ ಮ್ಯಾನೇಜ್‌ಮೆಂಟ್ ಸದಸ್ಯ ಕಾರ್ಯದರ್ಶಿ ಡಾ.ಜಾನ್ ಮನುರಾಜ್ ಎಸ್. ಉಪಸ್ಥಿತರಿದ್ದರು. ಕೂರ್ಗ್‌ ಪ್ಲಾಂಟರ್ಸ್‌ ಅಸೋಸಿಯೇಷನ್ ಉಪಾಧ್ಯಕ್ಷ ಎ.ಎ.ಚಂಗಪ್ಪ ವಂದಿಸಿದರು. ಎಂ.ಸಿ.ಕಾರ್ಯಪ್ಪ ನಿರೂಪಿಸಿದರು.

ಸಾಧಕರಿಗೆ ಸನ್ಮಾನ:

ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾಗಿ ನೇಮಕಗೊಂಡ ಚೆಪ್ಪುಡೀರ ಅರುಣ್ ಮಾಚಯ್ಯ, ಶನಿವಾರಸಂತೆಯ ಪ್ರಗತಿ ಪರ ಕರಿಮೆಣಸು ಬೆಳೆಗಾರ ಕೆ.ಎಂ.ಕಾಂತರಾಜು, ಮಾಯಮುಡಿಯ ಪ್ರಗತಿ ಪರ ಕೃಷಿಕ ಕೆ.ಎಂ.ತಿಮ್ಮಯ್ಯ, ಆರೆಂಜ್‌ ಕೌಂಟಿ ರೆಸಾರ್ಟ್‌ ಮತ್ತು ಹೋಟೆಲ್ ಲಿಮಿಟೆಡ್ ಅಧ್ಯಕ್ಷ ಇಮಾನ್ಯುವೆಲ್‌ ಟಿ. ರಾಮಪುರಂ ಅವರನ್ನು ಕೂರ್ಗ್‌ ಪ್ಲಾಂಟರ್ಸ್‌ ಅಸೋಸಿಯೇಷನ್ ಪರವಾಗಿ ಶಾಸಕರಾದ ಎ.ಎಶ್. ಪೊನ್ನಣ್ಣ, ಡಾ.ಮಂಥರ್ ಗೌಡ, ನಂದಾಬೆಳ್ಯಪ್ಪ ಸೇರಿದಂತೆ ಹಿರಿಯ ಕಾಫಿ ಬೆಳೆಗಾರರು ಸನ್ಮಾನಿಸಿದರು.

PREV

Recommended Stories

ಇಂದಿರಾರ ಆದರ್ಶವನ್ನು ಎಲ್ಲರೂ ಪಾಲಿಸಬೇಕು : ಸಿದ್ದರಾಮಯ್ಯ
ಕುಡಚಿ ಶಾಸಕ ಪುತ್ರಗೆ ಡಿಕೆಶಿಯಿಂದ ‘ಶಿವಕುಮಾರ್‌’ ಎಂದು ನಾಮಕರಣ!