ಪಾಕ್‌ ಹಾಡು ವಿವಾದ ಆತಂಕದ ನಡುವೆ ಈದ್‌ ಮಿಲಾದ್‌

KannadaprabhaNewsNetwork |  
Published : Aug 27, 2026, 01:15 AM IST
ಸಸಸ | Kannada Prabha

ಸಾರಾಂಶ

ಈದ್‌ ಮಿಲಾದ್‌ ಹಿನ್ನೆಲೆಯಲ್ಲಿ ನಗರದಲ್ಲಿ ಅಳವಡಿಸಲಾಗಿದ್ದ ಟಿಪ್ಪು ಕಟೌಟ್‌ಗೆ ಪಾಕ್‌ ಹಾಡು ಹಾಕಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುವ ಮೂಲಕ ತೀವ್ರ ವಿವಾದದ ನಡುವೆ ಬುಧವಾರ ಸಹಸ್ರಾರು ಮಂದಿ ಮುಸ್ಲಿಂ ಸಮುದಾಯದವರು ನಗರದ ಪ್ರಮುಖ ಬೀದಿಗಳಲ್ಲಿ ಬೃಹತ್ ಮೆರವಣಿಗೆ ನಡೆಸುವ ಮೂಲಕ ಶಾಂತಿಯುತವಾಗಿ ಮಹಮ್ಮದ್ ಪೈಗಂಬರ್ ಜನ್ಮದಿನ ಆಚರಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಈದ್‌ ಮಿಲಾದ್‌ ಹಿನ್ನೆಲೆಯಲ್ಲಿ ನಗರದಲ್ಲಿ ಅಳವಡಿಸಲಾಗಿದ್ದ ಟಿಪ್ಪು ಕಟೌಟ್‌ಗೆ ಪಾಕ್‌ ಹಾಡು ಹಾಕಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುವ ಮೂಲಕ ತೀವ್ರ ವಿವಾದದ ನಡುವೆ ಬುಧವಾರ ಸಹಸ್ರಾರು ಮಂದಿ ಮುಸ್ಲಿಂ ಸಮುದಾಯದವರು ನಗರದ ಪ್ರಮುಖ ಬೀದಿಗಳಲ್ಲಿ ಬೃಹತ್ ಮೆರವಣಿಗೆ ನಡೆಸುವ ಮೂಲಕ ಶಾಂತಿಯುತವಾಗಿ ಮಹಮ್ಮದ್ ಪೈಗಂಬರ್ ಜನ್ಮದಿನ ಆಚರಿಸಿದರು.

ನಗರದ ವಿವಿಧ ಬಡಾವಣೆಗಳಲ್ಲಿ ವಾಸಿಸುತ್ತಿರುವ ಮುಸ್ಲಿಂ ಸಮುದಾಯದವರು ಅಂಡೇಛತ್ರಕ್ಕೆ ಬಂದು ಸೇರಿದರು. ಅಲ್ಲಿಂದ ಮೆರವಣಿಗೆ ಹೊರಟು ಮಹಾತ್ಮಗಾಂಧಿ ರಸ್ತೆಯಲ್ಲಿ ಸಾಗಿ, ಪ್ರಧಾನ ಅಂಚೆ ಕಚೇರಿ ರಸ್ತೆಯ ಮೂಲಕ ತೆರಳಿ ಐ.ಜಿ. ರಸ್ತೆಗೆ ಬಂದು ಅಲ್ಲಿಂದ ಹನುಮಂತಪ್ಪ ವೃತ್ತ ಬಳಸಿ ಮತ್ತೆ ಅಂಡೇ ಛತ್ರದಲ್ಲಿ ಮೆರವಣಿಗೆಯನ್ನು ಅಂತ್ಯಗೊಳಿಸಿದರು.

ಈದ್‌ಮಿಲಾದ್ ಅಂಗವಾಗಿ ನಗರದ ಪ್ರಮುಖ ವೃತ್ತ ಮತ್ತು ಕೆಲವು ಬಡಾವಣೆಗಳನ್ನು ಹಸಿರು ಬಣ್ಣಗಳಿಂದ ಅಲಂಕರಿಸಲಾಗಿತ್ತು. ಮೆರವಣಿಗೆ ಮೊದಲು ಯುವಕರು ಬಿದಿರಿನಕೋಲು ಮತ್ತು ಪೈಪ್‌ಗಳಿಗೆ ಹಸಿರುಬಾವುಟಗಳನ್ನು ಕಟ್ಟಿಕೊಂಡು ಬೈಕ್‌ನಲ್ಲಿ ಸುತ್ತುವ ಮೂಲಕ ಸಾರ್ವಜನಿಕರ ಗಮನ ಸೆಳೆದರು. ಸ್ನೇಹಿತರು, ಆತ್ಮೀಯರು, ಸಂಬಂಧಿಗಳು ಒಬ್ಬರನ್ನೊಬ್ಬರು ಅಪ್ಪಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು.

ಅಂಡೇಛತ್ರವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು. ಮೆರವಣಿಗೆ ಹೊರಡು ಸ್ಥಳದ ಮುಂಭಾಗದಲ್ಲಿ ಸ್ವಾಗತ ಕಮಾನುಗಳನ್ನು ಹೂವುಗಳಿಂದ ಅಲಂಕರಿಸಲಾಗಿತ್ತು. ಮೆರವಣಿಗೆ ಸಾಗುವ ರಸ್ತೆಯಲ್ಲಿ ಹಸಿರು ಬಾವುಟಗಳನ್ನು ಕಟ್ಟಲಾಗಿತ್ತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಯುವಕರು ಪ್ರವಾದಿ ಮಹ್ಮದ್ ಅವರ ಪರವಾಗಿ ಜಯಕಾರ ಕೂಗಿದರು.

ಮೆರವಣಿಗೆಯಲ್ಲಿ ಹಸಿರು ಬಾವುಟಗಳು ಹಾರಾಡಿದವು. ಯುವಕರು ರಸ್ತೆಯ ಮಧ್ಯಭಾಗದಲ್ಲಿ ನಿಂತು ಕೋಲಿಗೆ ಸಿಕ್ಕಿಸಿದ್ದ ಬಾವುಟಗಳನ್ನು ಬುಗಬುಗನೆ ತಿರುಗಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹೊಸ ಬಟ್ಟೆಗಳನ್ನು ಧರಿಸಿದ್ದ ಸಾವಿರಾರು ಮಂದಿ ಪುರುಷರು ಬಾಲಕರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಕೆಲವರು ಈದ್‌ಮಿಲಾದ್ ಅಂಗವಾಗಿ ಮೆರವಣಿಗೆ ಸಾಗುವಾಗ ಹಾಡುಗಳನ್ನು ಹಾಡುತ್ತಿದ್ದ ದೃಶ್ಯ ಕಂಡುಬಂತು.

ಮಹ್ಮದ್ ಪೈಗಂಬರ್ ಜನ್ಮದಿನದ ಅಂಗವಾಗಿ ನಗರದಲ್ಲಿ ನಡೆದ ಬೃಹತ್ ಮೆರವಣಿಗೆ ಶಾಂತಿ ಯುತವಾಗಿ ಮುಕ್ತಾಯಗೊಂಡಿತು.

ಪೊಲೀಸ್‌ ಭದ್ರತೆ: ಪಾಕ್‌ ಹಾಡು ವಿವಾದದ ಹಿನ್ನೆಲೆಯಲ್ಲಿ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆಯಿಂದ ನಗರದ ಪ್ರಮುಖ ವೃತ್ತ, ರಸ್ತೆ, ಸೂಕ್ಷ್ಮ ಸ್ಥಳ ಹಾಗೂ ಈದ್‌ ಮಿಲಾದ್‌ ಮೆರವಣಿಗೆ ಸಾಗುವ ಮಾರ್ಗದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸ್‌ ಭದ್ರತೆ ವ್ಯವಸ್ಥೆ ಮಾಡಲಾಗಿತ್ತು.

ತಿರಂಗಾ ಯಾತ್ರೆ ಮುಂದೂಡಿಕೆ

ಚಿಕ್ಕಮಗಳೂರಿನಲ್ಲಿ ಟಿಪ್ಪು ಕಟೌಟ್‌ಗೆ ಪಾಕಿಸ್ತಾನದ ಹಾಡು ಹಾಕಿದ್ದ ಪ್ರಕರಣವನ್ನು ಖಂಡಿಸಿ ಹಿಂದೂ ಹಿತರಕ್ಷಣಾ ವೇದಿಕೆ ವತಿಯಿಂದ ಚಿಕ್ಕಮಗಳೂರಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಿರಂಗಾ ಯಾತ್ರೆಯನ್ನು ತಾತ್ಕಾಲಿಕವಾಗಿ ಮುಂದೂಡಿದೆ.

ತಿರಂಗಾ ಯಾತ್ರೆಗೆ ಪೊಲೀಸರು ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಯಾತ್ರೆ ಮುಂದೂಡಲಾಗಿದೆ. ಹಿಂದೂ ಸಂಘಟನೆಗಳ ಬೇಡಿಕೆಗಳನ್ನು ವಾರದೊಳಗೆ ಈಡೇರಿಸುವುದಾಗಿ ಪೊಲೀಸರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಟಿಪ್ಪು ಕಟೌಟ್‌ಗೆ ಪಾಕ್ ಹಾಡು ಹಾಕಿದವರು ಹಾಗೂ ಹಾಡನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮತ್ತು ಲೈಕ್ ಮಾಡಿದವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಸಂಘಟನೆಗಳು ಆಗ್ರಹಿಸಿವೆ.

ವಾರದೊಳಗೆ ಬೇಡಿಕೆಗಳನ್ನು ಈಡೇರಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಹೋರಾಟ ನಡೆಸುವುದಾಗಿ ಸಂಘಟನೆಗಳು ಎಚ್ಚರಿಕೆ ನೀಡಿವೆ. ಅಗತ್ಯಬಿದ್ದರೆ ಚಿಕ್ಕಮಗಳೂರು ನಗರದಲ್ಲಿ ಬೃಹತ್ ತಿರಂಗಾ ಯಾತ್ರೆ ನಡೆಸುವುದಾಗಿಯೂ ತಿಳಿಸಿವೆ.

ಪೊಲೀಸರ ಸಂಧಾನ ಯಶಸ್ವಿ

ಟಿಪ್ಪು ಕಟೌಟ್‌ಗೆ ಪಾಕ್‌ ಹಾಡು ಹಾಕಿದವರ ಮತ್ತು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮತ್ತು ಲೈಕ್‌ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಚಿಕ್ಕಮಗಳೂರಿನ ಹಿಂದೂ ಹಿತ ರಕ್ಷಣಾ ವೇದಿಕೆ ಈದ್‌ ಮಿಲಾದ್‌ ಹಬ್ಬದ ಮೆರವಣಿಗೆಯ ದಿನವಾದ ಬುಧವಾರವೇ ತಿರಂಗಾ ಯಾತ್ರೆ ನಡೆಸುವುದಕ್ಕೆ ಮುಂದಾಗಿದ್ದರು.

ಈದ್‌ ಮಿಲಾದ್‌ ಮೆರವಣಿಗೆ ದಿನವೇ ತಿರಂಗಾ ಯಾತ್ರೆ ಹಮ್ಮಿಕೊಳ್ಳುವುದರಿಂದ ಅಹಿತಕರ ಘಟನೆ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಮಂಗಳವಾರ ಸಂಜೆ ಮುಸ್ಲಿಂ ಮುಖಂಡರು ಹಾಗೂ ಹಿಂದೂ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳೊಂದಿಗೆ ಸಂಧಾನ ಸಭೆ ನಡೆಸಿದ್ದರು. ಸಭೆ ಯಶಸ್ವಿಯಾದ ಹಿನ್ನೆಲೆಯಲ್ಲಿ ತಿರಂಗ ಯಾತ್ರೆ ಮುಂದೂಡಲಾಗಿದೆ. ಪೊಲೀಸ್‌ ಇಲಾಖೆಯ ಸಂಧಾನ ಯಶಸ್ವಿಯಾಗಿದೆ.

ಟಿಪ್ಪು ಕಟೌಟ್ ಬಳಿಯೇ ‘ಐ ಲವ್ ಮಹಮ್ಮದ್’ ಬ್ಯಾನರ್!

ಟಿಪ್ಪು ಕಟೌಟ್‌ಗೆ ಪಾಕಿಸ್ತಾನಿ ಹಾಡು ಹಾಕಿರುವ ವಿಡಿಯೋ ವೈರಲ್ ಆಗಿ ವಿವಾದಕ್ಕೆ ಕಾರಣವಾಗಿರುವ ಬೆನ್ನಲ್ಲೇ ಚಿಕ್ಕಮಗಳೂರು ನಗರದಲ್ಲಿ ಮತ್ತೊಂದು ವಿವಾದ ತಲೆದೋರಿದೆ.ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆಯಲ್ಲಿ ನಗರದ ಟಿಪ್ಪು ನಗರದಲ್ಲಿ ‘ಐ ಲವ್ ಮಹಮ್ಮದ್’ ಎಂಬ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ. ವಿಶೇಷವೆಂದರೆ, ಈ ಹಿಂದೆ ಹಾಡಿನ ವಿವಾದಕ್ಕೆ ಕಾರಣವಾಗಿದ್ದ ಟಿಪ್ಪು ಕಟೌಟ್ ಬಳಿಯೇ ಬ್ಯಾನರ್ ಅಳವಡಿಸಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ.

ಕಳೆದ ವರ್ಷ ಈದ್ ಮಿಲಾದ್ ಸಂದರ್ಭದಲ್ಲಿ ಉತ್ತರ ಪ್ರದೇಶದ ಕಾನ್ಪುರದಿಂದ ಆರಂಭವಾಗಿದ್ದ ‘ಐ ಲವ್ ಮಹಮ್ಮದ್’ ಬ್ಯಾನರ್ ವಿವಾದ ದೇಶದ ವಿವಿಧೆಡೆ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಅದೇ ರೀತಿಯ ಬ್ಯಾನರ್ ಚಿಕ್ಕಮಗಳೂರಿನಲ್ಲಿ ಕಾಣಿಸಿಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ಕುತೂಹಲ ಹಾಗೂ ಚರ್ಚೆಗೆ ಕಾರಣವಾಗಿದೆ.

ಟಿಪ್ಪು ಕಟೌಟ್ ವಿವಾದದ ಬೆನ್ನಲ್ಲೇ ‘ಐ ಲವ್ ಮಹಮ್ಮದ್’ ಬ್ಯಾನರ್ ಅಳವಡಿಕೆಯಾಗಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಮತ್ತೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿರಾದಲ್ಲಿ ಸಂಭ್ರಮದ ಈದ್ ಮಿಲಾದ್ ಮೆರವಣಿಗೆ
ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಸಹಾಯ ಹಸ್ತ