ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ಶಿಕ್ಷಣಕ್ಕಾಗಿ ಹಳ್ಳಿಗಳಿಂದ ತಾಲ್ಲೂಕು ಕೇಂದ್ರಕ್ಕೆ ಬರುವ ಗ್ರಾಮಾಂತರ ಮಕ್ಕಳ ಅನುಕೂಲಕ್ಕೆ ಇನ್ನೂ ಎಂಟು ಬಸ್‌ಗಳನ್ನು ನೀಡಲಾಗುವುದು ಎಂದು ಶಾಸಕ ಡಾ. ಎಂ. ಚಂದ್ರಪ್ಪ ಭರವಸೆ ನೀಡಿದರು.ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಸಂವಿಧಾನಸೌಧದಲ್ಲಿ ಬುಧವಾರ ಏರ್ಪಡಿಸಲಾಗಿದ್ದ 2025-26 ನೇ ಸಾಲಿನ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ತಾಲೂಕಿನ ಪ್ರೌಢಶಾಲೆಗಳ 10ನೇ ತರಗತಿ ಪ್ರತಿ ಶಾಲೆಯ ಟಾಪ್ ಟೆನ್ ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ನಿವಾರಿಸಿ ಪ್ರತಿ ವಿಷಯದಲ್ಲಿ ನೂರು ಅಂಕಗಳನ್ನು ಗಳಿಸುವ ಗುರಿಯೊಂದಿಗೆ ಹಮ್ಮಿಕೊಳ್ಳಲಾಗಿದ್ದ ಸಂವಾದ ಉದ್ಘಾಟಿಸಿ ಮಾತನಾಡಿದರು.
ನಾನು ಈಗ ಹೇಳುತ್ತಿರುವ ಮಾತು ಕೇವಲ ಭರವಸೆಯಲ್ಲ. ಈ ಕಾರ್ಯವನ್ನು ಬರುವ ೧೫ ದಿನಗಳ ಒಳಗಾಗಿ ಮಾಡುವೆ. ಈ ಬಸ್‌ನಲ್ಲಿ ಪ್ರಯಾಣಿಸುವ ಮಕ್ಕಳು ಉಚಿತವಾಗಿ ಓಡಾಡಬಹುದು. ಬಸ್ಸಿನ ಡೀಸೆಲ್, ಚಾಲಕರ ವೇತನ ಮುಂತಾದುಗಳನ್ನು ವೈಯುಕ್ತಿಕ ಹಣದಿಂದಲೇ ನಿಭಾಯಿಸುವೆ ಎಂದರು.ಇಡೀ ರಾಜ್ಯದಲ್ಲಿ ಶಾಸಕರೊಬ್ಬರು ಮಕ್ಕಳ ಶಿಕ್ಷಣಕ್ಕೆ ಇಂತಹ ಸೌಲಭ್ಯವನ್ನು ಇದುವರೆಗೂ ಮಾಡಿಲ್ಲ. ಆದರೆ ಹೊಳಲ್ಕೆರೆ ಕ್ಷೇತ್ರದ ಶಾಸಕನಾದ ನನಗೆ ಅಲ್ಲಲ್ಲಿ ಪೋಷಕರು ಮತ್ತು ಮಕ್ಕಳಿಂದ ಬೇಡಿಕೆ ಬಂದಿದ್ದರಿಂದ ಈ ಕೆಲಸಕ್ಕೆ ಮುಂದಾಗಿರುವೆ. ಇದರಿಂದ ತಾಲ್ಲೂಕಿನಲ್ಲಿ ಶೈಕ್ಷಣಿಕ ಅಭಿವೃದ್ಧಿ ಆಗಿರುವುದು ಕಂಡು ಬರುತ್ತಿದೆ ಎಂದರು. ಹೊಳಲ್ಕೆರೆ ಪಟ್ಟಣದಲ್ಲಿನ ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಕಡಿಮೆ ಸಂಖ್ಯೆಯಿಂದ ನರಳುತ್ತಿತ್ತು. ಈ ರೀತಿ ಬಸ್ ಸೌಲಭ್ಯ ನೀಡಿದ ಮೇಲೆ ಅಲ್ಲಿ ಮಕ್ಕಳ ಪ್ರವೇಶಕ್ಕೆ ಬೇಡಿಕೆ ಜಾಸ್ತಿಯಾಗಿದೆ. ಶಾಲೆಯಲ್ಲಿ ಈಗ ಸಾವಿರಾರು ಮಕ್ಕಳು ಓದುತ್ತಿದ್ದಾರೆ ಎಂದರು.
ಸರ್ಕಾರವು ಶಾಲೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆ ಮಧ್ಯಾಹ್ನದ ಬಿಸಿಯೂಟ, ಬಾಳೆಹಣ್ಣು, ಮೊಟ್ಟೆ, ಪಠ್ಯಪುಸ್ತಕ, ಲ್ಯಾಪ್‍ಟಾಪ್, ಶೂ, ಮುಂತಾದವುಗಳನ್ನು ನೀಡುತ್ತಿದೆ. ಇವುಗಳನ್ನು ಬಳಸಿಕೊಂಡು ಮಕ್ಕಳು ಉನ್ನತ ಜ್ಞಾನ ಸಾಧನೆಯತ್ತ ಗಮನ ನೀಡಬೇಕು ಎಂದರು.10ನೇ ತರಗತಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಗಳಿಸುವ ವಿದ್ಯಾರ್ಥಿಗಳಿಗೆ 50 ಸಾವಿರ ರು. ಬಹುಮಾನ ನೀಡುವುದಾಗಿ ಘೋಷಿಸಿದ್ದೆ. ಅದರಂತೆ ಆ.15 ಸ್ವಾತಂತ್ರ್ಯ ದಿನಾಚರಣೆಯಂದು ಇಬ್ಬರು ವಿದ್ಯಾರ್ಥಿಗಳಿಗೆ ತಲಾ ಐವತ್ತು ಸಾವಿರ ರೂ. ನೀಡಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ 625 ಕ್ಕೆ 625 ಅಂಕಗಳನ್ನು ಗಳಿಸುವ ವಿದ್ಯಾರ್ಥಿಗಳಿಗೆ 1 ಲಕ್ಷ ರು. ಬಹುಮಾನ ನೀಡುವುದಾಗಿ ತಿಳಿಸಿದರು. 10ನೇ ತರಗತಿ ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯದಲ್ಲಿಯೇ ಅತಿ ಹೆಚ್ಚಿನ ಅಂಕ ಗಳಿಸಿರುವ ತಾಲೂಕು ಹೊಳಲ್ಕೆರೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಬೇಕು.
ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನ ನೀಡಿ ತಂದೆ-ತಾಯಿ, ಗುರು ಹಿರಿಯರು, ಓದಿದ ಶಾಲೆಗೆ ಗೌರವ ತರುವಂತೆ ಶಾಸಕ ಡಾ.ಎಂ.ಚಂದ್ರಪ್ಪ ಮಕ್ಕಳಲ್ಲಿ ಮನವಿ ಮಾಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್, ಪ್ರಾಥಮಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಪ್ರಸನ್ನಕುಮಾರ್, ನಾಗಭೂಷಣ್, ಲೋಕೇಶ್, ವೆಂಕಟೇಶ್ ಪ್ರಶಾಂತ್, ಶೇರ್‍ಆಲಿ, ಸುರೇಂದ್ರನಾಥ್, ಮಂಜುನಾಥ, ಮೋಹನ್‍ಕುಮಾರ್ ಹಾಗೂ ವಿದ್ಯಾರ್ಥಿಗಳು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.