ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ । 2024-25ನೇ ಸಾಲಿನ ಆಯವ್ಯಯ ಓದಿದ ಆಡಳಿತಾಧಿಕಾರಿ ಬಸವರೆಡ್ಡಪ್ಪ ರೋಣದ
ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಬುಧವಾರ ಪಪಂ ಆಡಳಿತಾಧಿಕಾರಿ ಬಸವರೆಡ್ಡಪ್ಪ ರೋಣದ 2024-25 ನೇ ಸಾಲಿಗೆ 8.85 ಲಕ್ಷ ರು. ಉಳಿತಾಯ ಬಜೆಟ್ ಮಂಡಿಸಿದರು.
ಆರಂಭಿಕ ಮೊತ್ತ 7.76 ಲಕ್ಷ ರು.ಸೇರಿದಂತೆ 24.49 ಕೋಟಿ ರು. ಆದಾಯ ನಿರೀಕ್ಷಿಸಿದ್ದು 24.40 ಕೋಟಿ ರು. ವೆಚ್ಚ ತೋರಿಸಲಾಗಿದೆ. ಆದಾಯದಲ್ಲಿ ಆಸ್ತಿ ತೆರಿಗೆಯಿಂದ 1.25 ಕೋಟಿ ರು. ಮಳಿಗೆ ಬಾಡಿಗೆ 46.75ಲಕ್ಷ ರು, ನೀರು ಸರಬರಾಜು ಶುಲ್ಕ 45 ಲಕ್ಷ ರು, ಅಭಿವೃದ್ಧಿ ಶುಲ್ಕ 75 ಲಕ್ಷ ರು, ಸಂತೆ ಸುಂಕ, ಕೋಳಿ, ಮಾಂಸ, ಮೀನು ಮಾರಾಟದ ಅಂಗಡಿಗಳ ಹರಾಜಿನಿಂದ 18 ಲಕ್ಷ ರು. ಹಾಗೂ ಸರ್ಕಾರದಿಂದ 15.29 ಕೋಟಿ ರು. ಸೇರಿ ವಿವಿಧ ಅನುದಾನ ನಿರೀಕ್ಷಿಸಲಾಗಿದೆ. ಪಪಂ ವಾಣಿಜ್ಯ ಮಳಿಗೆ ದುರಸ್ತಿಗೆ 85 ಲಕ್ಷ ರು., ಬೀದಿ ದೀಪ ನಿರ್ವಹಣೆಗೆ 15 ಲಕ್ಷ ರು, ಚರಂಡಿ,ರಸ್ತೆ ಹಾಗೂ ಯಂತ್ರಗಳ ದುರಸ್ಥಿಗೆ 50 ಲಕ್ಷ ರು, ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 24.40 ಲಕ್ಷ ರು. ವೆಚ್ಚ ತೋರಿಸಲಾಗಿದೆ.ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಸದಸ್ಯೆ ಎಚ್.ಎಸ್.ರಶ್ಮಿ, ಬಜೆಟ್ ಕಳೆದ ಸಾಲಿನ ನಕಲಾಗಿದೆ. ಮುಂಗಡ ಪತ್ರದಲ್ಲಿ ಹೊಸದೇನೂ ಇಲ್ಲ, ಅಭಿವೃದ್ಧಿ ಕಾಮಗಾರಿಗಳಿಗೆ ದೊಡ್ಡ ಮೊತ್ತದ ಹಣ ಮೀಸಲಿರಿಸಿರುವುದಾಗಿ ತೋರಿಸಲಾಗುತ್ತಿದೆ. ಆದರೆ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ, ಕಳೆದ ಬಾರಿಯೂ ವಾಣಿಜ್ಯ ಮಳಿಗೆ ದುರಸ್ತಿಗೆ 85 ಲಕ್ಷ ರು. ಹಣ ಇಡಲಾಗಿತ್ತು. ಆದರೆ ಯಾವ ಮಳಿಗೆಯೂ ದುರಸ್ತಿ ಕಂಡಿಲ್ಲ, ಬಜೆಟ್ ಕೇವಲ ಅಕ್ಷರ ರೂಪಷ್ಟೇ ಸೀಮಿತ, ಪಟ್ಟಣ ಅಭಿವೃದ್ಧಿಯಲ್ಲಿ ಹಿಂದಕ್ಕೆ ಸಾಗುತ್ತಿದೆ ಎಂದು ಆರೋಪಿಸಿದರು.
ಈ ಕುರಿತು ಗಮನ ಹರಿಸಿ ಕ್ರಮ ಕೈಗೊಳ್ಳುವಂತೆ ಆಡಳಿತಾಧಿಕಾರಿ ಬಸವರೆಡ್ಡಪ್ಪ ರೋಣದ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.
ವಾಣಿಜ್ಯ ಮಳಿಗೆಗಳು ಪಪಂ ಆದಾಯದ ಪ್ರಮುಖ ಮೂಲವಾಗಿದೆ. ಇದರ ಹರಾಜು ಪ್ರಕ್ರಿಯೆ ನಡೆಸಲು ಅಧಿಕಾರಿಗಳು ನಿರ್ಲಕ್ಷ ತೋರುತ್ತಿದ್ದಾರೆ ಎಂದು ಸದಸ್ಯ ಪ್ರದೀಪ್ ಕುಮಾರ್ ಆರೋಪಿಸಿದರು.