)ಮುನಿಯಾಲು ಗೋಧಾಮದಲ್ಲಿ 19ರಿಂದ ಏಕಪವಿತ್ರ ನಾಗಮಂಡಲೋತ್ಸವ

KannadaprabhaNewsNetwork |  
Published : Feb 10, 2026, 03:00 AM IST
ಶಾಸಕ ಯಶ್‌ಪಾಲ್ ಸುವರ್ಣ ಅಧಿಕಾರಿಗಳೊಂದಿಗೆ ಬಜೆ ಅಣೆಕಟ್ಟೆಗೆ ಭೇಟಿ ನೀಡಿ ನೀರಿನ ಮಟ್ಟವನ್ನು ಪರಿಶೀಲಿಸಿದರು    | Kannada Prabha

ಸಾರಾಂಶ

ಮುನಿಯಾಲು ಗೋಧಾಮದಲ್ಲಿ ಫೆ. 19ರಿಂದ 21ರವರೆಗೆ ಏಕಪವಿತ್ರ ನಾಗಮಂಡಲೋತ್ಸವವು ‘ಪ್ರಕೃತಿಯೊಂದಿಗೆ ಅಮರ ಪ್ರಕೃತಿ’ ಎಂಬ ಪರಿಕಲ್ಪನೆಯಲ್ಲಿ ಜರುಗಲಿದೆ ಎಂದು ಉದ್ಯಮಿ ರಾಮಕೃಷ್ಣ ಆಚಾರ್ ಹೇಳಿದರು.

ಕಾರ್ಕಳ: ಮುನಿಯಾಲು ಗೋಧಾಮದಲ್ಲಿ ಫೆ. 19ರಿಂದ 21ರವರೆಗೆ ಏಕಪವಿತ್ರ ನಾಗಮಂಡಲೋತ್ಸವವು ‘ಪ್ರಕೃತಿಯೊಂದಿಗೆ ಅಮರ ಪ್ರಕೃತಿ’ ಎಂಬ ಪರಿಕಲ್ಪನೆಯಲ್ಲಿ ಜರುಗಲಿದೆ ಎಂದು ಉದ್ಯಮಿ ರಾಮಕೃಷ್ಣ ಆಚಾರ್ ಹೇಳಿದರು. ಮುನಿಯಾಲು ಗೋಧಾಮದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಪವಿತ್ರ ಕಾರ್‍ಯಕ್ಕೆ ಪೂರ್ವಭಾವಿಯಾಗಿ, ದೈವಚಿತ್ತದಂತೆ ಪ್ರಕೃತಿಯ ರಕ್ಷಕನಾದ ನಾಗದೇವರ ಆಶೀರ್ವಾದವನ್ನು ಪಡೆಯುವ ಹಾಗೂ ಸನಾತನ ಸಂಸ್ಕೃತಿಯ ಮೂಲಭೂತ ತತ್ವವಾದ ಪ್ರಕೃತಿ ಸಂರಕ್ಷಣೆಯ ಸಂದೇಶವನ್ನು ಸಮಾಜಕ್ಕೆ ತಲುಪಿಸುವ ಉದ್ದೇಶದಿಂದ ಅತ್ಯಂತ ಶುದ್ಧ ಮತ್ತು ಪವಿತ್ರ ನಾಗಮಂಡಲ ಸೇವೆಯನ್ನು ನೆರವೇರಿಸಲು ಸಂಕಲ್ಪಿಸಲಾಗಿದೆ ಎಂದು ಹೇಳಿದರು.ಗೋಧಾಮದಲ್ಲಿ ನಡೆಯುವ ಈ ವಿಶಿಷ್ಟ ನಾಗಮಂಡಲವು ಸಂಪೂರ್ಣವಾಗಿ ಪ್ರಕೃತಿ ಸ್ನೇಹಿ ವಿಧಾನದಲ್ಲಿ ರೂಪುಗೊಳ್ಳಲಿದೆ. ಭೂಮಿಯನ್ನು ಉಳುಮೆ ಮಾಡಿ, ಮಣ್ಣು ಹದಮಾಡಿ, ಬೀಜ ಬಿತ್ತನೆ ಹಾಗೂ ಹಸುಗಳನ್ನು ಮೇಯಿಸುವ ಮೂಲಕ ಶುದ್ಧ ಭೂಮಿ ಸೃಷ್ಟಿಸಲಾಗುತ್ತದೆ. ನಾಗಮಂಡಲ ರಚನೆಗೆ ರಾಸಾಯನಿಕ ರಹಿತ ಬಣ್ಣಗಳನ್ನು ಮಾತ್ರ ಬಳಸಲಾಗುತ್ತಿದ್ದು, ಅಕ್ಕಿಪುಡಿ, ಅರಿಶಿನ, ಸುಣ್ಣ, ಎಲೆಪುಡಿ ಹಾಗೂ ಹೊಟ್ಟು ಸುಟ್ಟು ತಯಾರಿಸಿದ ಐದು ಶುದ್ಧ ಬಣ್ಣಗಳನ್ನೇ ಉಪಯೋಗಿಸಲಾಗುತ್ತದೆ. ಮಂಟಪದ ಅಲಂಕಾರಕ್ಕೆ ದೊಂದಿ ಮತ್ತು ತೈಲದ ದೀಪಗಳನ್ನು ಬಳಸಿ, ದೇವರಿಗೆ ನೆರಳು ಬೀಳದಂತೆ ಶುದ್ಧ ಆರಾಧನಾ ವಿಧಾನವನ್ನು ಪಾಲಿಸಲಾಗುತ್ತದೆ. ಶಬ್ದಮಾಲಿನ್ಯ ತಪ್ಪಿಸುವ ಉದ್ದೇಶದಿಂದ ಗೋವು, ಪ್ರಾಣಿ ಮತ್ತು ಪಕ್ಷಿಗಳಿಗೆ ತೊಂದರೆಯಾಗದ ಮೃದು ಸಂಗೀತವನ್ನೇ ಬಳಸಲಾಗುತ್ತಿದ್ದು, ಶಂಖ, ತಾಳ ಮತ್ತು ನಾಗಸ್ವರಗಳ ಮೂಲಕ ಸೇವೆ ನಡೆಯಲಿದೆ.ಆಗಮಿಸುವ ಭಕ್ತಾದಿಗಳಿಗೆ ಮಹಾ ಅನ್ನಸಂತರ್ಪಣೆ ಏರ್ಪಡಿಸಲಾಗುತ್ತದೆ. ಇದರೊಂದಿಗೆ ಸುಬ್ರಹ್ಮಣ್ಯ ದೇವರ ಮೃತ್ತಿಕೆಯು ಸೇರಿದ ಮಣ್ಣಿನಿಂದ ತಯಾರಿಸಿದ ಬೀಜದುಂಡೆಗಳನ್ನು ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತಿದ್ದು, ಸುಮಾರು ಐದು ಸಾವಿರ ಬೀಜದುಂಡೆಗಳನ್ನು ಹಂಚುವ ಸಂಕಲ್ಪ ಕೈಗೊಳ್ಳಲಾಗಿದೆ. ಶ್ರೀ ನಾಗದೇವರಿಗೆ ಅತ್ಯಂತ ಪ್ರಿಯವಾದ ಹಿಂಗಾರವನ್ನು ಸಂಕೇತವಾಗಿ ಅರ್ಪಿಸಿ, ಸಾವಿರಕ್ಕೂ ಹೆಚ್ಚು ಸಸಿಗಳನ್ನು ವಿತರಿಸುವ ಮೂಲಕ ಪ್ರಕೃತಿ ಸಂರಕ್ಷಣೆಯ ಪ್ರತಿಜ್ಞೆಯನ್ನು ಭಕ್ತರಿಂದ ಪಡೆಯಲಾಗುತ್ತದೆ. ಈ ನಾಗಮಂಡಲ ಸೇವೆಯ ಮೂಲಕ ರೈತ ಗೌರವ, ಪ್ರಕೃತಿ ಸಂರಕ್ಷಣೆ ಮತ್ತು ಸನಾತನ ಸಂಸ್ಕೃತಿಯ ಮೌಲ್ಯಗಳನ್ನು ಒಂದೇ ದಾರಿಯಲ್ಲಿ ಜೋಡಿಸುವುದು ರೈತಪೀಠ ಹಾಗೂ ಗೋಧಾಮದ ಮೂಲ ಉದ್ದೇಶವಾಗಿದೆ ಎಂದರು. ಸಮಿತಿಯ ಪ್ರಧಾನ ಕಾರ್‍ಯದರ್ಶಿ ಶ್ರೀಕಾಂತ ಶೆಟ್ಟಿ ಮಾತನಾಡಿ, ಪ್ರಕೃತಿ ಆರಾಧನೆ ಹಾಗೂ ಅಭಿವೃದ್ಧಿ, ರಾಸಾಯನಿಕ ಮುಕ್ತ ಕೃಷಿ, ದೇಶೀಯ ಗೋವುಗಳ ಅಭಿವೃದ್ಧಿ, ಸವಯವ ಪದ್ಧತಿಯ ಬಳಕೆ ಮತ್ತು ಮರೆತು ಹೋಗುತ್ತಿರುವ ಸಾಂಸ್ಕೃತಿಕ ಮೌಲ್ಯಗಳ ಪುನರುಜ್ಜೀವನವೇ ಈ ಪ್ರಯತ್ನದ ಆಶಯವಾಗಿದೆ.

ಕೃಷಿಯಿಂದ ದೂರವಾಗುತ್ತಿರುವ ರೈತರ ಮಕ್ಕಳನ್ನು ಮತ್ತೆ ಕೃಷಿಯತ್ತ ಆಕರ್ಷಿಸುವ ನಿಟ್ಟಿನಲ್ಲಿ ರೈತಪೀಠ ಪ್ರಶಸ್ತಿಯನ್ನು ಆರಂಭಿಸಲಾಗುತ್ತಿದ್ದು, ದೇಶವ್ಯಾಪಿ ಆಯ್ಕೆಯ ಮೂಲಕ ಯುವ ಕೃಷಿಕರಿಗೆ ಒಂದು ಲಕ್ಷ ರು. ನಗದು ಬಹುಮಾನ ನೀಡಿ ಉತ್ತೇಜನ ನೀಡಲಾಗುವುದು ಎಂದು ತಿಳಿಸಿದರು. ರೈತರ ಶ್ರಮ ಮತ್ತು ತ್ಯಾಗವನ್ನು ಗುರುತಿಸುವ ಈ ಪ್ರಯೋಗಶೀಲ ಕಾರ್‍ಯಕ್ರಮವು ಗೋಧಾಮವನ್ನು ಒಂದು ಸಂಸ್ಕೃತಿ ಪಾಠಶಾಲೆಯಂತೆ ರೂಪಿಸುವ ಪ್ರಯತ್ನವಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ರಕ್ಷತ್ ಆಚಾರ್ ಹಾಗೂ ದೇವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಶಾಲೆ ಅಭಿವೃದ್ಧಿಯಾದರೆ ಗ್ರಾಮ ವಿಕಾಸ: ಡಾ. ಹೆಗ್ಗಡೆ
ಕೊಣಂಜಗೇರಿ ಗ್ರಾ.ಪಂ. ನೂತನ ಕಟ್ಟಡದ ಉದ್ಘಾಟನೆ