
ಜಮೀನು ವಿವಾದ ಬಗೆಹರಿಯದಿದ್ದರೆ ಆತ್ಮಹತ್ಯೆ ಎಚ್ಚರಿಕೆ
ಹೆಬ್ಬೆಟ್ಟು ಗುರುತು ತಾಳೆಯಾಗದೆ ನಾಲ್ಕೈದು ತಿಂಗಳಿಂದ ಪಡಿತರ ಸಿಗದೆ ಪರದಾಡುತ್ತಿರುವ ವೃದ್ಧೆ, ಸ್ವಾಧೀನದಲ್ಲಿದ್ದ ಜಮೀನನ್ನು ಬೇರೆಯವರಿಗೆ ಸಾಗುವಳಿಗೆ ನೀಡಿರುವುದರಿಂದ ನ್ಯಾಯಕ್ಕಾಗಿ ಅಲೆದಾಡುತ್ತಿರುವ ರೈತನ ಅಳಲು ಸೇರಿ ದಂತೆ ಹಲವು ಸಾರ್ವಜನಿಕ ಸಮಸ್ಯೆಗಳು ಪ್ರಜಾಸೇವಾ ಆಂದೋಲನದಲ್ಲಿ ಅನಾವರಣಗೊಂಡವು.ತಾಲೂಕಿನ ಕಸಬಾ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಶನಿವಾರ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ನಡೆಯಿತು.ತಿಮ್ಲಾಪುರದ ಗಂಗಮ್ಮ ಮಾತನಾಡಿ ಕಳೆದ ನಾಲ್ಕೈದು ತಿಂಗಳಿಂದ ಹೆಬ್ಬೆಟ್ಟು ಗುರುತು ತಾಳೆಯಾಗದ ಕಾರಣ ಪಡಿತರ ದೊರೆಯುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ತಹಸೀಲ್ದಾರ್ ಪೂರ್ಣಿಮಾ, ಹೆಬ್ಬೆಟ್ಟು ಗುರುತು ಹೊಂದಿಕೆ ಯಾಗದಿದ್ದರೂ ಪರ್ಯಾಯ ದಾಖಲೆಗಳನ್ನು ಪರಿಶೀಲಿಸಿ ಪಡಿತರ ವಿತರಿಸುವಂತೆ ಸೂಚಿಸಿದರು.ಲಿಂಗದಹಳ್ಳಿ ಮೂರ್ತಪ್ಪ ತಮ್ಮ ಸ್ವಾಧೀನಾನುಭವದಲ್ಲಿದ್ದ ಜಮೀನನ್ನು ಬೇರೆಯವರಿಗೆ ಸಾಗುವಳಿ ನೀಡಲಾಗಿದೆ. ಈ ಬಗ್ಗೆ ಹಲವು ಬಾರಿ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ನ್ಯಾಯ ಸಿಗದಿದ್ದರೆ ತಾಲೂಕು ಕಚೇರಿಗೆ ಬಂದು ಆತ್ಮಹತ್ಯೆ ಮಾಡಿ ಕೊಳ್ಳುವುದೊಂದೇ ದಾರಿ ಎಂದು ನೋವು ತೋಡಿಕೊಂಡರು. ಪ್ರಕರಣ ಸಮಗ್ರವಾಗಿ ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳುವುದಾಗಿ ತಹಸೀಲ್ದಾರ್ ಭರವಸೆ ನೀಡಿದರು.ಇದೇ ವೇಳೆ ತಾಲೂಕಿನ ಐತಿಹಾಸಿಕ ಶಾಸನ ಹಾಗೂ ಕಲಾಕೃತಿಗಳನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸುವ ಉದ್ದೇಶದಿಂದ ಜಾನಪದ ಯುವಸಿರಿ ಯುವಕ ಸಂಘಕ್ಕೆ ಐದು ಎಕರೆ ಜಾಗ ನೀಡುವಂತೆ ಡಾ.ಡಿ.ಆರ್.ಶ್ರೀನಿವಾಸ್ ಮನವಿ ಮಾಡಿದರು. ''''''''ನಮ್ಮ ಊರು ನಮ್ಮ ಬೇರು'''''''' ಕಾರ್ಯಕ್ರಮದಡಿ ಐತಿಹಾಸಿಕ ಕಲಾಕೃತಿಗಳ ಮಾಹಿತಿ ಸಂಗ್ರಹಿಸಲಾಗಿದೆ. ಕಸಬಾ ಹೋಬಳಿ ಯಲ್ಲಿ ಸೂಕ್ತ ಜಾಗ ಗುರುತಿಸಿ ಪ್ರಸ್ತಾವನೆ ಸಲ್ಲಿಸಿದರೆ ನಿಯಮಾನುಸಾರ ಕ್ರಮ ಕೈಗೊಳ್ಳುವುದಾಗಿ ಪೂರ್ಣಿಮಾ ತಿಳಿಸಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಸೀಲ್ದಾರ್ ಪೂರ್ಣಿಮಾ, ಪ್ರಜಾಸೇವಾ ಆಂದೋಲನದಲ್ಲಿ ಎಲ್ಲ ಇಲಾಖೆಗಳ ಅಧಿಕಾರಿ ಗಳು ಕಡ್ಡಾಯವಾಗಿ ಭಾಗವಹಿಸಿ ಜನರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಬೇಕು ಎಂದರು.ತಾಪಂ ಇಒ ಸಿ.ಆರ್.ಪ್ರವೀಣ್ ಮಾತನಾಡಿ ಪ್ರತಿ ಶನಿವಾರ ಜಿಲ್ಲಾ, ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಆಂದೋಲನ ನಡೆಯುತ್ತಿದ್ದು, ಪರಿಹಾರ ಸಾಧ್ಯವಾಗದ ಅರ್ಜಿಗಳ ಕುರಿತು ಕೈಗೊಂಡ ಕ್ರಮವನ್ನು ಅರ್ಜಿದಾರರಿಗೆ ತಿಳಿಸಲಾಗುತ್ತದೆ. ಭೂ ಗ್ಯಾರಂಟಿ ಯೋಜನೆಯಡಿ ಹಕ್ಕುಪತ್ರವಿಲ್ಲದ ಮನೆಗಳಿಗೆ ಆಸ್ತಿ ದಾಖಲೆ ನೀಡುವ ಅವಕಾಶವಿದೆ ಎಂದರು.ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಆಸಂದಿ ಕಲ್ಲೇಶ್, ಭೂ ಗ್ಯಾರಂಟಿ ಯೋಜನೆ ಪರಿಣಾಮಕಾರಿ ಅನುಷ್ಠಾ ನಕ್ಕೆ ಅಧಿಕಾರಿಗಳು ಆದ್ಯತೆ ನೀಡಬೇಕು ಎಂದರು. ಕೃಷಿ ಅಧಿಕಾರಿ ಶಿವಶಂಕರ್, ರಸಗೊಬ್ಬರ ಪಡೆಯಲು ಮೊಬೈಲ್ ಆಪ್ ಡಿ.1ರಿಂದ ಜಾರಿಗೆ ಬರಲಿದ್ದು, ಮುಂಗಾರು ವೈಫಲ್ಯದ ಹಿನ್ನೆಲೆಯಲ್ಲಿ ಕಡಿಮೆ ನೀರು ಬೇಡುವ ರಾಗಿ ತಳಿ ಪರಿಚಯಿಸಲಾಗಿದೆ ಎಂದು ತಿಳಿಸಿದರು.ಆಹಾರ ನಿರೀಕ್ಷಕ ಶ್ರೀನಿವಾಸ್, ಪ್ರತಿ ತಿಂಗಳು 7 ಕೆ.ಜಿ. ಅಕ್ಕಿ ಹಾಗೂ 3 ಕೆ.ಜಿ. ರಾಗಿ ವಿತರಿಸಲಾಗುತ್ತಿದೆ. ಹೊಸ ಪಡಿತರ ಚೀಟಿ ವಿತರಣೆ ಇಲ್ಲದಿದ್ದರೂ ಹೆಸರು ಸೇರ್ಪಡೆ, ವಿಳಾಸ ಬದಲಾವಣೆಗೆ ಅವಕಾಶವಿದೆ. ಸರ್ವರ್ ಸಮಸ್ಯೆಯಿಂದ ವಿತರಣೆ ಯಲ್ಲಿ ತೊಂದರೆಯಾಗುತ್ತಿದೆ ಎಂದರು.ಪಹಣಿ ತಿದ್ದುಪಡಿ ಹಾಗೂ ಅಲಿನೇಷನ್ ಪ್ರಕ್ರಿಯೆ ತಾಂತ್ರಿಕ ಸಮಸ್ಯೆಗಳ ಬಗ್ಗೆ ಅರ್ಜಿಗಳು ಸಲ್ಲಿಕೆಯಾದವು. ಬಿಸಿಎಂ ವಿಸ್ತರಣಾಧಿಕಾರಿ ದೇವರಾಜ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.