ಚಿಕ್ಕಮಗಳೂರುಕ್ರೀಡೆ ಕೇವಲ ದೈಹಿಕ ಆರೋಗ್ಯ ವೃದ್ಧಿಸುವುದಕ್ಕೆ ಸೀಮಿತವಾಗದೆ ದೇಶದ ಆರೋಗ್ಯಕ್ಕೂ ಸಹಕಾರಿ. ಎಲ್ಲಿ ಕ್ರೀಡಾ ಚಟುವಟಿಕೆ ಗಳು ಇರುತ್ತವೆಯೋ ಅಲ್ಲಿ ದುಶ್ಚಟಗಳಿಗೆ ಅವಕಾಶವಿರುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ.ರವಿ ಅಭಿಪ್ರಾಯಪಟ್ಟರು.
ನಗರದ ಸುಭಾಷ್ಚಂದ್ರ ಬೋಸ್ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕ್ರೀಡೆ ಕೇವಲ ದೈಹಿಕ ಆರೋಗ್ಯ ವೃದ್ಧಿಸುವುದಕ್ಕೆ ಸೀಮಿತವಾಗದೆ ದೇಶದ ಆರೋಗ್ಯಕ್ಕೂ ಸಹಕಾರಿ. ಎಲ್ಲಿ ಕ್ರೀಡಾ ಚಟುವಟಿಕೆ ಗಳು ಇರುತ್ತವೆಯೋ ಅಲ್ಲಿ ದುಶ್ಚಟಗಳಿಗೆ ಅವಕಾಶವಿರುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ.ರವಿ ಅಭಿಪ್ರಾಯಪಟ್ಟರು.ನಗರದ ಸುಭಾಷ್ಚಂದ್ರ ಬೋಸ್ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಅಲ್ಪಸಂಖ್ಯಾತರ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಪಂ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಅಲ್ಪಸಂಖ್ಯಾತರ ವಸತಿ ಶಾಲಾ-ಕಾಲೇಜು ಮತ್ತು ಮೌಲಾನಾ ಆಜಾದ್ ಮಾದರಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.ವೈಯಕ್ತಿಕ ಸಾಮರ್ಥ್ಯದಷ್ಟೇ ತಂಡದ ಸಮನ್ವಯವೂ ಗೆಲುವಿಗೆ ಮುಖ್ಯ. ಕಬಡ್ಡಿಯಂತಹ ಆಟಗಳಲ್ಲಿ ಒಬ್ಬ ಆಟಗಾರ ಎಷ್ಟೇ ಸಮರ್ಥನಾಗಿದ್ದರೂ, ಇಡೀ ತಂಡ ಒಗ್ಗಟ್ಟಿನಿಂದ ಆಡಿದಾಗ ಮಾತ್ರ ಗೆಲುವು ಸಾಧ್ಯ. ಡಿವಿಜಿ ಅವರ ಮಂಕುತಿಮ್ಮನ ಕಗ್ಗದ ‘ಹೋರಾಡಿ ಬೀಳ್ವನ್ನ... ಹೋರಿಸತ್ವವ ಮೆರೆಸು ಮಂಕುತಿಮ್ಮ’ ಸಾಲುಗಳನ್ನು ಉಲ್ಲೇಖಿಸಿ ವಿದ್ಯಾರ್ಥಿಗಳು ಸೋಲು-ಗೆಲುವಿಗೆ ಅಂಜದೆ ಆತ್ಮಸ್ಥೈರ್ಯದಿಂದ ಮುನ್ನಡೆಯಬೇಕು ಎಂದರು.ಪಂಜಾಬ್ ಮತ್ತು ಹರಿಯಾಣ ಅಕ್ಕಪಕ್ಕದ ರಾಜ್ಯಗಳಾಗಿದ್ದರೂ, ಹರಿಯಾಣದ ಊರೂರುಗಳಲ್ಲಿ ಕ್ರೀಡಾ ಕ್ಲಬ್ಗಳಿವೆ. ಕ್ರೀಡಾ ರಾಜ್ಯವಾಗಿ ಗುರುತಿಸಿಕೊಂಡಿದೆ. ಆದರೆ, ಪಂಜಾಬ್ನಲ್ಲಿ ಕ್ರೀಡಾ ಚಟುವಟಿಕೆ ಕಡಿಮೆಯಾಗಿರುವುದರಿಂದ ಮಾದಕ ವ್ಯಸನದ ಸಮಸ್ಯೆ ಹೆಚ್ಚುತ್ತಿದೆ. ಯುವಜನರು ದುಶ್ಚಟಗಳಿಂದ ದೂರವಿರಲು ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಳ್ಳ ಬೇಕು ಎಂದು ಕಿವಿಮಾತು ಹೇಳಿದರು.ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಮಾತನಾಡಿ ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಲ್ಲಿ ಶಿಸ್ತು, ನಾಯಕತ್ವ ಗುಣ ಹಾಗೂ ತಂಡದೊಂದಿಗೆ ಬೆರೆತು ಕೆಲಸ ಮಾಡುವ ಮನೋಭಾವ ಬೆಳೆಯುತ್ತದೆ ಎಂದರು.ವಿದ್ಯಾರ್ಥಿಗಳು ಪಠ್ಯದ ಜತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ತೊಡಗಬೇಕು. ಕ್ರೀಡೆ ದೈಹಿಕ ಆರೋಗ್ಯ ಕಾಪಾಡುವ ಜತೆಗೆ ಮಾನಸಿಕ ಒತ್ತಡ ನಿವಾರಿಸುತ್ತದೆ. ವೈಯಕ್ತಿಕವಾಗಿ ಉತ್ತಮ ಅಂಕ ಗಳಿಸುವುದರಿಂದ ಉನ್ನತ ಹುದ್ದೆ ಪಡೆಯಬಹುದು. ಆದರೆ, ಸಮಾಜ ಮತ್ತು ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸಲು ಎಲ್ಲರೊಂದಿಗೆ ಹೊಂದಿಕೊಂಡು ಕೆಲಸ ಮಾಡುವ ಕೌಶಲ ಅಗತ್ಯ. ಇಂತಹ ಸಾಮಾಜಿಕ ಸಂವಹನ ಮತ್ತು ಸಂಘಟನಾ ಸಾಮರ್ಥ್ಯ ಕ್ರೀಡೆ ಬೆಳೆಸುತ್ತದೆ ಎಂದು ತಿಳಿಸಿದರು.ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಇದೇ ಮೊದಲ ಬಾರಿಗೆ ಜಿಲ್ಲಾ ಮಟ್ಟದ ಅಂತರ ಶಾಲಾ-ಕಾಲೇಜು ಕ್ರೀಡಾಕೂಟ ಆಯೋಜಿಸಿರುವುದು ಶ್ಲಾಘನೀಯ. ತರಗತಿ ನಾಲ್ಕು ಗೋಡೆಗಳ ನಡುವೆ ಸಿಗದ ಅನೇಕ ಜೀವನ ಪಾಠಗಳು ಕ್ರೀಡಾಂಗಣ ದಲ್ಲಿ ದೊರೆಯುತ್ತವೆ. ಮುಂದಿನ ದಿನಗಳಲ್ಲಿ ಪೊಲೀಸ್ ಕ್ರೀಡಾಕೂಟದ ಮಾದರಿಯಲ್ಲಿ ಪಥಸಂಚಲನದೊಂದಿಗೆ ಹೆಚ್ಚು ವ್ಯವಸ್ಥಿತವಾಗಿ ಕ್ರೀಡಾಕೂಟ ಆಯೋಜಿಸಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸೀಮಾ ಮಾತನಾಡಿ ಕ್ರೀಡೆಯಿಂದ ವಿದ್ಯಾರ್ಥಿಗಳಲ್ಲಿ ದೈಹಿಕ ಸಾಮರ್ಥ್ಯದ ಜತೆಗೆ ಶಿಸ್ತು, ಸಮಯಪ್ರಜ್ಞೆ, ಆತ್ಮವಿಶ್ವಾಸ ಮತ್ತು ತಂಡದ ಮನೋಭಾವ ಬೆಳೆಯುತ್ತದೆ. ಸೋಲು-ಗೆಲುವ ನ್ನು ಸಮಾನವಾಗಿ ಸ್ವೀಕರಿಸಿ, ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ಸೋಲನ್ನೇ ಯಶಸ್ಸಿನ ಮೆಟ್ಟಿಲಾಗಿಸಿಕೊಳ್ಳಬೇಕು. ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡುವವರು ವಿಭಾಗ ಹಾಗೂ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಜಿಲ್ಲೆಗೆ ಕೀರ್ತಿ ತರಬೇಕು ಎಂದರು.ವಸತಿ ಶಾಲೆಗಳ ಪ್ರಾಂಶುಪಾಲರಾದ ಸಂಧ್ಯಾ, ಸಂತೋಷ್, ಅವಿನಾಶ್, ತಿಮ್ಮಯ್ಯ, ಹರೀಶ್ ಸೇರಿದಂತೆ ವಿವಿಧ ಶಾಲಾ-ಕಾಲೇಜುಗಳ ಪ್ರಾಂಶುಪಾಲರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ತೀರ್ಪುಗಾರರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.