ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಮಹತ್ವದ ಸ್ಥಾನವಿದೆ ಎಂದು ನಿವೃತ್ತ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಎಫ್.ಡಿ.ಮೇಟಿ ಹೇಳಿದರು.ಪಟ್ಟಣದ ವಿರಕ್ತಮಠದಲ್ಲಿ ಗುರುಪೂರ್ಣಿಮೆ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಗುರು ಹಿರಿಯರನ್ನು ಗೌರವದಿಂದ ಕಾಣಬೇಕು ಎಂದು ಸಲಹೆ ನೀಡಿದರು.
ನಿವೃತ್ತ ಉಪಪ್ರಾಚಾರ್ಯ ಎಸ್.ಎಸ್.ಝಳಕಿ ಮಾತನಾಡಿ, ತಂದೆ-ತಾಯಿ ಗುರುಗಳ ಮಾರ್ಗದರ್ಶನದಲ್ಲಿ ಮಕ್ಕಳು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಇಂತಹ ಕಾರ್ಯಕ್ರಮದಲ್ಲಿ ಮಕ್ಕಳು ಭಾಗವಹಿಸುವ ಮೂಲಕ ಸಮಾಜದಲ್ಲಿ ಗುರುವಿನ ಸ್ಥಾನ ಎಷ್ಟು ಮಹತ್ವದಾಗಿದೆ ಎಂಬುವುದನ್ನು ತಿಳಿದುಕೊಳ್ಳಬೇಕು. ಗುರು ನಮ್ಮನ್ನು ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಶಕ್ತಿ ಹೊಂದಿದ್ದಾನೆ. ನಮ್ಮ ಉತ್ತಮ ಬದುಕು ರೂಪಿಸಲು ಜೀವನದ ಪ್ರತಿ ಹಂತದಲ್ಲೂ ನಮಗೆ ಮಾರ್ಗದರ್ಶಕರಾಗಿ ನಿಂತಿರುವ ಗುರುವನ್ನು ಸದಾ ಸ್ಮರಿಸಬೇಕು ಎಂದು ತಿಳಿಸಿದರು.ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಇಂದು ಕೆಲವರಿಗೆ ಗುರುವಿನ ಸ್ಥಾನದ ಮಹತ್ವ ಮರೆಯುತಿದ್ದಾರೆ. ಮಕ್ಕಳಿಗೆ ಬಾಲ್ಯದಿಂದಲೇ ಗುರು ಹಿರಿಯರ ಮಾರ್ಗದರ್ಶನ ಎಷ್ಟು ಮುಖ್ಯವಾಗಿದೆ ಎಂಬುವುದನ್ನು ತಿಳಿಸಿಕೊಡುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ತಿಳಿಸಿದರು.ನಿವೃತ್ತ ಉಪನ್ಯಾಸಕ ಎಚ್.ಎಸ್.ಬಿರಾದಾರ, ವೀರೇಶ ಕುಂಟೋಜಿ, ಬಸವೇಶ್ವರ ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ಗುರುಲಿಂಗ ಬಸರಕೋಡ, ಎಂ.ಜಿ.ಆದಿಗೊಂಡ, ರವಿ ರಾಠೋಡ, ಶೇಖರಗೌಡ ಪಾಟೀಲ, ಸಂಕನಗೌಡ ಪಾಟೀಲ, ರವಿಗೌಡ ಚಿಕ್ಕೊಂಡ, ವಿನುತ ಕಲ್ಲೂರ, ಬಾಬು ನಿಡಗುಂದಿ, ಎಚ್.ಬಿ.ಬಾರಿಕಾಯಿ ಇದ್ದರು.ಶಿಕ್ಷಕ ಶಿವು ಮಡಿಕೇಶ್ವರ ಸ್ವಾಗತಿಸಿದರು. ಕೊಟ್ರೇಶ ಹೆಗ್ಢಾಳ ನಿರೂಪಿಸಿದರು. ಪ್ರಭಾಕರ ಖೇಡದ ವಂದಿಸಿದರು. ಕಾರ್ಯಕ್ರಮದಲ್ಲಿ ಮುಕ್ತಾಯಕ್ಕ ಅಕ್ಕನಬಳಗದ ಸದಸ್ಯೆಯರು ಸಿದ್ಧಲಿಂಗ ಶ್ರೀಗಳ ಪಾದಪೂಜೆ ಮಾಡಿದರು. ಇದೇ ಸಂದರ್ಭದಲ್ಲಿ ಬಸವೇಶ್ವರ ಜಾತ್ರಾ ಉತ್ಸವ ಸಮಿತಿ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಗುರುಪೂರ್ಣಿಮೆ ಅಂಗವಾಗಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಶ್ರೀಗಳನ್ನು ಸನ್ಮಾನಿಸಿದರು.