ಹುಬ್ಬಳ್ಳಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಸುತ್ತೂರು ಮಠದ ಜಾತ್ರೆಗೆ ಬಂದಿದ್ದಾರೆ. ಮೈಸೂರು ಭಾಗದ ಪ್ರಮುಖರ ಜತೆಗೆ ಸಭೆ ನಡೆಸುತ್ತಿದ್ದಾರೆ ಅಷ್ಟೇ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.
ಬಹಳ ಎಂದರೆ ಇನ್ನು ಹದಿನೈದು ದಿನ ಅಥವಾ ತಿಂಗಳಲ್ಲಿ ಲೋಕಸಭೆ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರ ವಾತಾವರಣವಿದೆ. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎನ್ನುವುದು ಕೋಟ್ಯಂತರ ಜನರ ಕನಸು ಎಂದರು.
ಕೆಲ ದಿನಗಳ ಹಿಂದೆ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಇಂದೋರ್‌ಗೆ ಹೋಗಿದ್ದೆ. ಆದರೆ ಸಂಘದ ಯಾವ ಮುಖಂಡರನ್ನೂ ಭೇಟಿ ಮಾಡಿಲ್ಲ. ನಾನು ಯಾವ ಅಜೆಂಡಾ ಇಟ್ಟುಕೊಂಡು ಪಕ್ಷಕ್ಕೆ ಬಂದಿಲ್ಲ. ಹಿರಿಯರು ಗೌರವದಿಂದ ನಡೆಸಿಕೊಳ್ಳುತ್ತೇವೆ ಎಂದು ಹೇಳಿದರು. ಅದಕ್ಕಾಗಿ ವಾಪಸ್ ಪಕ್ಷಕ್ಕೆ ಬಂದಿದ್ದೇನೆ ಎಂದರು.ನಾನು ಪಕ್ಷ ಸಂಘಟನೆ ಮಾಡಿಕೊಂಡು ಬಂದಿರುವ ವ್ಯಕ್ತಿ. ಎಲ್ಲರ ಜತೆಗೆ ನಾನು ಹೊಂದಿಕೊಳ್ಳುತ್ತೇನೆ. ಅವರೇ ಹೊಂದಿಕೊಳ್ಳಲಿಲ್ಲ ಎಂದರೆ ನಾನೇನು ತಾನೇ ಮಾಡಲಿ ಎನ್ನುವ ಮೂಲಕ ಪಕ್ಷದಲ್ಲಿ ಇನ್ನು ಅಸಮಾಧಾನವಿದೆ ಎಂದು ಪರೋಕ್ಷವಾಗಿ ಹೇಳಿದರು.