ಬಸವರಾಜ ಹಿರೇಮಠ
ಧಾರವಾಡ: ವಿಧಾನಪರಿಷತ್ ಚುನಾವಣೆ ಅದರಲ್ಲೂ ಪದವೀಧರ ಮತಕ್ಷೇತ್ರದ ಚುನಾವಣೆ ಎಂದರೆ ಪ್ರಬುದ್ಧ ನಾಗರಿಕರ ಚುನಾವಣೆ ಎಂಬ ಮಾತಿದೆ. ಇದೀಗ ಕರ್ನಾಟಕ ವಿಧಾನಪರಿಷತ್ ಪಶ್ಚಿಮ ಪದವೀಧರ ಮತಕ್ಷೇತ್ರದ ಚುನಾವಣೆಗೆ ಕಾಲ ಸನ್ನಿಹಿತವಾಗಿದೆ.ಪ್ರಸ್ತುತ ಈ ಕ್ಷೇತ್ರಕ್ಕೆ ಸದಸ್ಯರಾಗಿರುವ ಪ್ರೊ. ಎಸ್.ವಿ. ಸಂಕನೂರ ಅವರ ಅವಧಿ 2026ರ ಜೂನ್ ತಿಂಗಳಿಗೆ ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಮತದಾರರ ನೋಂದಣಿಗೆ ಚುನಾವಣಾ ಆಯೋಗ ಹಸಿರು ನಿಶಾನೆ ನೀಡುತ್ತಿದ್ದಂತೆ ರಾಜಕೀಯ ಪಕ್ಷಗಳ ಆಕಾಂಕ್ಷಿಗಳು ಸೇರಿದಂತೆ ಚುನಾವಣೆಗೆ ಸ್ಪರ್ಧೆ ಬಯಸಿದವರು ಪದವೀಧರರ ನೋಂದಣಿಯತ್ತ ತಮ್ಮ ಚಿತ್ತ ಹರಿಸಿದ್ದಾರೆ.
ಪ್ರತಿ ಬಾರಿ ನೋಂದಣಿ: ಈ ಚುನಾವಣೆಯ ಒಂದು ವಿಶೇಷ ಏನೆಂದರೆ, ಈ ಹಿಂದಿನ ಮತದಾರರ ಪಟ್ಟಿಯಲ್ಲಿ ನನ್ನ ಹೆಸರಿತ್ತು, ಈಗಲೂ ಇರಲಿದೆ ಎಂದು ಸುಮ್ಮನೆ ಕೂತರೆ ಮತದಾನಕ್ಕೆ ಅವಕಾಶವಿಲ್ಲ. ಪ್ರತಿ ಚುನಾವಣೆಯಲ್ಲೂ ಪದವೀಧರರು ಹೊಸದಾಗಿ ನೋಂದಣಿ ಮಾಡಿಸಲೇಬೇಕು. ಹೀಗಾಗಿ ಚುನಾವಣೆ ಎದುರಿಸುವ ಆಕಾಂಕ್ಷಿಗಳು ಮತದಾರರ ನೋಂದಣಿಗೆ ಪ್ರಾಶಸ್ತ್ಯ ನೀಡುವಂತಾಗಿದೆ.ಪದವೀಧರ ಬೆನ್ನು ಬಿದ್ದ ಆಕಾಂಕ್ಷಿಗಳು: ಪಶ್ಚಿಮ ಪದವೀಧರ ಕ್ಷೇತ್ರವು ಧಾರವಾಡ, ಹಾವೇರಿ, ಉತ್ತರ ಕನ್ನಡ ಹಾಗೂ ಗದಗ ಜಿಲ್ಲೆಗಳ ವ್ಯಾಪ್ತಿ ಹೊಂದಿದೆ. 2020ರ ಚುನಾವಣೆಯಲ್ಲಿ 70 ಸಾವಿರಕ್ಕೂ ಹೆಚ್ಚಿನ ಮತದಾರರಿದ್ದು, ಈ ಬಾರಿ ಕ್ಷೇತ್ರದಲ್ಲಿ ನಡೆಯುತ್ತಿರುವ ಮತದಾರರ ನೋಂದಣಿ ಆಸಕ್ತಿ ಗಮನಿಸಿದರೆ, ಅದು ಒಂದು ಲಕ್ಷ ದಾಟುವ ಸಾಧ್ಯತೆಗಳೂ ಇವೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್, ಜೆಡಿಯು, ಆಮ್ ಆದ್ಮಿ, ಸಮತಾ ಸೈನಿಕ ದಳ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಆಕಾಂಕ್ಷಿಗಳು ಮತ್ತು ಪಕ್ಷೇತರ ಅಭ್ಯರ್ಥಿಗಳು ಮತದಾರರ ನೋಂದಣಿ ಮಾಡಿಸಲು ಪದವೀಧರರ ಬೆನ್ನು ಬಿದ್ದಿದ್ದಾರೆ.
ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ಮತದಾರ ನೋಂದಣಿಗೆ ಅಧಿಸೂಚನೆ ಹೊರಡಿಸಿದ್ದಾರೆ. ಈಗಾಗಲೇ ನೋಂದಣಿ ಶುರುವಾಗಿದ್ದು, ನವೆಂಬರ್ 25ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ. 25 ರಿಂದ ಡಿ. 10ರ ವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸ್ವೀಕೃತ ಆಕ್ಷೇಪಣೆಗಳನ್ನು ಡಿ. 25ರೊಳಗೆ ವಿಲೇವಾರಿ ಮಾಡಲಾಗುತ್ತದೆ. ಡಿ. 30ರಂದು ಪದವೀಧರ ಮತಕ್ಷೇತ್ರದ ಮತದಾರರ ಅಂತಿಮ ಮತದಾರರ ಪಟ್ಟಿ ಪ್ರಕಟವಾಗುತ್ತದೆ ಎಂದು ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ದಿವ್ಯಪ್ರಭು ಮಾಹಿತಿ ನೀಡಿದ್ದಾರೆ.ಮತದಾರರ ನೋಂದಣಿ ಸಮಯದಲ್ಲಿಯೇ ಆಯಾ ರಾಜಕೀಯ ಪಕ್ಷಗಳ ಆಕಾಂಕ್ಷಿಗಳು ತಮ್ಮ ಪಕ್ಷ ಹಾಗೂ ವೈಯಕ್ತಿಕ ಸಾಧನೆ ಪದವೀಧರರಿಗೆ ತಿಳಿಸುತ್ತಿದ್ದಾರೆ. ರಾಜಕೀಯ ಪಕ್ಷಗಳ ಆಕಾಂಕ್ಷಿಗಳು ತಮ್ಮ ತಮ್ಮ ಸರ್ಕಾರಗಳ ಸಾಧನೆ ಬಿಂಬಿಸಿದರೆ, ಪಕ್ಷೇತರ ಅಭ್ಯರ್ಥಿಗಳು ವೈಯಕ್ತಿಕ ಸಾಧನೆ ಬಿಚ್ಚಿಡುತ್ತಿದ್ದಾರೆ. ಅದರಲ್ಲಿ ಕಾಂಗ್ರೆಸ್ ಆಕಾಂಕ್ಷಿಗಳು ಕಾಂಗ್ರೆಸ್‌ನ ಗ್ಯಾರಂಟಿಗಳು ಅದರಲ್ಲೂ ನಿರುದ್ಯೋಗಿಗಳಿಗೆ ವಿದ್ಯಾನಿಧಿ ಯೋಜನೆಯ ಕುರಿತು ಪದವೀಧರರಿಗೆ ಮನವರಿಕೆ ಮಾಡಿ ಮತಗಳು ಸೆಳೆಯುವ ಶತಪ್ರಯತ್ನ ನಡೆಸಿದ್ದಾರೆ.
ಪದವೀಧರರು ಸ್ವಯಂ ಪ್ರೇರಿತರಾಗಿ ನೋಂದಣಿ ಮಾಡಿಸದೇ ಇರುವುದು ಈ ಚುನಾವಣೆಯ ವಿಪರ್ಯಾಸ. ವಿದ್ಯಾಕಾಶಿ ಧಾರವಾಡ ಸೇರಿದಂತೆ ಹಾವೇರಿ, ಗದಗ ಹಾಗೂ ಉತ್ತರ ಕನ್ನಡದಲ್ಲಿ ಅಪಾರ ಸಂಖ್ಯೆಯಲ್ಲಿ ಪದವೀಧರರು ಇದ್ದಾರೆ. ಆದರೆ, ತೀರಾ ಕಡಿಮೆ ಸಂಖ್ಯೆಯಲ್ಲಿ ನೋಂದಣಿ ಮಾಡಿಸುತ್ತಾರೆ2020ರ ಚುನಾವಣೆ ವೇಳೆಗಿನ ಮತದಾರರ ಸಂಖ್ಯೆ
ಜಿಲ್ಲೆ ಮತದಾರರುಧಾರವಾಡ 20,698ಹಾವೇರಿ 23,185ಗದಗ 15,362ಉತ್ತರ ಕನ್ನಡ 13,055
ಒಟ್ಟು 72,300ನೋಂದಣಿ ಚುರುಕುಪ್ರಸ್ತುತ ಪಶ್ಚಿಮ ಪದವೀಧರ ಮತಕ್ಷೇತ್ರ ಬಿಜೆಪಿ ವಶದಲ್ಲಿದೆ. 2020ರಲ್ಲಿ ನಡೆದ ಚುನಾವಣೆಯಲ್ಲಿ ಪ್ರೊ. ಎಸ್.ವಿ. ಸಂಕನೂರ (18 ಸಾವಿರ ಮತ) ಗೆಲವು ಸಾಧಿಸಿದ್ದು, ಡಾ. ಎಂ. ಕುಬೇರಪ್ಪ (12 ಸಾವಿರ) ಬಸವರಾಜ ಗುರಿಕಾರ (8 ಸಾವಿರದಷ್ಟು ಮತ ) ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಈ ಬಾರಿ ಚುನಾವಣೆ ಆಕಾಂಕ್ಷಿಗಳ ಪಟ್ಟಿ ಈಗಿನಿಂದಲೇ ಬೆಳೆಯುತ್ತಿದ್ದು ಸ್ಪರ್ಧಿಸುವವರ ಸಂಖ್ಯೆ ಹೆಚ್ಚಲಿದೆ. ಜತೆಗೆ ನೋಂದಣಿ ಚುರುಕಾಗಿದ್ದು ಮತದಾರರ ಸಂಖ್ಯೆಯೂ ಹೆಚ್ಚಲಿದೆ ಎಂದು ಅಂದಾಜಿಸಲಾಗಿದೆ.