ಸುವರ್ಣ ಪಥ ಸ್ಮರಣ ಸಂಚಿಕೆ ಬಿಡುಗಡೆ
ಕನ್ನಡಪ್ರಭ ವಾರ್ತೆ ಶಿರಸಿಉತ್ತರ ಕನ್ನಡ ಜಿಲ್ಲೆಯ ಪತ್ರಕರ್ತರಲ್ಲಿ ಒಳ್ಳೆಯ ಚಿಂತನೆಗಳಿದ್ದು, ರಾಜ್ಯ ಮಟ್ಟದ ಪತ್ರಿಕೆ ಹಾಗೂ ಚಾನೆಲ್‌ಗಳಲ್ಲಿ ನಮ್ಮ ಜಿಲ್ಲೆಯ ಪತ್ರಕರ್ತರು ಅತ್ಯಧಿಕ ಸಂಖ್ಯೆಯಲ್ಲಿರುವುದು ಹೆಮ್ಮೆಯ ಸಂಗತಿ ಎಂದು ಶಿರಸಿ ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಹೇಳಿದರು.
ಭಾನುವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಉತ್ತರಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಜಿಲ್ಲಾ ಪತ್ರಿಕಾ ಮಂಡಳಿ ಸಹಯೋಗದಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸುವರ್ಣ ಮಹೋತ್ಸವದ ನಿಮಿತ್ತ ಹೊರತಂದ ಸುವರ್ಣ ಪಥ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.ಜಿಲ್ಲಾ ಸಂಘವು ಅನೇಕ ಏಳುಬೀಳುಗಳ ನಡುವೆ ಈಗ ಹೆಮ್ಮರವಾಗಿ ಬೆಳೆದಿದೆ. ಇದಕ್ಕೆ ಅನೇಕ ಪತ್ರಕರ್ತರು ಕಾರಣೀಕರ್ತರು. ಹಿಂದೆ ಅಧ್ಯಕ್ಷ ಸ್ಥಾನ ನಿರ್ವಹಿಸಿದರನ್ನು 50 ವರ್ಷದ ಕಾರ್ಯಕ್ರಮದ ಸುವರ್ಣ ಪಥ ಸ್ಮರಣ ಸಂಚಿಕೆಯಲ್ಲಿ ಅವರನ್ನು ನೆನಪಿಸಿಕೊಂಡಿರುವುದು ಇತರ ಸಂಘಟನೆಗಳಿಗೆ ಆದರ್ಶವಾಗಿದೆ. ಜಿಲ್ಲೆಯ ಹಿರಿಯ ಹಾಗೂ ಕಿರಿಯ ಪತ್ರಕರ್ತರು ಉತ್ತಮ ಕಾರ್ಯನಿರ್ವಣೆಯ ಜತೆ ಒಳ್ಳೆಯ ಗುಣಗಳನ್ನು ಹೊಂದಿದ್ದಾರೆ. ಅವರಿಂದ ಸಮಾಜಕ್ಕೆ ಅಪಾರ ಕೊಡುಗೆ ಲಭಿಸುತ್ತಿದೆ ಎಂದರು.
ಸ್ಕೊಡವೆಸ್ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ ಮಾತನಾಡಿ, ಸಮಾಜದ ಅಂಕು-ಡೊಂಕು ತಿದ್ದಿ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ಬಹಳ ಮುಖ್ಯ. ಸುದ್ದಿಗಾಗಿ ಮಾತ್ರ ಪತ್ರಕರ್ತರನ್ನು ನೋಡುತ್ತೇವೆ. ಸಮಾಜಮುಖಿ ಚಿಂತನೆ, ಆಗು, ಹೋಗುಗಳ ತಿಳಿಸಿ, ಸುವರ್ಣ ಪಥ ಸ್ಮರಣೆ ರಚಿಸಿರುವುದು ಮಾದರಿ. ಸುವರ್ಣಪಥ ಸ್ಮರಣ ಸಂಚಿಕೆಯಲ್ಲಿ ರಚನಾತ್ಮಕ ಕಾರ್ಯಕ್ರಮಗಳು ದಾಖಲೆಯಾಗಿ ಮುಂದಿನ ಪೀಳಿಗೆಗೆ ಕೈಪಿಡಿಯಾಗಿದೆ. ಸಂಘಟನಾತ್ಮಕವಾಗಿ ಹೋರಾಟ ಮಾಡಿ ನಮ್ಮ ಬೇಡಿಕೆ ಈಡೇರಿಸಿಕೊಳ್ಳಬೇಕಾಗುತ್ತದೆ. ಪ್ರತಿಯೊಬ್ಬರಿಗೂ ಒಂದೆಲ್ಲ ಒಂದು ರೀತಿಯಲ್ಲಿ ಪತ್ರಿಕಾ ರಂಗ, ಸಂಘ, ಪತ್ರಿಕೆಗಳು ಅತ್ಯವಶ್ಯವಾಗಿರುತ್ತದೆ. ಸಮಾಜದಲ್ಲಿ ಸಣ್ಣ ಲೇಖನಗಳು, ಸಂದೇಶಗಳು ದಿಕ್ಸೂಚಿಯಾಗುತ್ತದೆ ಎಂದರು.ಉತ್ತರಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಸುಬ್ರಾಯ ಭಟ್ಟ ಬಕ್ಕಳ ಪ್ರಾಸ್ತಾವಿಕ ಮಾತನಾಡಿ, ಪತ್ರಿಕಾ ಸಂಘವು 1974ರಿಂದ ನಡೆದು ಬಂದ ದಾರಿ, ಅಧ್ಯಕ್ಷರ ಲಭ್ಯವಿರುವ ಪೊಟೋ ಸಂಗ್ರಹಿಸಿ, ಮಾದರಿ ಸ್ಮರಣೆ ಸಂಚಿಕೆ ತಯಾರಿಸಿದ್ದೇವೆ. ಇದಕ್ಕೆ ಜಿಲ್ಲೆಯ ಎಲ್ಲ ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘ ಸಹಕಾರ ನೀಡಿದೆ ಎಂದರು.
ಉಪಾಧ್ಯಕ್ಷ ವಿಠ್ಠಲದಾಸ ಕಾಮತ್ ಅಂಕೋಲಾ, ನಾಗರಾಜ ಭಟ್ಟ ಕೆಕ್ಕಾರ, ಅನಂತ ದೇಸಾಯಿ ಜೋಯ್ಡಾ, ಜಿಲ್ಲಾ ಪತ್ರಿಕಾ ಮಂಡಳಿ ಕಾರ್ಯದರ್ಶಿ ಪ್ರದೀಪ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ನರಸಿಂಹ ಸಾತೊಡ್ಡಿ ಯಲ್ಲಾಪುರ, ಜಿಲ್ಲಾ ಖಜಾಂಚಿ ರಾಜೇಂದ್ರ ಹೆಗಡೆ ಶಿರಸಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಬಸವರಾಜ ಪಾಟೀಲ ಮುಂಡಗೋಡ ಮತ್ತಿತರರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಸುಮಂಗಲಾ ಹೊನ್ನೆಕೊಪ್ಪ ನಿರೂಪಿಸಿ, ವಂದಿಸಿದರು.