ಶಿವಾನಂದ ಗೊಂಬಿ
ಲೋಕಸಭೆ ಚುನಾವಣೆ ಅಬ್ಬರ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಆದರೆ ಒಂದು ಕಾಲದಲ್ಲಿ ಸಕ್ರಿಯವಾಗಿದ್ದ ಕ್ಷೇತ್ರಕ್ಕೆ ತಾವೇ ತಮ್ಮ ಪಕ್ಷದ ಅಭ್ಯರ್ಥಿಗೆ ಸ್ಟಾರ್ ಪ್ರಚಾರಕರಂತೆ ಮುಂಚೂಣಿಯಲ್ಲಿ ನಿಂತು ತಮ್ಮದೇ ಚುನಾವಣೆ ಏನೋ ಎಂಬಂತೆ ಕ್ಯಾಂಪೇನ್ ನಡೆಸುತ್ತಿದ್ದ ಬಹಳಷ್ಟು ಹಿರಿಯರು ಇದೀಗ ಹಿಂದೆ ಸರಿದಿದ್ದಾರೆ. ಅವರನ್ನು ಪಕ್ಷಗಳು ಕರೆಯುವ ಗೋಜಿಗೆ ಹೋಗುತ್ತಿಲ್ಲ ಎಂಬುದು ಕೂಡ ಅಷ್ಟೇ ಸ್ಪಷ್ಟ.
ಕೆಲವರು ಕೆಲ ಕಾರಣಗಳಿಂದ ಹಿಂದೆ ಸರಿದು ನೇಪಥ್ಯಕ್ಕೆ ಸರಿದರೆ, ಕೆಲವರು ವಯಸ್ಸಿನ ಕಾರಣದಿಂದ ಹಿಂದೆ ಸರಿದಿದ್ದಾರೆ. ಹೀಗೆ ಹಿಂದೆ ಸರಿದವರು ಬರೀ ಒಂದೇ ಪಕ್ಷದಲ್ಲೇನೂ ಇಲ್ಲ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಲ್ಲಿನವರು ಇರುವುದು ವಿಶೇಷ. ಅದರಲ್ಲೂ ಕಾಂಗ್ರೆಸ್‌ನಲ್ಲಿ ಹೆಚ್ಚಿನವರಿದ್ದಾರೆ.ಕೇಳಿಸುತ್ತಿಲ್ಲ ಗಟ್ಟಿ ಧ್ವನಿ:
ವೀರಣ್ಣ ಮತ್ತಿಗಟ್ಟಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿ, ಪರಾಭವಗೊಂಡಿದ್ದರು. ಆದರೆ ಕಾಂಗ್ರೆಸ್ ಸಂಘಟನೆಯಲ್ಲಿ ಹೆಸರು ಪಡೆದವರು. ಪ್ರತಿ ಚುನಾವಣೆಯಲ್ಲೂ ಪ್ರಚಾರದಲ್ಲಿ ತೊಡಗುತ್ತಿದ್ದರು. ಆದರೆ ಈ ಸಲ ವಯಸ್ಸಿನ ಕಾರಣಕ್ಕೆ ನಡೆಯಲು ಆಗುತ್ತಿಲ್ಲ. ಹೀಗಾಗಿ ಪ್ರಚಾರದಿಂದ ಹಿಂದೆ ಸರಿದು ಮನೆಯಲ್ಲಿ ಉಳಿದಿದ್ದಾರೆ.
ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಅವರಿಗೂ ವಯಸ್ಸಾಗಿದೆ. ಯಾವುದೇ ಸಭೆ ಸಮಾರಂಭಗಳಲ್ಲಿ ಭಾಗವಹಿಸುವುದಿಲ್ಲ. ರಾಜಕಾರಣದಿಂದ ನೈಪಥ್ಯಕ್ಕೆ ಸರಿದಂತಾಗಿದೆ. ಕರ್ನಾಟಕ ವಿದ್ಯಾವರ್ಧಕ ಸಂಘದ ಚುಕ್ಕಾಣಿ ಹಿಡಿದಿದ್ದಾರೆ. ಇವರ ಪುತ್ರರೂ ಆಗಿರುವ ಶಾಸಕ ಅರವಿಂದ ಬೆಲ್ಲದ ಅಬ್ಬರದ ಪ್ರಚಾರದಲ್ಲಿ ತೊಡಗುವ ಮೂಲಕ ಪ್ರಚಾರದಲ್ಲಿ ಅವರ ಸ್ಥಾನ ತುಂಬಿದ್ದಾರೆ.
ಮತ್ತೊಬ್ಬ ಮಾಜಿ ಸಚಿವ ಎಂದರೆ ಕೆ.ಎನ್. ಗಡ್ಡಿ, ಕಳೆದ ವಿಧಾನಸಭೆ ಚುನಾವಣೆವರೆಗೂ ಕಾಂಗ್ರೆಸ್‌ನಲ್ಲಿದ್ದರು. ಆಗ ಟಿಕೆಟ್ ಸಿಗಲಿಲ್ಲ ಎಂದು ಪಕ್ಷದೊಂದಿಗೆ ಮುನಿಸಿಕೊಂಡು ಜೆಡಿಎಸ್ ಸೇರಿದ್ದರು. ನವಲಗುಂದ ಕ್ಷೇತ್ರದಿಂದ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋತಿದ್ದು ಆಯ್ತು. ಆಗಿನಿಂದ ಮತ್ತೆ ಮನೆ ಸೇರಿದವರು ಮತ್ತೆ ಕಾಣಿಸಿಕೊಂಡಿಲ್ಲ. ಹಾಗಂತ ಎಲ್ಲಿಯೂ ಬಂದಿಯೇ ಇಲ್ಲ ಅಂತೇನೂ ಅಲ್ಲ. ಬಿಜೆಪಿ- ಜೆಡಿಎಸ್ ಮೈತ್ರಿಕೂಟದ ಸಭೆಯೊಂದರಲ್ಲಿ ಒಂದು ಬಾರಿ ಹಾಜರಾಗಿ ಹೋದವರು ಮತ್ತೆ ಪತ್ತೆಯಿಲ್ಲ.
ಬಿಎಸ್‌ವೈ ಬೀಗ:
ಅದೇ ರೀತಿ ಬಿಜೆಪಿ ಮುಖಂಡ, ಮಾಜಿ ಶಾಸಕ ಆರ್.ಬಿ. ಶಿರಿಯಣ್ಣವರ 2004ರಲ್ಲಿ ಶಾಸಕರಾಗಿದ್ದರು. 2008ರಲ್ಲಿ ಶಂಕರ ಪಾಟೀಲ ಮುನೇನಕೊಪ್ಪ ಅವರಿಗೆ ನವಲಗುಂದ ಕ್ಷೇತ್ರವನ್ನು ಬಿಟ್ಟು ಕೊಟ್ಟ ನಂತರ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಆದರೂ ಚುನಾವಣೆ ವೇಳೆಯಲ್ಲಿ ಆಗಾಗ ಕಾಣಿಸುತ್ತಿದ್ದ ಶಿರಿಯಣ್ಣವರ, ಈ ಚುನಾವಣೆಯಲ್ಲಂತೂ ಅಕ್ಷರಶಃ ಕಾಣೆಯಾಗಿದ್ದಾರೆ.
ಹೊರಗೆ ಬಾರದ ಮುತ್ಸದ್ದಿ:
ಇನ್ನೊಬ್ಬ ಪ್ರಬಲ ನಾಯಕನೆಂದರೆ ಡಾ. ಪಾಂಡುರಂಗ ಪಾಟೀಲ. ಪಾಪಾ ಎಂದು ಹೆಸರು ಪಡೆದಿರುವ ಇವರು ಬಿಜೆಪಿ ಮುಖಂಡರು. ಪಾಲಿಕೆಯಲ್ಲಿ ನಾಲ್ಕು ಬಾರಿ ಸದಸ್ಯರಾಗಿ, ಎರಡು ಬಾರಿ ಮೇಯರ್ ಆಗಿ ಕಾರ್ಯನಿರ್ವಹಿಸಿದವರು. ಜನತಾ ಪರಿವಾರದಿಂದ ರಾಜಕಾರಣಕ್ಕೆ ಬಂದಿದ್ದ ಇವರು ಪಾಲಿಕೆಯಲ್ಲಿ ಅಬ್ಬರಿಸಲು ಶುರು ಮಾಡಿದರೆ ಪಿನ್ ಡ್ರಾಪ್ ಸೈಲೆನ್ಸ್ ಇರುತ್ತಿತ್ತು. ಅಷ್ಟೊಂದು ವಾಗ್ಮಿ, ಮುತ್ಸದ್ದಿ ರಾಜಕಾರಣಿ. ಆದರೆ ಕಳೆದ ಪಾಲಿಕೆ ಚುನಾವಣೆಯಲ್ಲಿ ಸೋತ ನಂತರ ಮನೆ ಸೇರಿದವರು ಈ ವರೆಗೂ ಹೊರಬಂದಿಲ್ಲ.ಹೀಗೆ ಹಿರಿಯರೆಲ್ಲರೂ ಒಂದಿಲ್ಲ ಒಂದು ಕಾರಣದಿಂದ ಚುನಾವಣಾ ಪ್ರಚಾರದಿಂದ ಹಿಂದೆ ಸರಿದಿದ್ದು, ಇವರನ್ನು ಕರೆದುಕೊಂಡು ಬರುವ ಗೋಜಿಗೆ ಈಗಿನ ಮುಖಂಡರು ಮಾಡುತ್ತಿಲ್ಲ. ಇವರು ಇದ್ದರು ಎಂಬುದನ್ನು ಈಗಿನ ಮುಖಂಡರು ಮರೆತಂತಾಗಿದೆ ಎಂಬುದಕ್ಕೆ ಸಾಕ್ಷಿಯಾದಂತಾಗಿದೆ ಎಂಬುದು ಮಾತ್ರ ಸ್ಪಷ್ಟ.