ಕನ್ನಡಪ್ರಭ ವಾರ್ತೆ ಕಾಗವಾಡಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಕಂಗಾಲಾಗಿರುವ ಐನಾಪುರ ಗ್ರಾಮಸ್ಥರು ಲೋಕಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ದಿನದ 24 ಗಂಟೆಗಳಲ್ಲಿ ಕೇವಲ 1 ಗಂಟೆಯಷ್ಟೇ ವಿದ್ಯುತ್ ಪೂರೈಕೆ ಮಾಡುತ್ತಿರುವ ಪರಿಣಾಮ ರೈತರಿಗೆ ತೊಂದರೆಯಾಗುತ್ತಿದೆ. ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಇತ್ತ ಗಮನ ಹರಿಸುತ್ತಿಲ್ಲ. ಹೀಗಾಗಿ ರೈತರ ದೈನಂದಿನ ಬದುಕಿನಲ್ಲಿ ಹಲವಾರು ರೀತಿಯ ತೊಂದರೆಯಾಗತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಚುನಾವಣೆ ಬಹಿಷ್ಕಾರ ಮಾಡುವುದಾಗಿ ಎಚ್ಚರಿಕೆ ನೀಡಿ ತಹಸೀಲ್ದಾರ್ ಎಸ್.ಬಿ.ಇಂಗಳೆ ಅವರಿಗೆ ಮನವಿ ಸಲ್ಲಿಸಿದರು. ಶೀಘ್ರದಲ್ಲೇ ಸಮಸ್ಯೆ ಬಗೆಹರಿಯದಿದ್ದರೆ ಲೋಕಸಭಾ ಚುನಾವಣೆಯನ್ನು ಬಹಿಸ್ಕಾರ ಮಾಡುವುದು ನಿಶ್ಚಿತ ಎಂದು ಗುಡುಗಿದರು.ಈ ಸಂದರ್ಭದಲ್ಲಿ ಚಿದಾನಂದ ಕೋರ್ಬು, ಅಣ್ಣಪ್ಪ ಕಟಾಂವಿ, ಸಂಜಯ ಬಿರಡಿ, ಮಲ್ಲಪ್ಪ ಪಾಟೀಲ ಹಾಗೂ ಮತ್ತಿತರ ರೈತರು ಮಾತನಾಡಿ, ಕೆಲ ದಿನಗಳಿಂದ ವಿದ್ಯುತ್ ಸಮಸ್ಯೆಯಾಗಿದೆ. ಜನ ಜಾನುವಾರುಗಳಿಗೆ ಕುಡಿಯುವ ನೀರು, ಸಿಗುತ್ತಿಲ್ಲ. ಬೆಳೆಗಳಿಗೆ ನೀರು ಹಾಯಿಸಬೇಕೆಂದರೂ ತೊಂದರೆ ಆಗಿದೆ. ಆದರೂ ಯಾರೊಬ್ಬರೂ ಗಮನ ಹರಿಸದೇ ರೈತರನ್ನ ನಿರ್ಲಕ್ಷ್ಯ ಮಾಡಲಾಗಿದೆ ಎಂದು ದೂರಿದರು.
ಜಿಲ್ಲಾಧಿಕಾರಿಗಳು ಹಾಗೂ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಪೂರೈಕೆ ಮಾಡುವಂತೆ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆ ಎದುರಾಗಿದೆ ಎಂದು ದೂರಿದರು.ಕಾಗವಾಡ ತಾಲೂಕಿನ ಐನಾಪುರ, ಮೋಳೆ, ಕೃಷ್ಣಾ ಕಿತ್ತೂರ, ಶೇಡಬಾಳ, ಕಾಗವಾಡ, ಕಲ್ಲಾಳ, ಲೋಕುರ್, ಮಂಗಸೂಳಿ, ಶಿರಗುಪ್ಪಿ, ಜುಗೂಳ ಮತ್ತಿತರ ಗ್ರಾಮಗಳಲ್ಲಿ ಈ ಮೊದಲಿನಂತೆ ದಿನಕ್ಕೆ 7 ಗಂಟೆ ವಿದ್ಯುತ್ ಪೂರೈಕೆ ಮಾಡಬೇಕೆಂದು ಒತ್ತಾಯಿಸಿ ತಹಸೀಲ್ದಾರ್ ಎಸ್.ಬಿ.ಇಂಗಳೆಯವರಿಗೆ ಮನವಿ ಸಲ್ಲಿಸಿದರು.
ಕೃಷ್ಣನದಿ ತೀರದಲ್ಲಿ ಕುಡಿಯುವ ನೀರಿಗಾಗಿ ವಿದ್ಯುತ್ ಸಂಪರ್ಕವನ್ನು ಜಿಲ್ಲಾಧಿಕಾರಿಗಳು ಹಾಗೂ ಚಿಕ್ಕೋಡಿ ಹೆಸ್ಕಾಂ ಅಧಿಕಾರಿಗಳ ಆದೇಶದಂತೆ ಕಳೆದ ನಾಲ್ಕೈದು ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವುದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು. ಮಹಾರಾಷ್ಟ್ರದ ಕೊಲ್ಲಾಪೂರ, ಸಾಂಗಲಿ ಜಿಲ್ಲೆಯ ಗಡಿ ಭಾಗದಲ್ಲಿ ಕರ್ನಾಟಕದ ಕೃಷ್ಣ ನದಿ ಹಾದು ಹೊಗಿದ್ದು, ಮಹಾರಾಷ್ಟ್ರದ ರಾಜಪೂರ ಬ್ಯಾರೇಜಿನಿಂದ ಬಿಡುಗಡೆ ಮಾಡಿರುವ ನೀರನ್ನು ಈ ಭಾಗದ ಶೇಡಬಾಳ, ಕಾಗವಾಡ, ಕಲ್ಲಾಳ, ಲೋಕುರ್, ಮಂಗಸೂಳಿ, ಶೇಡಬಾಳ ಸ್ಟೇಷನ್ ಗ್ರಾಮಸ್ಥರು ಬಳಸುತ್ತಿದ್ದಾರೆ. ಈ ಹಿಂದೆ 2016ರಲ್ಲಿ ಸಮಸ್ಯೆ ಉದ್ಭವವಾದಾಗ ಅಥಣಿ ತಹಸೀಲ್ದಾರ್ ಭೇಟಿ ನೀಡಿ, ಈ ಭಾಗದ ರೈತರು ಮನವಿಯು ಸಮಂಜಸವಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು. ಆಗ 7 ಗಂಟೆ ವಿದ್ಯುತ್ ಒದಗಿಸಿದ್ದರು. ಹೀಗಾಗಿ, ಕೂಡಲೇ ನಮ್ಮ ಮನವಿಯನ್ನು ಪರಿಶೀಲಿಸಿ, ಈ ಭಾಗದ ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಕೋರಿದರು.ಈ ವೇಳೆ ರೈತ ಮುಖಂಡ ಸಂಜಯ ಬಿರಡಿ ಮಾತನಾಡಿ, ನದಿಯಲ್ಲಿ ನೀರು ಇರುವರೆಗೆ 7 ಗಂಟೆ ವಿದ್ಯುತ್ ನೀಡಬೇಕು. ನಮ್ಮ ಜಮೀನುಗಳನ್ನು ಬ್ಯಾಂಕ್ ನಲ್ಲಿ ಅಡವಿಟ್ಟು ಏತ ನೀರಾವರಿ ಯೋಜನೆಗಳನ್ನು ಮಾಡಿದ್ದೇವೆ. ಹಿಂದೆಂದೂ ಕಾಣದ ರಣ ಬಿಸಲಿಲು ಈ ವರ್ಷ ಇರುವದರಿಂದ ಬೆಳೆದ ಬೆಳೆಗಳು ನಾಶ ಹೋಗುತ್ತಿವೆ. ಈ ಹಿನ್ನೆಲೆಯಲ್ಲಿ ದಿನದ 7 ಗಂಟೆ ಕಾಲ ಸಮರ್ಪಕ ವಿದ್ಯುತ್ ನೀಡುವಂತೆ ಒತ್ತಾಯಿಸಿದರು.
ಆಗ ತಹಸೀಲ್ದಾರ ಎಸ್.ಬಿ.ಇಂಗಳೆ ಅವರು ಈ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇವೆ ಎಂದು ಹೇಳಿ ರೈತರ ಮನವೊಲಿಸಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯುವಂತೆ ಮನವಿ ಮಾಡಿದಾಗ ಅಧಿಕಾರಿಗಳ ಭರವಸೆಯ ಮೇರೆಗೆ ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.ರೈತ ಮುಖಂಡರಾದ ಸಂಜು ಬಿರಡಿ, ಗೋಪಾಲ ಮಾನಗಾಂವೆ, ಅಪ್ಪಾಸಾಬ್ ಅಪರಾಜ, ಸಿದ್ದು ಹವಳೆ, ಆಧಿನಾಥ ಯರಂಡೋಲಿ, ವಿರುಪಾಕ್ಷಿ ಆರಿ, ಯಶವಂತ ಪಾಟೀಲ, ಪ್ರವೀಣ ಕುಲಕರ್ಣಿ, ಪ್ರಕಾಶ ಚಿನಗಿ, ಮುತ್ತಪ್ಪ ಗಾಣಿಗೇರ, ದಾದಾ ಜಂತೆನ್ನವರ, ಗುಂಡು ಖವಟಕೊಪ್ಪ, ಪ್ರಫುಲ್ ಕಾರ್ಚಿ,ಸದಾಶಿವ ಬಸ್ತವಾಡೆ, ರಾಮು ಸವದತ್ತಿ, ಪ್ರೇಮ ಉಗಾರೆ, ರಮೇಶ ಅಪರಾಜ, ಭಿಮಪ್ಪ ಅಪರಾಜ, ಅಣ್ಣಾಸಾಬ್ ಜಾಯಗೌಡ, ಅಶೋಕ ಇಚಲಕರಂಜಿ, ವಿದ್ಯಾಧರ ಸುತಾರ, ತಾತ್ಯಾಸಾಬ್ ಕೋರ್ಬು ಹಣಮಂತ ಬನಚೋಡ, ರವಿ ದಾನೊಳ್ಳಿ, ಕಾಗವಾಡದಲ್ಲಿ ರಾಜಾರಾಮ ಗಡಗೆ, ಎಸ್.ಎಸ್.ಪಾಟೀಲ, ರಾಜೇಂದ್ರ ಕರವ, ರಮೇಶ ಚೌಗುಲೆ, ಕಾಕಾ ಪಾಟೀಲ, ಸತ್ಯಗೌಡ ಪಾಟೀಲ, ಆದಿನಾಥ ಬಡಿಗೇರ, ಅಣ್ಣಾಸಾಬ ಅವಟಿ, ಅಣ್ಣಾಸಾಬ್ ಅರವಾಡೆ, ಚನ್ನಗೌಡ ಪಾಟೀಲ, ಅಪ್ಪಾಸಾಬ್ ಚೋರಮುಲೆ, ಅಮರ ಶಿಂಧೆ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ರೈತರು, ಗ್ರಾಮಸ್ಥರು ಉಪಸ್ಥಿತರಿದ್ದರು.