ವಗಳೆ ಕಾಲೋನಿ ರಸ್ತೆ ಸರಿಪಡಿಸದಿದ್ದಲ್ಲಿ ಚುನಾವಣೆ ಬಹಿಷ್ಕಾರ

KannadaprabhaNewsNetwork | Published : Mar 5, 2024 1:34 AM

ಸಾರಾಂಶ

ತಾಲೂಕಿನ ಅಸಗೊಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಗಳೆ ಕಾಲೊನಿ ಸಂಪರ್ಕಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ಕೊಪ್ಪ

ತಾಲೂಕಿನ ಅಸಗೊಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಗಳೆ ಕಾಲೊನಿ ಸಂಪರ್ಕಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ೩೦ ವರ್ಷಗಳ ಹಿಂದೆ ಡಿ.ಬಿ. ಚಂದ್ರೇಗೌಡ ಶಾಸಕರಾಗಿದ್ದ ಅವಧಿಯಲ್ಲಿ ಈ ರಸ್ತೆ ಡಾಂಬರೀಕರಣ ಕಂಡಿತ್ತು. ನಂತರ ಬಂದ ಜನಪ್ರತಿನಿಧಿಗಳು ರಸ್ತೆ ಅಭಿವೃದ್ಧಿಗೆ ಗಮನ ಹರಿಸದೆ ಸ್ಥಳೀಯ ಗ್ರಾಪಂಯು ನಿರ್ಲಕ್ಷ್ಯವಹಿಸಿದ್ದರಿಂದ ರಸ್ತೆ ಸಂಪೂರ್ಣ ಹದೆಗೆಟ್ಟಿದ್ದು ಓಡಾಟಕ್ಕೆ ಯೋಗ್ಯವಾಗಿಲ್ಲ. ಗ್ರಾಮದ ಬಳಿ ಹರಿಯುವ ತುಂಗಾ ನದಿಯಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ಮರಳು ಕೊರೆಯಲ್ಲಿ ಮರಳನ್ನು ಲಾರಿ ಮೂಲಕ ಹೊಡೆಯಲಾಗುತ್ತಿತ್ತು. ಇದರಿಂದ ರಸ್ತೆ ಸಂಪೂರ್ಣ ಹದಗೆಟ್ಟಿತ್ತು, ಗ್ರಾಮಸ್ಥರ ವಿರೋಧದ ಬಳಿಕ ಲಾರಿ ಓಡಾಟ ಸ್ಥಗಿತಗೊಂಡಿತು.

ಕಾಲೋನಿಯಲ್ಲಿ ಸುಮಾರು ೬೦ ರಿಂದ ೭೦ ದಲಿತ ಕುಟುಂಬಗಳು ವಾಸವಾಗಿದ್ದು ಅಂಗನವಾಡಿ, ಶಾಲಾ ಕಾಲೇಜು, ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ ಬರುವುದು ತೀವ್ರ ಸಮಸ್ಯೆಯಾಗಿದೆ. ಈ ಭಾಗದ ಶಾಲೆಗೆ ಹೋಗಿಬರುವ ವಿದ್ಯಾರ್ಥಿ ಗಳು, ಶೃಂಗೇರಿ ಕೊಪ್ಪ ಭಾಗಕ್ಕೆ ಶಾಲೆಗೆ ಹೋಗಿ ಬರುವ ಸುಮಾರು ೪೦ ವಿದ್ಯಾರ್ಥಿಗಳು ಈ ಭಾಗದಲ್ಲಿದ್ದು ಮುಖ್ಯ ರಸ್ತೆವರೆಗೂ ಹೋಗಲು ಸುಮಾರು ಮರ‍್ನಾಲ್ಕು ಕಿಮೀ ಪ್ರತಿನಿತ್ಯ ಇದೇ ರಸ್ತೆ ಬಳಸಿ ಓಡಾಡಬೇಕಿದೆ. ಕಾಲೋನಿಯಲ್ಲಿ ವಯೋವೃದ್ಧರು, ಅನಾರೋಗ್ಯ ಪೀಡಿತರು ಇದ್ದು ಆರೋಗ್ಯ ಹದಗೆಟ್ಟಾಗ ಆರೋಗ್ಯ ತಪಾಸಣೆಗೆ ಕರೆದುಕೊಂಡು ಹೋಗುವುದು ಕೂಡ ಕಷ್ಟವಾಗಿದೆ. ರಸ್ತೆ ದುರಸ್ಥಿ ಪಡಿಸುವಂತೆ ಹಲವು ಬಾರಿ ಚುನಾಯಿತ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನೆ ಶೂನ್ಯ. ಸಂಪೂರ್ಣ ರಸ್ತೆ ಡಾಂಬಾರು ಹಾಕಿ ದುರಸ್ತಿ ಮಾಡಿಸದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ತಾಲೂಕು ಕಚೇರಿ ಹಾಗೂ ಸ್ಥಳೀಯ ಶಾಸಕರ ಕಚೇರಿ ಮುಂದೆ ಧರಣಿ ನಡೆಸುವುದು ಅನಿವಾರ್ಯ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

-- ಬಾಕ್ಸ್---ತುಂಗಾ ತೀರದಲ್ಲಿದ್ದರೂ ಕುಡಿವ ನೀರಿಗೆ ಹಾಹಾಕಾರ

ತುಂಗಾನದಿ ತೀರದಲ್ಲಿದ್ದರೂ ಕುಡಿಯುವ ನೀರಿನ ಸಮಸ್ಯೆ ಅತಿಯಾಗಿದೆ. ತುಂಗಾನದಿಯಿಂದ ನೀರು ಸಂಗ್ರಹಕ್ಕೆ ಕೇವಲ ೨೦೦೦ ಲೀ. ಸಾಮರ್ಥ್ಯದ ಟ್ಯಾಂಕ್ ಅನ್ನು ಗ್ರಾಪಂನವರು ಅಳವಡಿಸಲಾಗಿದ್ದು ಎಲ್ಲೆಡೆ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ. ಇದನ್ನು ಕನಿಷ್ಟ ೧೦ ಸಾವಿರ ಲೀ. ಸಾಮರ್ಥ್ಯದ ನೀರು ಸಂಗ್ರಹಣ ಟ್ಯಾಂಕ್ ಅಳವಡಿಸಬೇಕು. ಇನ್ನು ಮಳೆಗಾಲ ಸಮೀಪಿಸುತ್ತಿದ್ದು ರಸ್ತೆ ಕಾಮಗಾರಿ ಮಾಡಿಸದೆ ಇದ್ದಲ್ಲಿ ಮುಂಬರುವ ಲೋಕಸಭಾ ಸೇರಿದಂತೆ ಎಲ್ಲಾ ಚುನಾವಣೆ ಗಳನ್ನು ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಕೆ ಸ್ಥಳೀಯರು ಎಚ್ಚರಿಸಿದ್ದಾರೆ.

Share this article