ಹೊನ್ನಾವರ: ಶಾಲಾ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ನಡೆದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ತಾಲೂಕಿನ ಮಾರ್ಥೋಮ ಶಾಲೆಯಲ್ಲಿ ನಡೆಯಿತು. ಮಧ್ಯಾಹ್ನ ೧೨ಕ್ಕೆ ಕಾರ್ಯಕ್ರಮ ಉದ್ಘಾಟಿಸಿದ ಕುಮಟಾ-ಹೊನ್ನಾವರ ವಿಧಾನಸಭಾ ಶಾಸಕ ದಿನಕರ ಶೆಟ್ಟಿ ಮಕ್ಕಳ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ತಮ್ಮ ಪ್ರಚಾರ ಭಾಷಣಕ್ಕೆ ಬಳಸಿಕೊಂಡರು. ತಾನು ಮಾಡಿದ ಸಾಧನೆಯನ್ನು ಒಂದೊಂದೆಯಾಗಿ ಹೇಳುತ್ತಾ ಸಾಗಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಎನ್.ಆರ್. ಹೆಗಡೆ ಮಾತನಾಡಿ, ಶಿಕ್ಷಣ ಇಲಾಖೆ ವಿವಿಧ ಕಾರ್ಯಕ್ರಮದಲ್ಲಿ ಪ್ರತಿಭಾ ಕಾರಂಜಿ ಒಂದಾಗಿದೆ. 35ಕ್ಕೂ ಹೆಚ್ಚು ಕಾರ್ಯಕ್ರಮಗಳು ಪ್ರತಿಭಾ ಕಾರಂಜಿಯಲ್ಲಿದೆ. ಮಕ್ಕಳು ತಮ್ಮ ಆಸಕ್ತಿಯ ವಿಷಯದಲ್ಲಿ ಭಾಗವಹಿಸಲು ಅವಕಾಶವಿದೆ. ಪಠ್ಯದ ಜೊತೆ ಸಹಪಠ್ಯದಲ್ಲೂ ವಿದ್ಯಾರ್ಥಿಗಳು ಭಾಗವಹಿಸಿದಾಗ ಮಾನಸಿಕವಾಗಿ ಸಧೃಡವಾಗಲು ಸಾಧ್ಯ ಎಂದರು.
ಮಾರ್ಥೋಮಾ ಶಾಲೆಯ ರೆ.ಫಾದರ್ ಇಶಾನ್ ಜೋಶ್ವಾಲ್, ಕರ್ಕಿ ಗ್ರಾಪಂ ಸದಸ್ಯ ಗಜಾನನ ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ವಿನಾಯಕ ಅವಧಾನಿ, ಬಿಆರ್ ಸಿ ಸಮನ್ವಯಾಧಿಕಾರಿ ಜಯಶ್ರೀ ನಾಯ್ಕ, ಶಿಕ್ಷಕ ಸಂಘದ ಪದಾಧಿಕಾರಿಗಳಾದ ಎಂ.ಜಿ. ನಾಯ್ಕ, ಸತೀಶ ನಾಯ್ಕ, ಸಂತೋಷಕುಮಾರ್ ನಾಯ್ಕ, ಪ್ರಕಾಶ್ ನಾಯ್ಕ, ಬಾಬು ನಾಯ್ಕ, ಸುಧೀಶ ನಾಯ್ಕ ಉಪಸ್ಥಿತರಿದ್ದರು. ನಂತರ ವಿವಿಧ ಪ್ರಕಾರದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಪಕ್ಕದ ಜಿಲ್ಲೆಯಲ್ಲಿದೆ, ಹೀಗಾಗಿ ಅಭಿವೃದ್ಧಿ ಮಾಡಿಲ್ಲ!
ಇತ್ತೀಚೆಗೆ ಕುಮಟಾದಲ್ಲಿ ನಡೆದಿದ್ದ ಪ್ರತಿಭಾ ಕಾರಂಜಿಯಲ್ಲಿ ಶಿಕ್ಷಕರು ಕಡಿಮೆ ಸಂಖ್ಯೆಯಲ್ಲಿ ಸೇರಿದ್ದರು. ಹೊನ್ನಾವರದಲ್ಲಿ ಹೆಚ್ಚು ಜನ ಸೇರಿದ್ದೀರಿ. ಶಿಕ್ಷಕರೆಲ್ಲಾ ಬುದ್ದಿವಂತರಿದ್ದೀರಿ. ಶಿಕ್ಷಕರಿಗೆ ಓರ್ವ ಜನಪ್ರತಿನಿಧಿಯನ್ನು ಗೆಲ್ಲಿಸುವ ಅಥವಾ ಸೋಲಿಸುವ ಶಕ್ತಿ ಇರುತ್ತದೆ. ಮುಂದಿನ ಬಾರಿಯು ಇಲೆಕ್ಷನ್ ಗೆ ನಿಲ್ಲುತ್ತೇನೆ. ಶಿಕ್ಷಕರು ಮತ ನೀಡಿ ಗೆಲ್ಲಿಸಬೇಕು. ನಾನು ಹಲವಾರು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಹೊನ್ನಾವರ ಡಿಗ್ರಿ ಕಾಲೇಜು ಕಟ್ಟಡ ಮಂಜೂರಿ ಮಾಡಿಸಿದ್ದು ನಾನೆ. ಪದವಿ ಪೂರ್ವ ಕಾಲೇಜನ್ನು ಮಂಜೂರಿ ಮಾಡಿಸುವ ಎಂದಿದ್ದೆ. ಆದರೆ ಅದು ಪಕ್ಕದ ಭಟ್ಕಳ ವಿಧಾನಸಭಾ ಕ್ಷೇತ್ರದ ನೆಲದಲ್ಲಿರುವುದರಿಂದ ಅದನ್ನು ಅಭಿವೃದ್ಧಿ ಮಾಡಿದರೆ ಅದರ ಶ್ರೇಯಸ್ಸು ಆ ಕ್ಷೇತ್ರದ ಶಾಸಕನಿಗೆ ಹೋಗುತ್ತದೆ. ಹೀಗಾಗಿ ಅದರ ಅಭಿವೃದ್ಧಿ ಮಾಡಿಲ್ಲ ಎಂದರು. ತಾಲೂಕಿನ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಬರುವ ಪ.ಪೂ ಕಾಲೇಜಿಗೆ ತಮ್ಮ ಕೊಡುಗೆ ಇಲ್ಲ ಎಂಬುದು ಚರ್ಚೆಗೆ ಗ್ರಾಸವಾಗಿದೆ.