ಕನ್ನಡಪ್ರಭ ವಾರ್ತೆ ಕುಣಿಗಲ್ ವೋಟ್ ಚೋರಿ ವಿಚಾರದಲ್ಲಿ ಚುನಾವಣಾ ಆಯೋಗ ಸರಿಯಾದ ತನಿಖೆ ನಡೆಸದೆ ಕೇವಲ ಕಾಂಗ್ರೆಸ್ಸಿಗರನ್ನು ದಾಖಲೆ ಕೇಳುವ ನೆಪ ಮಾಡುತ್ತಿದ್ದು ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ ಎಂಬ ಅನುಮಾನ ಎಂದು ಶಾಸಕ ಡಾ. ರಂಗನಾಥ್ ಆರೋಪಿಸಿದ್ದಾರೆ ಕುಣಿಗಲ್ ಪಟ್ಟಣದ ಹುಚ್ಚ ಮಾಸ್ತಿ ಗೌಡ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮೇಕೆದಾಟು ಯೋಜನೆ ಯ ತಮಿಳುನಾಡು ಅರ್ಜಿಯನ್ನು ವಜಾಗೊಳಿಸಿದ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ನಡೆಸುವ ಸಂದರ್ಭದಲ್ಲಿ ಭಾಗವಹಿಸಿ ಮಾತನಾಡಿದರು. ಪಟ್ಟಣದ ಹುಚ್ಚಮಾಸ್ತಿಗೌಡ ವೃತ್ತದಲ್ಲಿ ನೆರೆದಿದ್ದ ಹಲವಾರು ಕಾಂಗ್ರೆಸ್ ಕಾರ್ಯಕರ್ತರಿಗೆ ಸಿಹಿ ತಿನ್ನಿಸಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಸಂದರ್ಭದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ವೋಟ್ ಚೋರಿ ನಡೆದಿರುವ ಬಗ್ಗೆ ಹಲವಾರು ಮಾಹಿತಿಗಳನ್ನು ಚುನಾವಣಾ ಆಯೋಗಕ್ಕೆ ಮಾಧ್ಯಮದ ಮುಖಾಂತರ ನೀಡಲಾಗಿದೆ. ಆದರೂ ಕೂಡ ಆಯೋಗ ಸೂಕ್ತ ತನಿಖೆ ನಡೆಸದೆ ಕೇವಲ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿರಬಹುದು ಎಂಬ ಅನುಮಾನಗಳು ಕಾಡುತ್ತಿದೆ ಎಂದರು. ಬೆಂಗಳೂರು ಸೇರಿದಂತೆ ಕರ್ನಾಟಕದ ಜನತೆಗೆ ಅವಶ್ಯಕತೆ ಇದ್ದಂತಹ ಮೇಕೆದಾಟು ಯೋಜನೆಯನ್ನು ಪ್ರಾರಂಭಿಸುವ ಸಲುವಾಗಿ ಅಂದು ನಡೆಸಿದ ಬೃಹತ್ ಪಾದಯಾತ್ರೆಯ ಫಲವಾಗಿ ಈ ದಿನ ಕನ್ನಡಿಗರಿಗೆ ಸಿಕ್ಕ ಬಹುಮಾನ ಆಗಿದೆ ಡಿಕೆ ಶಿವಕುಮಾರ್ ಇಂತಹ ಹಲವರು ಉತ್ತಮ ಕಾಮಗಾರಿಗಳ ಹೋರಾಟದಲ್ಲಿ ಭಾಗವಹಿಸಿರುವುದು ಅವರ ಈ ಪ್ರಯತ್ನಕ್ಕೆ ಫಲ ಸಿಕ್ಕಿದೆ ಎಂದರು. ಬಿಹಾರದ ಚುನಾವಣೆಯಲ್ಲಿ ಕಾಂಗ್ರೆಸ್ ಮೈತ್ರಿಕೂಟ ಮುಖಭಂಗ ಅನುಭವಿಸಿದ್ದರ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಿತೀಶ್ ಕುಮಾರ್ ಚುನಾವಣೆಗೆ ಮುನ್ನ ಪ್ರತಿ ಮಹಿಳೆಯರಿಗೆ 10,000 ನೀಡುವ ಮುಖಾಂತರ ಅವರನ್ನು ಆಮಿಷ ಒಡ್ಡಿ ಮತ ಪಡೆದಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಮೈತ್ರಿಕೂಟ ಹಾಕಿಕೊಂಡಂತಹ ಯೋಜನೆ ಹಾಗೂ ರಾಜಕೀಯ ತಂತ್ರ ವಿಫಲ ಆಗಿರಬಹುದು ಈ ಬಗ್ಗೆ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ರಂಗಣ್ಣ ಗೌಡ, ನಾರಾಯಣ, ಹರೀಶ್, ರಾಜಶೇಖರ್, ರಾಜಣ್ಣ, ಸೇರಿದಂತೆ ಇತರರು ಇದ್ದರು.