ಕೇಂದ್ರ ಚುನಾವಣಾ ವೆಚ್ಚ ವೀಕ್ಷಕರಿಂದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ
ಹಾಸನ ಲೋಕಸಭಾ ಕ್ಷೇತ್ರಕ್ಕೆ ನಡೆಯುವ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಸಂಪೂರ್ಣ ಖರ್ಚು, ವೆಚ್ಚಗಳನ್ನು ನಿಯಮಾನುಸಾರವೇ ಮಾಡಬೇಕು. ಅಕ್ರಮವಾಗಿ ನಡೆಸುವ ಎಲ್ಲಾ ವೆಚ್ಚಗಳಿಗೆ ಸಂಪೂರ್ಣವಾಗಿ ಕಡಿವಾಣ ಹಾಕಲು ಎಲ್ಲ ರೀತಿಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಚುನಾವಣಾ ಆಯೋಗದ ವೆಚ್ಚ ವೀಕ್ಷಕರಾದ ವಿಕಾಸ್ ಸಿಂಗ್ ಭಗ್ರಿ ಹಾಗೂ ವೈಭವ್ ಅಗರವಾಲ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ನೋಡಲ್ ಅಧಿಕಾರಿಗಳು ಹಾಗೂ ಎಲ್ಲ ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾ ಅಧಿಕಾರಿಗಳು ಮತ್ತು ವಿವಿಧ ಚುನಾವಣಾ ತಂಡಗಳ ಮುಖ್ಯಸ್ಥರ ಸಭೆ ನಡೆಸಿ ಮಾತನಾಡಿದರು.ಚುನಾವಣಾ ಸಂದರ್ಭದಲ್ಲಿ ಪ್ರತಿಯೊಂದು ಖರ್ಚು, ವೆಚ್ಚಗಳೂ ಚುನಾವಣಾ ಆಯೋಗದ ನಿಯಮಾನುಸಾರವೇ ನಡೆಯಬೇಕು. ಪ್ರತಿಯೊಬ್ಬ ಅಭ್ಯರ್ಥಿ ಬ್ಯಾಂಕ್ ಖಾತೆಯ ಮೂಲಕವೇ ಪಾವತಿಯಾಗಬೇಕು. ಯಾವುದೇ ಕಾರಣಕ್ಕೂ ಅಕ್ರಮವಾಗಿ ಪಾವತಿ ಮತ್ತು ವೆಚ್ಚ ಮಾಡಲು ಅವಕಾಶ ನೀಡಬಾರದು. ಚುನಾವಣಾ ಆಯೋಗದ ಕೈಪಿಡಿಯನುಸಾರ ಎಲ್ಲ ತಪಾಸಣಾ ತಂಡಗಳು ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು.
ವಿವಿಧ ಚುನಾವಣಾ ಸಭೆ, ಸಮಾರಂಭಗಳ ಸಂಪೂರ್ಣ ಚಿತ್ರೀಕರಣ ನಡೆಸಿ, ವೆಚ್ಚ ಲೆಕ್ಕ ನಿರ್ವಹಿಸಬೇಕು. ಅನುಮತಿ ಪಡೆದುಕೊಂಡಿರುವಷ್ಟೇ ವ್ಯವಸ್ಥೆ ಇರುವ ಬಗ್ಗೆ ಪರಿಶೀಲಿಸಬೇಕು. ಯಾವುದೇ ಚುನಾವಣಾ ಸಭೆಗಳಲ್ಲಿ ಅಭ್ಯರ್ಥಿಯ ಫೋಟೋ ಕಂಡು ಬಂದರೆ ಅಥವಾ ಭಾಷಣಗಳಲ್ಲಿ ಹೆಸರು ಪ್ರಸ್ತಾಪವಾದರೆ, ಆ ಸಭೆಯ ಸಂಪೂರ್ಣ ವೆಚ್ಚವನ್ನು ಅಭ್ಯರ್ಥಿಯ ಲೆಕ್ಕಕ್ಕೆ ತೆಗೆದುಕೊಳ್ಳಲು ನಿರ್ದೇಶಿಸಿದರು.
ಸಭೆಯಲ್ಲಿ ವೆಚ್ಚ ವೀಕ್ಷಕರು ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ತಪಾಸಣಾ ತಂಡಗಳ ಕಾರ್ಯಾಚರಣೆಗಳ ಮಾಹಿತಿ ಪಡೆದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್ ಪೂರ್ಣಿಮಾ, ಜಿಲ್ಲಾ ಪೊಲೀಸ್ ಅಧೀಕ್ಷಕ ಮುಹಮ್ಮದ್ ಸುಜೀತಾ, ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ, ಆದಾಯ ತೆರಿಗೆ ಇಲಾಖೆ ಅಧಿಕಾರಿ ದರ್ಶನ್ ಕುಮಾರ್, ಅಬಕಾರಿ ಅಧಿಕಾರಿ ಮೋತಿಲಾಲ್, ಲೀಡ್ ಬ್ಯಾಂಕ್ ಮ್ಯಾನೇಜರ್ ಗಾಯತ್ರಿ ದೇವಿ ಇದ್ದರು.