ಸರ್ಕಾರಿ ನೌಕರರ ಸಂಘದ ಚುನಾವಣೆ: ಸಿದ್ಧತೆ ಪರಿಶೀಲನೆ

KannadaprabhaNewsNetwork | Updated : Oct 28 2024, 01:08 AM IST

ಸಾರಾಂಶ

ಭೂ- ಮಾಪನ ಮತ್ತು ಮುದ್ರಾಂಕ ಇಲಾಖೆಗೆ ನಿಗದಿಪಡಿಸಿದ್ದ 2 ಸ್ಥಾನಗಳಿಗೆ ಸಲ್ಲಿಸಿದ್ದ ನಾಮಪತ್ರಗಳು ತಿರಸ್ಕೃತ

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ತಾಲೂಕು ಸರ್ಕಾರಿ ನೌಕರರ ಸಂಘದ 11 ನಿರ್ದೇಶಕ ಸ್ಥಾನಗಳಿಗೆ ಅ, 28 ರಂದು ಸೋಮವಾರ ನಡೆಯುವ ಚುನಾವಣೆಗೆ ಸಕಲ ಸಿದ್ದತೆ ಕೈಗೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ವೆಂಕಟೇಶ್ ಹೇಳಿದರು.

ಪಟ್ಟಣದ ಬಿಆರ್ ಸಿ ಕೇಂದ್ರದಲ್ಲಿ ತೆರೆದಿರುವ ಮತಗಟ್ಟೆ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 34 ನಿರ್ದೇಶಕ ಸ್ಥಾನಗಳ ಪೈಕಿ ಈಗಾಗಲೇ 21 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು 11 ಸ್ಥಾನಗಳಿಗೆ ಸೋಮವಾರ ಚುನಾವಣೆ ನಡೆಯಲಿದೆ ಎಂದರು.

ಭೂ- ಮಾಪನ ಮತ್ತು ಮುದ್ರಾಂಕ ಇಲಾಖೆಗೆ ನಿಗದಿಪಡಿಸಿದ್ದ 2 ಸ್ಥಾನಗಳಿಗೆ ಸಲ್ಲಿಸಿದ್ದ ನಾಮಪತ್ರಗಳು ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಅವುಗಳು ಖಾಲಿ ಇರಲಿವೆ ಎಂದು ಅವರು ಮಾಹಿತಿ ನೀಡಿದರು.

ಸೋಮವಾರ ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ಹಾಸನ, ಮೈಸೂರು ರಸ್ತೆಯಲ್ಲಿನ ಬಿ.ಆರ್.ಸಿ ಕೇಂದ್ರದಲ್ಲಿ ಚುನಾವಣೆ ನಡೆಯಲಿದ್ದು, ಆನಂತರ ಮತ ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸುವುದಾಗಿ ಅವರು ಹೇಳಿದರು.

ಚುನಾವಣೆಗೆ 9 ಕೊಠಡಿಗಳಲ್ಲಿ ಇಲಾಖಾವಾರು ಮತಗಟ್ಟೆ ತೆರೆಯಲಾಗಿದ್ದು 40 ಸಿಬ್ಬಂದಿ ಮತ್ತು ಅಗತ್ಯ ಪೊಲೀಸ್ ಭದ್ರತೆಯ ಜತೆಗೆ ತುರ್ತು ಸೇವೆಗೆ ಆರೋಗ್ಯ ಇಲಾಖೆಯ ಸಹಕಾರ ಕೋರಲಾಗಿದೆ. ಸರ್ಕಾರಿ ನೌಕರರು ಮತದಾನ ಮಾಡಲು ಬೆಳಗ್ಗೆ ಮತ್ತು ಮಧ್ಯಾಹ್ನ ಪಾಳಿಯ ಮೇಲೆ 2 ಗಂಟೆ ಅವಕಾಶ ನೀಡಲಾಗಿದೆ ಎಂದು ನುಡಿದರು.

ಪ್ರಾಥಮಿಕ ಶಿಕ್ಷಕರ ಕ್ಷೇತ್ರದ ನಾಲ್ಕು, ಕಂದಾಯ ಇಲಾಖೆ, ತಾಂತ್ರಿಕ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಮತ್ತು ಒಬಿಸಿ ಇಲಾಖೆ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ, ನ್ಯಾಯಾಂಗ ಇಲಾಖೆ, ಪ್ರೌಢಶಾಲಾ ವಿಭಾಗ ಮತ್ತು ಅರಣ್ಯ ಇಲಾಖೆಯ ತಲಾ ಒಂದು ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ ಎಂದು ಹೇಳಿದರು.

11 ಕ್ಷೇತ್ರಗಳಿಂದ 1,179 ಮಂದಿ ಸರ್ಕಾರಿ ನೌಕರ ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದು, ಎಲ್ಲರೂ ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ಮತದಾನ ಮಾಡಲು ಅಗತ್ಯ ಸಿದ್ಧತೆ ಮಾಡಲಾಗಿದೆ ಎಂದು ಹೇಳಿದರು. ಸಹಾಯಕ ಚುನಾವಣಾಧಿಕಾರಿ ಮಂಜುನಾಥ್, ಸುಬ್ಬುರಾಮನ್ ಇದ್ದರು.

--- ಬಾಕ್ಸ್--

ನ.16ಕ್ಕೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಕನ್ನಡಪ್ರಭ ವಾರ್ತೆ ಕೆ.ಆರ್. ನಗರತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನ. 16 ರಂದು ಶನಿವಾರ ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿಕಾರಿ ವೆಂಕಟೇಶ್ ತಿಳಿಸಿದರು. ಪಟ್ಟಣದ ಬಿ.ಆರ್.ಸಿ ಕೇಂದ್ರದಲ್ಲಿ ತೆರೆದಿರುವ ನಿರ್ದೇಶಕ ಸ್ಥಾನಗಳ ಚುನಾವಣಾ ಮತಗಟ್ಟೆ ಪರಿಶೀಲಿಸಿ ಮಾತನಾಡಿದ ಅವರು, ಅ. 30 ರಿಂದ ನ. 7ರವರೆಗೆ ಪ್ರತಿದಿನ ಬೆಳಗ್ಗೆ 11 ರಿಂದ ಸಂಜೆ 4.30ರವರೆಗೆ ನಾಮಪತ್ರ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ ಎಂದರು. ನ. 8 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, 11 ರಂದು ಹಿಂಪಡೆಯಲು ಸಮಯ ನಿಗದಿಪಡಿಸಲಾಗಿದ್ದು, ಆನಂತರ ಅಂತಿಮ ಅಭ್ಯರ್ಥಿಗಳ ಪಟ್ಟಿ ಪ್ರಕಟಿಲಾಗುತ್ತದೆ ಎಂದರು.ಅಂತಿಮವಾಗಿ ನ. 16ರಂದು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಿ ಆ ನಂತರ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

Share this article