ಮನ್ಮುಲ್ ನಿರ್ದೇಶಕ ಸ್ಥಾನಗಳಿಗೆ 2025ರ ಫೆಬ್ರವರಿಯಲ್ಲಿ ಚುನಾವಣೆ

KannadaprabhaNewsNetwork |  
Published : Oct 25, 2024, 12:45 AM IST
24ಕೆಎಂಎನ್ ಡಿ15 | Kannada Prabha

ಸಾರಾಂಶ

ಮಂಡ್ಯ ಜಿಲ್ಲಾ ಹಾಲು ಒಕ್ಕೂಟಕ್ಕೆ 2025ರ ಫೆಬ್ರವರಿ 2ರಂದು ನಡೆಯಲಿರುವ ಚುನಾವಣೆಯಲ್ಲಿ ತಾಲೂಕಿಗೆ ಎರಡು ನಿರ್ದೇಶಕ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾಗಿ ಶಾಸಕ ಎಚ್.ಟಿ.ಮಂಜು ಮತ್ತು ನಾಟನಹಳ್ಳಿ ಬೋರ್ ವೆಲ್ ಮಹೇಶ್ ಅಭ್ಯರ್ಥಿಗಳಾಗಿ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಮಂಡ್ಯ ಜಿಲ್ಲಾ ಹಾಲು ಒಕ್ಕೂಟಕ್ಕೆ 2025ರ ಫೆಬ್ರವರಿ 2ರಂದು ನಡೆಯಲಿರುವ ಚುನಾವಣೆಯಲ್ಲಿ ತಾಲೂಕಿಗೆ ಎರಡು ನಿರ್ದೇಶಕ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾಗಿ ಶಾಸಕ ಎಚ್.ಟಿ.ಮಂಜು ಮತ್ತು ನಾಟನಹಳ್ಳಿ ಬೋರ್ ವೆಲ್ ಮಹೇಶ್ ಅಭ್ಯರ್ಥಿಗಳಾಗಿ ಆಯ್ಕೆಯಾಗಿದ್ದಾರೆ.

ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮನ್ಮುಲ್ ಅಭ್ಯರ್ಥಿಗಳನ್ನಾಗಿ ಶಾಸಕ ಎಚ್.ಟಿ.ಮಂಜು ಮತ್ತು ಬೋರ್‌ವೆಲ್ ಮಹೇಶ್ ಅವರ ಆಯ್ಕೆಯನ್ನು ಒಮ್ಮತದಿಂದ ಪ್ರಕಟಿಸಲಾಯಿತು.

ಈ ವೇಳೆ ಮುಖಂಡರು ಮಾತನಾಡಿ, ಜೆಡಿಎಸ್ ಕಾರ್ಯಕರ್ತರ ಪಕ್ಷ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಂಸದರಾಗಿ, ಕೇಂದ್ರ ಸಚಿವರಾಗಿದ್ದಾರೆ. ಅಧಿಕಾರ ಇರಲಿ ಅಥವಾ ಇಲ್ಲದಿರಲಿ ಕುಮಾರಣ್ಣ ನಾಡಿನ ರೈತರ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ. ಕಾರ್ಯಕರ್ತರನ್ನು ನಂಬಿ ಕುಮಾರಣ್ಣ ಜನಪರ ಹೋರಾಟ ನಡೆಸುತ್ತಿದ್ದಾರೆ ಎಂದರು.

ಮನ್ಮುಲ್ ಚುನಾವಣೆ ಸೇರಿದಂತೆ ಮುಂದೆ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಕುಮಾರಣ್ಣನಿಗೆ ನೈತಿಕ ಶಕ್ತಿ ತುಂಬುವ ಕೆಲಸ ಮಾಡುವಂತೆ ಮುಖಂಡರು ಅಭಿಪ್ರಾಯಪಟ್ಟರು.

ಮನ್ಮುಲ್ ಹಾಲಿ ನಿದೇಶಕ ಡಾಲು ರವಿ ಮತ್ತು ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್ ಈಗಾಗಲೇ ಕಾಂಗ್ರೆಸ್ ಸಂಪರ್ಕದಲ್ಲಿದ್ದು, ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆ. ಹೀಗಾಗಿ ಶಾಸಕ ಎಚ್.ಟಿ.ಮಂಜು ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಬೇಕು. ಎರಡನೇ ಅಭ್ಯರ್ಥಿಯನ್ನಾಗಿ ತಮಗೆ ಬೇಕಾದವರನ್ನು ಜೊತೆ ಮಾಡಿಕೊಂಡು ಚುನಾವಣೆಗೆ ನಿಲ್ಲಬೇಕು ಕಾರ್ಯಕರ್ತರು ಒತ್ತಾಯಿಸಿದರು.

ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ ಮಾತನಾಡಿ, ಜೆಡಿಎಸ್‌ನಿಂದ ಬೆಳೆದು ಹಲವು ಮುಖಂಡರು ಪಕ್ಷ ಬಿಟ್ಟು ಹೋದರು. ಆದರೂ ತಾಲೂಕಿನಲ್ಲಿ ಪಕ್ಷ ಪ್ರಬಲವಾಗಿಯೇ ಉಳಿದಿದೆ. ಜೆಡಿಎಸ್ ಗರಿಕೆ ಹುಲ್ಲಿನಂತೆ. ಯಾರು ಎಷ್ಟೇ ಕತ್ತರಿಸಿದರೂ ಮತ್ತೆ ಮತ್ತೆ ಚಿಗುರುತ್ತದೆ ಎಂದರು.

ಶಾಸಕರೊಂದಿಗೆ ಎರಡನೇ ಅಭ್ಯರ್ಥಿಯನ್ನಾಗಿ ಎ.ಎನ್.ಜಾನಕೀರಾಂ, ಟಿ.ಎನ್.ಬಲದೇವ್, ಮಲ್ಲೇನಹಳ್ಳಿ ಮೋಹನ್ ಮತ್ತು ಬೋರ್ ವೆಲ್ ಮಹೇಶ್ ಅವರ ಹೆಸರು ಚರ್ಚಿತವಾಗಿ ಅಂತಿಮವಾಗಿ ಬೋರ್‌ವೆಲ್ ಮಹೇಶ್ ಅವರನ್ನು ಕಣಕ್ಕಿಳಿಸಲು ಸಭೆ ನಿರ್ಧರಿಸಿತು.

ಶಾಸಕ ಎಚ್.ಟಿ.ಮಂಜು ಮಾತನಾಡಿ, ಶಾಸಕನಾದ ನನ್ನ ಬಗ್ಗೆ ಡಾಲು ರವಿ ಅಗೌರವದ ಮಾತನಾಡುತ್ತಿದ್ದಾರೆ. ಹೀಗಾಗಿ ಕಾರ್ಯಕರ್ತರ ಒತ್ತಾಯದ ಮೇರೆಗೆ ಅಭ್ಯರ್ಥಿಯಾಗುತ್ತಿದ್ದೇನೆ ಎಂದರು.

ಮನ್ಮುಲ್ ಅಧ್ಯಕ್ಷ ರಾಮಚಂದ್ರ ರಾಜೀನಾಮೆ ನೀಡಿದ್ದಾಗ ಡಾಲು ರವಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ತೀರ್ಮಾನಿಸಲಾಗಿತ್ತು. ಆದರೆ, ರವಿ ಡೇರಿ ನಾಮಿನಿ ವೇಳೆ ಪಕ್ಷದ ಪರ ನಿಲ್ಲದೆ ಸರ್ಕಾರದ ಪರ ನಿಂತರು. ಕಾಂಗ್ರೆಸ್ ಪಕ್ಷದ ಮನೆಯಲ್ಲಿ ನಮ್ಮ ಅಭ್ಯರ್ಥಿಗಳು ತೀರ್ಮಾನವಾಗುವುದು ಜೆಡಿಎಸ್‌ಗೆ ಮಾಡುವ ವಂಚನೆಯಾಗಿದೆ ಎಂದರು.

ಮನ್ಮುಲ್ 2ನೇ ಅಭ್ಯರ್ಥಿಯನ್ನು ಬಿಜೆಪಿಯಿಂದ ಆಯ್ಕೆಗಾಗಿ ಮಾಜಿ ಸಚಿವ ಕೆ.ಸಿ.ನಾರಾಯಣಗೌಡರೊಂದಿಗೆ ಮಾತನಾಡಿದ್ದೆ. ಆದರೆ, ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಮುಂದೆ ಬಾರದ ಕಾರಣ ಜೆಡಿಎಸ್‌ನಿಂದ ಹಾಕಲಾಗುತ್ತಿದೆ. ಕಾರ್ಯಕರ್ತರು ಡೈರಿ ಚುನಾವಣೆಯಲ್ಲಿ ಪಕ್ಷ ನಿಷ್ಠರಿಗೆ ಮತ ನೀಡಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವಂತೆ ಮನವಿ ಮಾಡಿದರು.

ಈ ವೇಳೆ ಪಕ್ಷದ ಮುಖಂಡರಾದ ಹುಲ್ಲೇಗೌಡ, ಅಗ್ರಹಾರಬಾಚಹಳ್ಳಿ ನಾಗೇಶ್, ಲಾಯರ್ ಧನಂಜಯ, ತೋಂಟಪ್ಪ ಶೆಟ್ಟಿ, ಮಲ್ಲೇನಹಳ್ಳಿ ಮೋಹನ್, ಎ.ಎನ್.ಸಂಜೀವಪ್ಪ, ನರಸನಾಯಕ, ಐನೋರಹಳ್ಳಿ ಮಲ್ಲೇಶ್, ಪಕ್ಷದ ವಿವಿಧ ಹೋಬಳಿ ಘಟಕಗಳ ಅಧ್ಯಕ್ಷರುಗಳಾದ ರವಿಕುಮಾರ್, ಶ್ಯಾಮಣ್ಣ, ಬಸವಲಿಂಗಪ್ಪ, ವಸಂತಕುಮಾರ್, ನಂದೀಶ್, ಬೋರ್‌ವೆಲ್ ಮಹೇಶ್, ಮಹಿಳಾ ಘಟಕದ ಅಧ್ಯಕ್ಷೆ ರೇಕಾ, ಜಯಲಕ್ಷ್ಮಿ, ರತಿ ಮತ್ತಿತರರು ಇದ್ದರು.

PREV

Recommended Stories

ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ
ಬ್ಯಾಲೆಟ್‌ ಬಳಕೆಗೆ ಸುಗ್ರೀವಾಜ್ಞೆ ಅಗತ್ಯವಿಲ್ಲ : ಸಂಪುಟದಲ್ಲಿ ಚರ್ಚೆ