28ರಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಚುನಾವಣೆ

KannadaprabhaNewsNetwork | Published : May 13, 2025 11:58 PM
ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಬ್ಯಾಂಕ್ ಆಡಳಿತ ಮಂಡಳಿಯ ೧೮ ನಿರ್ದೇಶಕರ ಸ್ಥಾನಕ್ಕೆ ಮೇ ೨೮ ರಂದು ಚುನಾವಣೆ ನಿಗಧಿಯಾಗಿದೆ. ಹೊಸದಾಗಿ ರಚನೆಯಾಗಿರುವ ಚೇಳೂರು ಮತ್ತು ಮಂಚೇನಹಳ್ಳಿ ತಾಲೂಕುಗಳಿಗೂ ಸಹ ಆಡಳಿತ ಮಂಡಳಿಯಲ್ಲಿ ನಿರ್ದೇಶಕ ಸ್ಥಾನವನ್ನು ಕಲ್ಪಿಸಲಾಗುವುದು.
Follow Us

ಕನ್ನಡಪ್ರಭ ವಾರ್ತೆ ಕೋಲಾರ

ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಬ್ಯಾಂಕ್ ಆಡಳಿತ ಮಂಡಳಿಯ ೧೮ ನಿರ್ದೇಶಕರ ಸ್ಥಾನಕ್ಕೆ ಮೇ ೨೮ ರಂದು ಚುನಾವಣೆ ನಿಗಧಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಚುನಾವಣಾ ಅಧಿಸೂಚನೆ ಪ್ರಕಟಿಸಿದ್ದಾರೆ.

ಹೊಸದಾಗಿ ರಚನೆಯಾಗಿರುವ ಚೇಳೂರು ಮತ್ತು ಮಂಚೇನಹಳ್ಳಿ ತಾಲ್ಲೂಕುಗಳಿಗೂ ಸಹ ಆಡಳಿತ ಮಂಡಳಿಯಲ್ಲಿ ನಿರ್ದೇಶಕ ಸ್ಥಾನವನ್ನು ಕಲ್ಪಿಸಲಾಗುವುದು ಇದರಿಂದ ಡಿಸಿಸಿ ಬ್ಯಾಂಕ್ ವ್ಯಾಪ್ತಿಗೆ ಸೇರಲಿರುವ ಕೋಲಾರ-ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಯ ೧೪ ತಾಲ್ಲೂಕುಗಳಿಂದ ಒಟ್ಟು ೧೮ ನಿರ್ದೇಶಕರನ್ನು ಶೇರುದಾರರ ಆಯ್ಕೆ ಮಾಡಬೇಕಿದೆ.

18 ಸ್ಥಾನಗಳಿಗೆ ಚುನಾವಣೆ:

ಎರಡೂ ಜಿಲ್ಲೆಗಳಿಂದ ಟಿ.ಎ.ಪಿ.ಸಿ.ಎಂ.ಎಸ್‌ಗಳಿಂದ ಒಬ್ಬ ನಿರ್ದೇಶಕರು ಎರಡು ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘದಿಂದ ತಲಾ ಒಬ್ಬೊಬ್ಬ ನಿರ್ದೇಶಕರು ಹಾಗೂ ಎರಡೂ ಜಿಲ್ಲೆಯ ಇನ್ನಿತರೆ ಸಹಕಾರ ಸಂಘಗಳಿಂದ ಓರ್ವ ನಿರ್ದೇಶಕರು ಸೇರಿದಂತೆ ಒಟ್ಟು ೧೮ ಮಂದಿ ನಿರ್ದೇಶಕರು ಆಡಳಿತ ಮಂಡಳಿಗೆ ಅವಕಾಶ ಕಲ್ಪಿಸಲಾಗಿದೆ.

ಮೇ ೧೨ ರಂದು ಅಧಿಸೂಚನೆ ಹೊರಡಿಸಲಾಗಿದ್ದು, ಚುನಾವಣಾ ಅಧಿಕಾರಿಯಾಗಿ ಉಪವಿಭಾಗಾಧಿಕಾರಿ ಡಾ.ಮೈತ್ರಿ ನಿಯೋಜನಗೊಂಡಿದ್ದಾರೆ. ಮೇ ೧೮ ರಿಂದ ೨೦ ರವರೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬಹುದು. ಮೇ ೨೧ರಂದು ನಾಮಪತ್ರಗಳ ಪರಿಶೀಲನೆ, ನಾಮಪತ್ರಗಳನ್ನು ವಾಪಸ್ ಪಡೆಯಲು ಮೇ ೨೩ ಕೊನೆಯ ದಿನ. ಮೇ ೨೮ ರಂದು ಬೆಳಗ್ಗೆ ೯ ರಿಂದ ಸಂಜೆ ೪ರವರೆಗೆ ಮತದಾನ ಹಾಗೂ ಅಂದೇ ಮತ ಎಣಿಕೆ ಕಾರ್ಯ ನಡೆಯಲಿದೆ.

ಮತದಾರರ ವಿವರ:

ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡು ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ೧೦೨೯ ಮಂದಿ ಮತದಾರರಿದ್ದು, ಈ ಪೈಕಿ ಅರ್ಹ ಮತದಾರರು ೪೯೫ ಮಂದಿ, ಅನರ್ಹ ಮತದಾರರು ೬೨೫ ಮಂದಿ ಇದ್ದಾರೆ. ಅನುಬಂಧ ೩ ರಲ್ಲಿ ೯ ಮಂದಿ ಮತದಾರರಿದ್ದಾರೆ, ಸರ್ಕಾರದ ನಾಮಿನಿ ನಿರ್ದೇಶಕರ ಒಬ್ಬರು , ಜೆ.ಆರ್.ಸಿ.ಎಸ್ ಇಬ್ಬರು ಹಾಗೂ ೧ ಅಪೆಕ್ಸ್ ಬ್ಯಾಂಕ್ ನಿರ್ದೇಶಕರು ಸೇರಿದಂತೆ ಮೂವರು ನಿರ್ದೇಶಕರಿದ್ದಾರೆ. ಹೊಸದಾಗಿ ಎರಡು ಚೇಳೂರು ಮತ್ತು ಮಂಜೇನಹಳ್ಳಿ ಎರಡು ನಿರ್ದೇಶಕ ಸ್ಥಾನಗಳನ್ನು ಸೇರ್ಪಡೆ ಮಾಡಲಾಗಿದೆ.

ಮೇ ೨೮ ರಂದು ಮತದಾನದ ಪ್ರಕ್ರಿಯೆ ಪೂರ್ಣಗೊಂಡ ನಂತರ ಅಂದೇ ಕೋಲಾರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.