ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಚಿಕ್ಕಮಗಳೂರು ನಗರಸಭೆಯಲ್ಲಿ ಬಿಜೆಪಿ ಬಹುಮತ ಹೊಂದಿದ್ದರೂ, ಒಳಗಿನ ಭಿನ್ನಮತದಿಂದಾಗಿ ಈಗಾಗಲೇ ಮೂವರು ಸದಸ್ಯರು ಬಿಜೆಪಿಯಿಂದ ದೂರ ಉಳಿದಿದ್ದಾರೆ. ಆದರೆ, ಜೆಡಿಎಸ್ ಬೆಂಬಲವೂ ಬಿಜೆಪಿಗೆ ಸಿಕ್ಕಿರುವುದರಿಂದಾಗಿ ಮತ್ತೆ ಕೊನೆ ಒಂಬತ್ತು ತಿಂಗಳೂರು ಬಿಜೆಪಿ ಅಧಿಕಾರಕ್ಕೇರುವುದು ನಿಚ್ಚಳವಾಗಿದೆ.
35 ಸಂಖ್ಯಾಬಲದ ನಗರಸಭೆಯಲ್ಲಿ ಬಿಜೆಪಿಯಿಂದ 18, ಕಾಂಗ್ರೆಸ್ 12, ಎಸ್ ಡಿಪಿಐ 1, ಪಕ್ಷೇತರ 1, ಮೂವರು ಜೆಡಿಎಸ್ ಪಕ್ಷದಿಂದ ಆಯ್ಕೆಯಾಗಿದ್ದರು.ಇದಲ್ಲದೆ ಅಧ್ಯಕ್ಷರ ಆಯ್ಕೆಗೆ ಓರ್ವ ಎಂಎಲ್ಎ ಹಾಗೂ ಎಂಪಿ ಮತ್ತು ಇಬ್ಬರು ಎಂಎಲ್ ಸಿಗಳು ಮತ ಚಲಾವಣೆಯ ಅಧಿಕಾರ ಹೊಂದಿದ್ದಾರೆ. ಹೀಗಾಗಿ ಪೂರ್ಣ ಬಹುಮತ ಪಡೆದಿರುವ ಬಿಜೆಪಿ ಅಧಿಕಾರದ ಗದ್ದುಗೆ ಏರುವುದರಲ್ಲಿ ಅನುಮಾನವಿಲ್ಲ. ಆದರೆ ಬಿಜೆಪಿಯಲ್ಲೇ ಒಂದಷ್ಟು ಗೊಂದಲಗಳಿವೆ ಬಿಜೆಪಿಯಿಂದ ಗೆದ್ದ 18 ಸದಸ್ಯರಲ್ಲಿ ಮೂವರು ಬಿಜೆಪಿಯಿಂದ ಮಾನಸಿಕವಾಗಿ ದೂರ ಸರಿದಂತಿದ್ದು ದೈಹಿಕವಾಗಿ ಮಾತ್ರ ಬಿಜೆಪಿ ಜೊತೆ ಇದ್ದಾರೆ. ಆದರೆ ಜೆಡಿಎಸ್ ಮೈತ್ರಿ ಕಾರಣದಿಂದಾಗಿ ಮೂರು ಸದಸ್ಯರು ಬಿಜೆಪಿ ಮೈತ್ರಿ ಪಾಳಯಕ್ಕೆ ಬಂದಿರಿವುದರಿಂದ ಹಾಗೂ ಇಬ್ಬರು ಪರಿಷತ್ ಸದಸ್ಯರು ಹಾಗೂ ಓರ್ವ ಎಂಪಿ ಬಿಜೆಪಿ ಅಭ್ಯರ್ಥಿ ಪರವಾಗಿರುವುದರಿಂದ ಬಿಜೆಪಿ ಗೆಲುವಿನ ವಿಶ್ವಾಸದಲ್ಲಿದೆ.
ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಒಲಿದು ಬಂದಿದೆ. ಹೀಗಾಗಿ ಕೊನೆಯ 9 ತಿಂಗಳ ಅವಧಿಗೆ ಅಧ್ಯಕ್ಷರಾಗ ಬಯಸಿರುವ ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಿದೆ. ಬಿಜೆಪಿ ಸದಸ್ಯೆ ಉಮಾದೇವಿ ಕೃಷ್ಣಪ್ಪ, ನಗರ ಸಭೆ ಮಾಜಿ ಅಧ್ಯಕ್ಷೆ ಕವಿತಾ ಶೇಖರ್ ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್‌ನಿಂದಲೂ ಚುನಾವಣೆಗೆ ನಡೆದಿದೆ ಕಸರತ್ತು
ಬಿಜೆಪಿಯಿಂದ ಅಂತರ ಕಾಪಾಡಿಕೊಂಡಿರುವ ಸದಸ್ಯರನ್ನು ಮನವೊಲಿಸಿ ಅಧಿಕಾರದಿಂದ ವಂಚಿತರಾದವರ ಸಹಕಾರ ಪಡೆದರೆ ಅಧಿಕಾರ ಹಿಡಿಯಬಹುದು ಎಂಬುದು ಕಾಂಗ್ರೆಸ್ ಲೆಕ್ಕಾಚಾರವಾಗಿದೆ. ಆದರೆ ಇದೆಲ್ಲವೂ ಕಾಂಗ್ರೆಸ್ ನಾಯಕರು ಅಂದುಕೊಂಡಂತೆ ನಡೆದರೆ ಮಾತ್ರ ಸಾಧ್ಯವಾಗಲಿದೆ.
ಮೇ 21ರಂದು ನಗರಸಭೆ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುವ ಹಿನ್ನೆಲೆಯಲ್ಲಿ ನಗರ ಸಭೆಯ ಬಿಜೆಪಿ ಸದಸ್ಯರು ಚಿಕ್ಕಮಗಳೂರು ನಗರ ಬಿಜೆಪಿ ಮಂಡಲದ ಅಧ್ಯಕ್ಷ ಪುಷ್ಪರಾಜ್ ನೇತೃತ್ವದಲ್ಲಿ ರೆಸಾರ್ಟ್‌ಗೆ ತೆರಳಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.