ರಾಜ್ಯ ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಶುಕ್ರವಾರ (ಆ.14) ನಡೆಯಲಿರುವ ಚುಣಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಲೀಂ ಅಹ್ಮದ್ ನಾಮಪತ್ರ ಸಲ್ಲಿಸಿದ್ದಾರೆ.
ಕನ್ನಡಪ್ರಭ ವಾರ್ತೆ, ಬೆಂಗಳೂರು
ರಾಜ್ಯ ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಶುಕ್ರವಾರ (ಆ.14) ನಡೆಯಲಿರುವ ಚುಣಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಲೀಂ ಅಹ್ಮದ್ ನಾಮಪತ್ರ ಸಲ್ಲಿಸಿದ್ದಾರೆ. ಅತ್ತ ಎನ್‌ಡಿಎ ಅಭ್ಯರ್ಥಿಯಾಗಿ ಪಿ.ಎಚ್.ಪೂಜಾರ್ ಅವರನ್ನು ಕಣಕ್ಕಿಳಿಸುವ ಮೂಲಕ ಪ್ರತಿಪಕ್ಷ ಬಿಜೆಪಿ, ಜೆಡಿಎಸ್ ಆಡಳಿತ ಪಕ್ಷಕ್ಕೆ ಟಕ್ಕರ್ ನೀಡಿವೆ.
ಸಂಖ್ಯಾಬಲ ಇಲ್ಲದಿದ್ದರೂ ಪ್ರತಿಪಕ್ಷಗಳು ಎನ್‌ಡಿಎ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು ಕುತೂಹಲ ಮೂಡಿಸಿದೆ. ಪರಿಷತ್‌ನಲ್ಲಿ ಆಡಳಿತ ಪಕ್ಷಕ್ಕಿಂತ ಏಳು ಸ್ಥಾನಗಳ ಕಡಿಮೆ ಸಂಖ್ಯಾ ಬಲ ಹೊಂದಿರುವ ಪ್ರತಿಪಕ್ಷಗಳು ಆತ್ಮಸಾಕ್ಷಿ ಮತಗಳ ನಿರೀಕ್ಷೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿವೆ. ಇದರಿಂದ ಸಲೀಂ ಅಹಮದ್ ಅವರ ಅವಿರೋಧ ಆಯ್ಕೆಗೆ ಬ್ರೇಕ್ ಬಿದ್ದಂತಾಗಿದೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರ ಸಮ್ಮುಖದಲ್ಲಿ ಸಲೀಂ ಅಹ್ಮದ್ ಅವರು ವಿಧಾನ ಪರಿಷತ್ ಕಾರ್ಯದರ್ಶಿ ಜ್ಯೋತಿ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಮೇಲ್ಮನೆ ಸಭಾನಾಯಕ ಯತೀಂದ್ರ ಸಿದ್ದರಾಮಯ್ಯ, ವಿನಯ್ ಕಾರ್ತಿಕ್, ನಾಗರಾಜ್ ಯಾದವ್ ಮತ್ತಿತರ ಸದಸ್ಯರು ಸಾಥ್ ನೀಡಿದರು. ಸಂಪುಟ ವಿಸ್ತರಣೆಗೆ ಹೈಕಮಾಂಡ್ ಅಂತಿಮಗೊಳಿಸಿದ್ದ ಪಟ್ಟಿಯಲ್ಲೇ ಸಭಾಪತಿ ಸ್ಥಾನಕ್ಕೂ ಸಲೀಂ ಅಹಮದ್ ಅವರ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಕಳುಹಿಸಿತ್ತು.
ಎನ್‌ಡಿಎ ಬಣದಿಂದ ಪೂಜಾರ್ ಕಣಕ್ಕೆ:
ಎನ್‌ಡಿಎ ಅಭ್ಯರ್ಥಿಯಾಗಿ ಬಿಜೆಪಿ ಸದಸ್ಯ ಪಿ.ಎಚ್.ಪೂಜಾರ್ ಅವರು ಕೂಡ ಪರಿಷತ್ ಕಾರ್ಯದರ್ಶಿ ಅವರ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಈ ವೇಳೆ, ಮೇಲ್ಮನೆ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಜೆಡಿಎಸ್ ನಾಯಕ ಭೋಜೇಗೌಡ, ಉಪನಾಯಕ ಶರವಣ, ಸಿ.ಟಿ.ರವಿ, ರವಿಕುಮಾರ್, ಹೇಮಲತಾ ನಾಯಕ್, ಹಣಮಂತ ನಿರಾಣಿ ಸೇರಿದಂತೆ ಮೈತ್ರಿ ಪಕ್ಷಗಳ ವಿವಿಧ ಸದಸ್ಯರು ಉಪಸ್ಥಿತರಿದ್ದರು.
ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಸಂಖ್ಯಾಬಲ ಹೆಚ್ಚಳವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರ ಸೂಚನೆ ಮೇರೆಗೆ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ಅವರು ಇತ್ತೀಚೆಗೆ ರಾಜೀನಾಮೆ ನೀಡಿದ್ದರು. ಬಳಿಕ ರಾಜ್ಯಪಾಲರು ಹಂಗಾಮಿ ಸಭಾಪತಿಯಾಗಿ ಪುಟ್ಟಣ್ಣ ಅವರನ್ನು ನೇಮಿಸಿದ್ದರು. ಮೊದಲ ದಿನ ಸಂತಾಪ ಸೂಚನೆ ಕಾರ್ಯಕಲಾಪ ನಡೆಸಿದ ಅವರು, ಶುಕ್ರವಾರ ನೂತನ ಸಭಾಪತಿ ಆಯ್ಕೆ ಪ್ರಕ್ರಿಯೆ ನಡೆಸಲಿದ್ದಾರೆ. ಕಾಂಗ್ರೆಸ್ ಸಂಖ್ಯಾಬಲ ಹೊಂದಿರುವುದರಿಂದ ದ್ವನಿ ಮತದ ಮೂಲಕ ಸಲೀಂ ಅಹಮದ್ ಅವರು ಸಭಾಪತಿಯಾಗಿ ಆಯ್ಕೆಯಾಗುವುದು ಬಹುತೇಕ ಎನ್ನಲಾಗಿದೆ.
ಕಾಂಗ್ರೆಸ್ ಪಕ್ಷವು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಅಪಮಾನ ಮಾಡಿರುವುದರಿಂದ ಶುಕ್ರವಾರ ನಡೆಯಲಿರುವ ವಿಧಾನಸಭೆಯ ಸಭಾಧ್ಯಕ್ಷರ ಚುನಾವಣೆಯನ್ನು ಬಿಜೆಪಿ ಬಹಿಷ್ಕರಿಸಲಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ. ಗುರುವಾರ ವಿಧಾನಸಭೆ ಕಲಾಪದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಪೀಠದ ವಿರುದ್ಧದ ಪ್ರತಿಭಟನೆಯಲ್ಲ. ಲೆಟರ್ ಹೆಡ್ ಮತ್ತು ಕಾಂಗ್ರೆಸ್‌ನ ಸರ್ವಾಧಿಕಾರಿ ಧೋರಣೆ ವಿರುದ್ಧದ ಪ್ರತಿಭಟನೆಯಾಗಿ ಚುನಾವಣೆ ಬಹಿಷ್ಕರಿಸಲಿದ್ದೇವೆ. ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕ ಸಭ್ಯಾಧ್ಯಕ್ಷರ ಪೀಠಕ್ಕೆ ಎಂದಿನಂತೆ ಗೌರವದಿಂದ ನಡೆದುಕೊಳ್ಳುತ್ತೇವೆ. ನೂತನ ಸಭಾಧ್ಯಕ್ಷರು ಪಕ್ಷಾತೀತವಾಗಿ ನಡೆದುಕೊಳ್ಳಬೇಕು. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕು ಎಂದರು.ಸಂವಿಧಾನ ಬಾಹಿರ:ವಿಧಾನಸಭೆಯ ಸಭಾಧ್ಯಕ್ಷರ ಚುನಾವಣೆ ಶುಕ್ರವಾರ ನಡೆಯಲಿದೆ. ಸದನಕ್ಕೆ ಸಾರ್ವಭೌಮತ್ವ ಇದೆ ಹಾಗೂ ವಿಧಾನಸಭಾ ಸದಸ್ಯರಿಗೆ ಹಕ್ಕು ಇದೆ. ಆದರೆ ಕಾಂಗ್ರೆಸ್ ಪಕ್ಷ ಸಂವಿಧಾನ ಬಾಹಿರವಾಗಿ ತನ್ನ ಲೆಟರ್‌ಹೆಡ್‌ನಲ್ಲಿ ಆಯ್ಕೆ ಮಾಡಲಾಗುವ ಸಭಾಧ್ಯಕ್ಷರ ಹೆಸರನ್ನು ಉಲ್ಲೇಖ ಮಾಡಿದೆ. ಸದನದ ಸಾರ್ವಭೌಮತ್ವವನ್ನು ಕಸಿಯುವ ಕೆಲಸವನ್ನು ದೆಹಲಿಯ ನಕಲಿ ಗಾಂಧಿ ಕುಟುಂಬ ಮಾಡಿದೆ. ಪಕ್ಷದ ಪಟ್ಟಿಯಲ್ಲಿ ಸ್ಪೀಕರ್ ಹೆಸರನ್ನು ಪ್ರಕಟಿಸುವ ಹೊಸ ಸಂಪ್ರದಾಯವನ್ನು ಹುಟ್ಟುಹಾಕಲಾಗಿದೆ. ಸಭಾಧ್ಯಕ್ಷರು ಸದನದಿಂದ ಚುನಾಯಿತರಾಗಬೇಕಿದ್ದರೂ, ಪಕ್ಷದಿಂದಲೇ ಚುನಾಯಿತರನ್ನಾಗಿ ಮಾಡಲಾಗಿದೆ. ಇದು ಪ್ರಜಾಪ್ರಭುತ್ವ ವಿರೋಧಿ ನೀತಿ ಎಂದು ಕಿಡಿಕಾರಿದರು.ಸಂವಿಧಾನಕ್ಕೆ ಮಾಡಿದ ಅಪಚಾರ:ವಿಧಾನ ಪರಿಷತ್ತಿನ ಸಭಾಪತಿಯಾಗಿದ್ದ ಬಸವರಾಜ ಹೊರಟ್ಟಿ ಅವರು ರಾಜೀನಾಮೆ ನೀಡುತ್ತೇನೆ ಎಂದಿದ್ದರೂ ಅವರ ಕಚೇರಿಗೆ ಶಾಸಕರು ನುಗ್ಗಿ ರಾಜೀನಾಮೆ ಪಡೆದಿದ್ದಾರೆ. ಇದು ಕೂಡ ಸಂವಿಧಾನಕ್ಕೆ ಮಾಡಿರುವ ಅಪಚಾರ. ಇಲ್ಲಿನ ಹೊಸ ಸಭಾಪತಿ ಹಾಗೂ ಉಪಸಭಾಪತಿಗಳ ಹೆಸರನ್ನು ಕೂಡ ಪಕ್ಷದ ಪಟ್ಟಿಯಲ್ಲಿ ತೋರಿಸಲಾಗಿದೆ. ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಉಪ ಸಭಾಧ್ಯಕ್ಷ ಎಂದು ತೋರಿಸಲಾಗಿತ್ತು. ನಂತರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಇದರಲ್ಲಿ ಯಾವುದು ಸರಿ ಎಂದು ತಿಳಿಸದೆ ಗೊಂದಲದ ಗೂಡು ಮಾಡಿದ್ದಾರೆ. ಇವೆಲ್ಲವೂ ಸದನದ ನೀತಿ ನಿಯಮಗಳನ್ನು ಮೀರಿದ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.