ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಬಿ. ಆರ್. ರಾಮನಾಥ್ ಅವರು ಅಧಿಕಾರ ಸ್ವೀಕರಿಸಿ ಮಾತನಾಡಿ, ನಮ್ಮ ತಾಲೂಕಿನಲ್ಲಿ ವಿತರಕರ ಸಂಘ ಪ್ರಾರಂಭವಾದ ದಿನದಿಂದ ಕಂಪನಿಗಳಿಂದ ವಿತರಕರಿಗೆ ಆಗುತ್ತಿದ್ದ ತೊಂದರೆಗಳು ಕಡಿಮೆ ಆಗಿದೆ. ಹಿಂದೆ ಕೆಲವು ಕಂಪನಿಗಳವರು ಮೇಲಿಂದ ಮೇಲೆ ಯಾವುದೇ ಸೂಚನೆ ನೀಡದೇ ವಿತರಕರನ್ನು ಬದಲಾಯಿಸುತ್ತಿದ್ದರು. ಈಗ ಯಾವುದೇ ವಿತರಕರನ್ನು ಬದಲಿಸುವ ಮುನ್ನ ಸಂಘದ ಗಮನಕ್ಕೆ ತಂದು ಕಂಪನಿಗಾಗಲಿ, ಅಥವಾ ವಿತರಕರಿಗಾಗಲಿ ನೀಡಬೇಕಾದ ಬಾಕಿಗಳನ್ನು ಕೊಟ್ಟು ವಿತರಕರನ್ನು ಬದಲಿಸುವಂತಾಗಿದೆ. ನಮ್ಮ ಸಂಘ, ವಿತರಕರ ಹಾಗೂ ಪಟ್ಟಣದ ವರ್ತಕರ ಹಿತಕಾಯಲು ಬದ್ಧವಾಗಿದೆ. ಯಾವುದೇ ಕಂಪನಿಯರು ಏಜೆನ್ಸಿ ನೀಡಲು ಬಂದಾಗ ಸಂಘವನ್ನು ಸಂಪರ್ಕಿಸಿ ತೆಗೆದುಕೊಳ್ಳಿ ಎಂದು ಸಲಹೆ ನೀಡಿ, ಪೂರ್ವಪರ ಗೊತ್ತಿಲ್ಲದೆ ತೆಗೆದುಕೊಂಡರೆ ತೊಂದರೆ ಅನುಭವಿಸುತ್ತೀರಿ ಎಂದು ಎಚ್ಚರಿಸಿ, ಕೆಲವರು ಒಂದೇ ಊರಿನಲ್ಲಿ ಇಬ್ಬರು ಮೂವರಿಗೆ ನೇಮಿಸಿ, ತೊಂದರೆ ಕೊಡುತ್ತಾರೆ, ಜಾಗೃತರಾಗಿರಿ ಎಂದರು.
ಕೆಲವು ಕಂಪನಿಯವರು ಮಿತಿ ಮೀರಿದ ಗುರಿಯನ್ನು (ಟಾರ್ಗೆಟ್) ಕೊಟ್ಟು ವಿತರಕರಿಗೆ ತೊಂದರೆ ನೀಡುತ್ತಾರೆ. ಇಂತಹ ವಿಷಯಗಳಲ್ಲಿ ನಮ್ಮ ಸಂಘ ತೆಗೆದುಕೊಳ್ಳುವ ಕೆಲವು ಕಠಿಣ ನಿರ್ಧಾರಗಳಿಂದ ನಮ್ಮ ಸಂಘ ರಾಜ್ಯದಲ್ಲೇ ಅತ್ಯುತ್ತಮ ವಿತರಕರ ಸಂಘ ಎನಿಸಿದೆ. ಸಂಘದ ಸದಸ್ಯರು ಸಂಘದ ಎಲ್ಲ ಸಭೆ, ಸಮಾರಂಭಗಳಲ್ಲಿ ಭಾಗವಹಿಸಿ ನಮ್ಮ ಸಂಘದ ಶಕ್ತಿಯನ್ನು ಹೆಚ್ಚಿಸಿ ಎಂದರು. ನಿಕಟ ಪೂರ್ವ ಅಧ್ಯಕ್ಷ ಅಬುಲ್ ವಫಾ, ಎಚ್. ವಿ. ಸುರೇಶ್ ಕುಮಾರ್, ವಾಸುದೇವ ಮೂರ್ತಿ ಆರ್ ಮಾತನಾಡಿದರು.ಮಾಜಿ ಅಧ್ಯಕ್ಷರಾದ ಸಿ. ಎನ್. ನಾಗಪ್ಪ, ರೋಹಿತ್, ಶ್ರೀನಿವಾಸ್, ಯೋಗೇಶ್, ಕಿಶೋರ್, ಶಂಕರ್ ನಾರಾಯಣ್, ವಿಜೇತ್ ಸದಸ್ಯರಾದ ಗೌತಮ್, ಚಂದ್ರು, ವಿಶ್ವಾಸ್, ಎಚ್. ಪಿ. ರಮೇಶ್, ರಾಘವೇಂದ್ರ, ಸುನಿಲ್, ಸಂಜು, ಆನಂದ, ಪವನ್ ಭಾಗವಹಿಸಿದ್ದರು.