ಧಾರವಾಡ:

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ದಿನದಿಂದ ದಿನಕ್ಕೆ ಎಲ್‌ಪಿಜಿ ಆಟೋಗಳಿಗೆ ಸಂಕಷ್ಟ ಶುರುವಾಗಿದೆ.

ಯುದ್ಧ ಶುರುವಾಗಿ ಒಂದೇ ವಾರದಲ್ಲಿ ಎಲ್‌ಪಿಜಿ ಆಟೋಗಳಿಗೆ ಈ ಸಂಕಷ್ಟ ಶುರುವಾದರೂ ಕಳೆದ ವಾರದಿಂದ ಹೆಚ್ಚಾಗಿದೆ. ಧಾರವಾಡದಲ್ಲಿ ಇರುವ 21 ಎಲ್‌ಪಿಜಿ ಪಂಪ್‌ಗಳ ಪೈಕಿ ಹಲವು ಪಂಪ್‌ಗಳಿಗೆ ಎಲ್‌ಪಿಜಿ ಸಿಗದೇ ಬಾಗಿಲು ಮುಚ್ಚಿವೆ. ಇನ್ನುಳಿದ ಕೆಲವೇ ಪಂಪ್‌ಗಳಲ್ಲಿ ಎಲ್‌ಪಿಜಿ ಇದ್ದರೂ ದರ ಏರಿಕೆಯಿಂದ ಆಟೋಗಳ ಚಾಲಕರು ಹೈರಾಣಾಗಿದ್ದಾರೆ. ಎಲ್‌ಪಿಜಿ ಇದೆ ಎಂದು ಗೊತ್ತಾದ ಕೂಡಲೇ ಆ ಪಂಪ್ ಎದುರು ಸಾಲುಗಟ್ಟಲೇ ಪಾಳಿ ಹಚ್ಚಬೇಕಾದ ಸ್ಥಿತಿ ಎದುರಾಗಿದೆ.

ನಗರದ ಎನ್‌ಟಿಟಿಎಪ್‌ ಬಳಿಯ ಗ್ಯಾಸ್ ಬಂಕ್ ಎದುರು ಆಟೋಗಳು ಶನಿವಾರ ಸಾಲಿನಲ್ಲಿ ನಿಂತಿದ್ದವು. ಇನ್ನೆರಡು ಗಂಟೆಯಲ್ಲಿ ಇದ್ದ ಎಲ್‌ಪಿಜಿ ಸಂಗ್ರಹ ಖಾಲಿ ಆಗಲಿದೆ ಎಂದು ನಗರದ ಎಲ್ಲ ಆಟೋಗಳು ಪಾಳಿ ಹಚ್ಚಿದ್ದು ಎಷ್ಟು ಆಟೋಗಳಿಗೆ ಎಲ್‌ಪಿಜಿ ಸಿಗುತ್ತದೆಯೋ ಗೊತ್ತಿಲ್ಲ ಎಂದು ತಮ್ಮ ತಮ್ಮಲ್ಲಿಯೇ ಆಟೋ ಚಾಲಕರು ಮಾತನಾಡಿಕೊಳ್ಳುತ್ತಿದ್ದರು.

ಎಲ್‌ಪಿಜಿ ಸಿಗದೇ ಪೆಟ್ರೋಲ್‌ ಹಾಕಿಸಿಕೊಂಡು ಬಾಡಿಗೆ ಬರುತ್ತಿರುವ ಚಾಲಕರು ದರ ಏರಿಕೆ ಮಾಡಿದ್ದಾರೆ. ₹ 30 ತೆಗೆದುಕೊಳ್ಳುವಲ್ಲಿ ₹ 50ಕ್ಕೆ ಏರಿಕೆ ಮಾಡಲಾಗಿದೆ. ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಹಾಗೂ ಇತರ ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಗ್ರಾಹಕರನ್ನು ಕರೆದೊಯ್ಯುವ ಮುಂಚೆಯೇ ಹೆಚ್ಚಿನ ದರ ತೆಗೆದುಕೊಳ್ಳುತ್ತಿರುವುದಾಗಿ ಹೇಳಿ ಬಾಡಿಗೆ ಬರುತ್ತಿದ್ದಾರೆ. ಹೀಗಾಗಿ ಎಲ್‌ಪಿಜಿ ಸಮಸ್ಯೆ ಗ್ರಾಹಕರ ಜೇಬಿಗೂ ತಟ್ಟಿದಂತಾಗಿದೆ.


ಹಾಗೆಯೇ, ಹೋಟೆಲ್‌ಗಳಿಗೆ ಮೊದಲಿನಂತೆ ವಾಣಿಜ್ಯ ಸಿಲಿಂಡರ್‌ ಸಿಗುತ್ತಿಲ್ಲ. ಸುಮಾರು 15 ದಿನಗಳಿಂದ ಸಾಕಷ್ಟು ಹೋಟೆಲ್‌ಗಳಲ್ಲಿ ದೋಸೆ, ವಡಾದಂತೆ ಕೆಲವು ಆಹಾರಗಳನ್ನು ಮಾಡದೇ ಇಡ್ಲಿ, ಉಪ್ಪಿಟ್ಟು ಸೇರಿ ವಿವಿಧ ಉಪಾಹಾರಕ್ಕೆ ಸೀಮಿತವಾಗಿವೆ.ಮುಂದೂಡಿದ ನೂತನ ಹೋಟೆಲ್‌ ಉದ್ಘಾಟನೆ...

ಸಾಧನಕೇರಿ ರಸ್ತೆಯ ಜಂಬಗಿ ಆಸ್ಪತ್ರೆ ಬಳಿ ನೂತನವಾಗಿ ಶಿವಂ ಹೋಟೇಲ್‌ ನಿರ್ಮಾಣವಾಗಿದ್ದು, ಇನ್ನೇನು ಯುಗಾದಿ ಸಮಯದಲ್ಲಿಯೇ ಉದ್ಘಾಟನೆಗೊಳ್ಳಬೇಕಿತ್ತು. ಆದರೆ, ವಾಣಿಜ್ಯ ಸಿಲಿಂಡರ್‌ ಸಮಸ್ಯೆಯಿಂದಾಗಿ ಹೋಟೆಲ್‌ ಉದ್ಘಾಟನೆಯನ್ನು ಅನಿವಾರ್ಯವಾಗಿ ಮುಂದೂಡಲಾಗಿದೆ. ಈಗಾಗಲೇ ಧಾರವಾಡದಲ್ಲಿ ವಾಣಿಜ್ಯ ಸಿಲಿಂಡರ್‌ ಸಲುವಾಗಿ ಹೋಟೆಲ್‌ ವಾರಕ್ಕೆ ಎರಡ್ಮೂರು ದಿನ ಬಾಗಿಲು ಮುಚ್ಚುತ್ತಿದ್ದು, ಇಂತಹ ಸಂದರ್ಭದಲ್ಲಿ ಹೊಸದಾಗಿ ಹೋಟೆಲ್‌ ಆರಂಭಿಸುವುದು ಬೇಡ. ಕೆಲವು ದಿನ ಮುಂದಕ್ಕೆ ಹಾಕೋಣ ಎಂದು ಹೋಟೆಲ್‌ ಮಾಲೀಕರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.