ಕುಡಿದ ಮತ್ತಿನಲ್ಲಿ ಬೈಕ್‌ ಜಖಂಮಾಡಿದ್ದಕ್ಕೆ ಸ್ನೇಹಿತನ ಕೊಲೆ

KannadaprabhaNewsNetwork |  
Published : Apr 05, 2026, 01:45 AM IST
Uday kiran | Kannada Prabha

ಸಾರಾಂಶ

ಕುಡಿದ ಮತ್ತಿನಲ್ಲಿ ಕಾರಣವಿಲ್ಲದೇ ನಿಂದಿಸಿ ಗಲಾಟೆ ಮಾಡಿದ ಸ್ನೇಹಿತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಸೋದರರಿಬ್ಬರನ್ನು ಜೆ.ಸಿ.ನಗರ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕುಡಿದ ಮತ್ತಿನಲ್ಲಿ ಕಾರಣವಿಲ್ಲದೇ ನಿಂದಿಸಿ ಗಲಾಟೆ ಮಾಡಿದ ಸ್ನೇಹಿತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಸೋದರರಿಬ್ಬರನ್ನು ಜೆ.ಸಿ.ನಗರ ಪೊಲೀಸರು ಬಂಧಿಸಿದ್ದಾರೆ.

ಚಾಮರಾಜಪೇಟೆ ನಿವಾಸಿ ವಿಜಯ್‌ ಅಲಿಯಾಸ್ ಲೇಔಟ್‌ (23) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಮಠದಹಳ್ಳಿಯ ವಿನೋದ್ ಕುಮಾರ್ ಹಾಗೂ ಆತನ ಕಿರಿಯ ಸೋದರ ಉದಯ್ ಕಿರಣ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಕೌಟುಂಬಿಕ ಮನಸ್ತಾಪ ಹಿನ್ನೆಲೆಯಲ್ಲಿ ಮುನಿಸಿಕೊಂಡು ಆರ್‌.ಟಿ. ನಗರದಲ್ಲಿರುವ ತವರು ಮನೆಗೆ ಬಂದಿದ್ದ ಪತ್ನಿ ರಕ್ಷಿತಾಳನ್ನು ಕರೆದೊಯ್ಯಲು ವಿಜಯ್ ಬಂದಿದ್ದ. ಆಗ ಆತ ವಿಪರೀತ ಮದ್ಯಪಾನ ಮಾಡಿದ್ದ. ಆದರೆ ಪತಿ ಜತೆ ಹೋಗಲು ರಕ್ಷಿತಾ ನಿರಾಕರಿಸಿದ್ದಳು. ಇದರಿಂದ ಕೋಪಗೊಂಡ ವಿಜಯ್, ರಸ್ತೆಯಲ್ಲಿ ಬರುತ್ತಿದ್ದ ಗೆಳೆಯ ವಿನೋದ್‌ಕುಮಾರ್‌ ಜೊತೆ ಗಲಾಟೆ ಮಾಡಿ ಆತನ ಬೈಕ್ ಜಖಂಗೊಳಿಸಿ ದುಂಡಾವರ್ತನೆ ತೋರಿದ್ದಾನೆ.

ಇದಾದ ಕೆಲ ಹೊತ್ತಿನ ಬಳಿಕ ತನ್ನ ಸೋದರ ಉದಯ್‌ ಕಿರಣ್‌ ಕರೆದುಕೊಂಡು ಬಂದ ವಿನೋದಕುಮಾರ್‌ ವಿಜಯ್‌ ಜೊತೆ ಗಲಾಟೆ ಮಾಡಿದ್ದಾನೆ. ತನ್ನ ಬೈಕ್ ಮೇಲೆ ಯಾಕೆ ಕಲ್ಲು ಎತ್ತಿ ಹಾಕಿದ್ದು ಎಂದು ಪ್ರಶ್ನಿಸಿದ್ದಾನೆ. ಆಗ ಭಯದಿಂದ ಅತ್ತೆ ಮನೆಯೊಳಗೆ ಹೋಗಿ ವಿಜಯ್ ಅವಿತುಕೊಂಡಿದ್ದಾನೆ. ಆಗ ಆತನಿಗೆ ನಿನ್ನನ್ನು ಚಾಕುವಿನಿಂದ ಕೊಲ್ಲದೆ ಬಿಡುವುದಿಲ್ಲ ಎಂದು ಉದಯ್‌ ಧಮ್ಕಿ ಹಾಕಿದ್ದಾನೆ.

ಈ ಬೆದರಿಕೆಗೆ ಕೆರಳಿದ ವಿಜಯ್‌, ಮರುದಿನ ಶನಿವಾರ ಬೆಳಗ್ಗೆ 10 ಗಂಟೆಗೆ ಉದಯ್‌ ಪ್ರಿಯತಮೆ ಮನೆ ಬಳಿ ಹೋಗಿ ದಾಂಧಲೆ ಮಾಡಿ, ಮನಬಂದಂತೆ ನಿಂದಿಸಿ ಆತ ಮರಳಿದ್ದ. ಈ ವಿಷಯ ತಿಳಿದು ಕೋಪಗೊಂಡ ಉದಯ್, ಕೂಡಲೇ ಸೋದರನನ್ನು ಕರೆದುಕೊಂಡು ವಿಜಯ್‌ಗೆ ಹೊಡೆಯಲು ತೆರಳಿದ್ದಾನೆ. ಆಗ ವಿಜಯ್‌ ಗೆ ಕರೆ ಮಾಡಿದಾಗ ತಾನು ಜ್ಯೋತಿ ಬಾರ್ ಬಳಿ ಇರುವುದಾಗಿ ಆತ ತಿಳಿಸಿದ್ದಾನೆ. ತಕ್ಷಣವೇ ಅಲ್ಲಿಗೆ ತೆರಳಿ ಆತನ ಮೇಲೆ ಸೋದರರು ದಾಳಿಗಿಳಿದಿದ್ದಾರೆ. ಆಗ ತಪ್ಪಿಸಿಕೊಂಡು ಓಡಿ ಹೋಗುತ್ತಿದ್ದ ವಿಜಯ್‌ನನ್ನು ಅಟ್ಟಾಡಿಸಿ ಅಡ್ಡಗಟ್ಟಿ ಚಾಕುವಿನಿಂದ ಆರೋಪಿಗಳು ಇರಿದು ಕಾಲ್ಕಿತ್ತಿದ್ದಾರೆ. ಹಲ್ಲೆಗೊಳಗಾದ ವಿಜಯ್‌ನನ್ನು ಹತ್ತಿರದ ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿದ್ದಾರೆ. ಆದರೆ ತೀವ್ರ ರಕ್ತಸ್ರಾವದಿಂದ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಸಣ್ಣಪುಟ್ಟ ಕೆಲಸಗಾರರು

ಎರಡು ವರ್ಷಗಳ ಹಿಂದೆ ಮೃತ ವಿಜಯ್ ವಿವಾಹವಾಗಿತ್ತು. ತಮಟೆ ಬಾರಿಸುವ ಕೆಲಸ ಮಾಡುತ್ತಿದ್ದ ಆತ, ವಿಪರೀತ ಮದ್ಯ ವ್ಯಸನಿಯಾಗಿದ್ದ. ಇದೇ ಕಾರಣಕ್ಕೆ ಆತನ ಸಂಸಾರದಲ್ಲಿ ಮನಸ್ತಾಪ ಮೂಡಿತ್ತು. ವಿಜಯ್ ದಂಪತಿಗೆ ಗಂಡು ಮಗುವಿದೆ. ಹಲವು ವರ್ಷಗಳಿಂದ ಆತನಿಗೆ ಕೆಫೆಯಲ್ಲಿ ಕೆಲಸಗಾರ ವಿನೋದ್ ಹಾಗೂ ಡಿಲವರಿ ಬಾಯ್‌ ಉದಯ್ ಸ್ನೇಹಿತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಐಪಿಎಲ್‌ ಪಂದ್ಯದ ವೇಳೆ ಮೊಬೈಲ್‌ಎಗರಿಸಿದ್ದ ಇನ್ನು 9 ಮಂದಿ ಬಂಧನ
ಬಗೆಹರಿಯದ ಗ್ಯಾಸ್ ಸಮಸ್ಯೆ: ನಿಲ್ಲದ ಆಟೋ ಕ್ಯೂ