ಬಗೆಹರಿಯದ ಗ್ಯಾಸ್ ಸಮಸ್ಯೆ: ನಿಲ್ಲದ ಆಟೋ ಕ್ಯೂ

KannadaprabhaNewsNetwork |  
Published : Apr 05, 2026, 01:45 AM IST
ಗ್ಯಾಸ್ ಇಲ್ಲದೇ ಬಂದ್ ಆಗಿರುವ ಮೈಸೂರು ರಸ್ತೆಯಲ್ಲೇ ಬಂದ್ ಆಗಿರುವ ಬಂಕ್ | Kannada Prabha

ಸಾರಾಂಶ

ನಗರದಲ್ಲಿ ಆಟೋರಿಕ್ಷಾ ಸಿಎನ್‌ಜಿ ಗ್ಯಾಸ್‌ಗೆ ತೀವ್ರ ಹಾಹಾಕಾರ ಉಂಟಾಗಿದ್ದು, ಗ್ಯಾಸ್ ಇಲ್ಲದೇ ಚಾಲಕರು ಪರದಾಟ ಮುಂದುವರಿದಿದೆ. ನಗರದ ಅರ್ಧಕ್ಕಿಂತ ಹೆಚ್ಚು ಗ್ಯಾಸ್ ಬಂಕ್‌ಗಳು ‘ನೋ ಸ್ಟಾಕ್’ ಫಲಕವನ್ನು ನೇತು ಹಾಕಿದ್ದು, ಗ್ಯಾಸ್ ಲಭ್ಯವಿರುವ ಬಂಕ್‌ಗಳ ಎದುರು ಆಟೋಗಳು ಕಿ.ಮೀ ಗಟ್ಟಲೇ ಸಾಲಿನಲ್ಲಿ ನಿಲ್ಲುತ್ತಿವೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಆಟೋರಿಕ್ಷಾ ಸಿಎನ್‌ಜಿ ಗ್ಯಾಸ್‌ಗೆ ತೀವ್ರ ಹಾಹಾಕಾರ ಉಂಟಾಗಿದ್ದು, ಗ್ಯಾಸ್ ಇಲ್ಲದೇ ಚಾಲಕರು ಪರದಾಟ ಮುಂದುವರಿದಿದೆ. ನಗರದ ಅರ್ಧಕ್ಕಿಂತ ಹೆಚ್ಚು ಗ್ಯಾಸ್ ಬಂಕ್‌ಗಳು ‘ನೋ ಸ್ಟಾಕ್’ ಫಲಕವನ್ನು ನೇತು ಹಾಕಿದ್ದು, ಗ್ಯಾಸ್ ಲಭ್ಯವಿರುವ ಬಂಕ್‌ಗಳ ಎದುರು ಆಟೋಗಳು ಕಿ.ಮೀ ಗಟ್ಟಲೇ ಸಾಲಿನಲ್ಲಿ ನಿಲ್ಲುತ್ತಿವೆ.

ಮೈಸೂರು ರಸ್ತೆ, ಮಾಗಡಿ ರಸ್ತೆ, ಕಾಟನ್‌ಪೇಟೆ, ಶೇಷಾದ್ರಿಪುರ, ರಾಜಾಜಿನಗರ, ವೈಟ್‌ಫೀಲ್ಡ್ ಸೇರಿದಂತೆ ನಗರದ ಪ್ರಮುಖ ಭಾಗಗಳಲ್ಲಿ ಗ್ಯಾಸ್ ಸ್ಟೇಷನ್‌ಗಳ ಮುಂದೆ ನೂರಾರು ಆಟೋಗಳು ಕಿ.ಮೀ ದೂರದವರೆಗೆ ಸಾಲುಗಟ್ಟಿ ನಿಂತಿವೆ. ಸ್ಟಾಕ್ ಇಲ್ಲದಿದ್ದರೂ ಕೆಲ ಹೊತ್ತಿನ ಬಳಿಕ ಬರಬಹುದು ಎಂಬ ನಿರೀಕ್ಷೆಯೊಂದಿಗೆ ಚಾಲಕರು ಹಗಲು-ರಾತ್ರಿ ಗ್ಯಾಸ್‌ಗಾಗಿ ಕಾಯುತ್ತಿದ್ದಾರೆ.

ನಗರದಲ್ಲಿ 3.2 ಲಕ್ಷಕ್ಕೂ ಹೆಚ್ಚು ಆಟೋರಿಕ್ಷಾಗಳು ನೋಂದಣಿಯಾಗಿವೆ. ಪ್ರತಿನಿತ್ಯ ಸುಮಾರು 45 ಮೆಟ್ರಿಕ್ ಟನ್ ಗ್ಯಾಸ್ ಅಗತ್ಯವಿದೆ. ಆದರೆ, ಈಗ ಸುಮಾರು 20 ಮೆಟ್ರಿಕ್‌ ಟನ್‌ನಷ್ಟು ಗ್ಯಾಸ್ ಮಾತ್ರ ಪೂರೈಕೆಯಾಗುತ್ತಿದೆ. ಹೀಗಾಗಿ, ಆಟೋ ಚಾಲಕರು ಗ್ಯಾಸ್‌ಗಾಗಿ ಪರದಾಡುವಂತಾಗಿದೆ.

ಗ್ಯಾಸ್ ಖರೀದಿ ಮೇಲೆ ಮಿತಿ: ಗ್ಯಾಸ್‌ ಅಭಾವದ ಕಾರಣ ಲಭ್ಯವಿದ್ದಾಗ ಚಾಲಕರು ಫುಲ್ ಟ್ಯಾಂಕ್ ಮಾಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಸಾಲಿನಲ್ಲಿ ಕಾಯುತ್ತಿರುವ ಇತರರಿಗೆ ಗ್ಯಾಸ್ ಸಿಗದಂತಾಗಿದೆ. ಇದು ಬಂಕ್ ಸಿಬ್ಬಂದಿ ಮತ್ತು ಚಾಲಕರ ನಡುವೆ ವಾಗ್ವಾದಕ್ಕೆ ಕಾರಣವಾಗುತ್ತಿದೆ. ಹೀಗಾಗಿ, ಕೆಲವು ಬಂಕ್‌ಗಳು ಗ್ಯಾಸ್ ಮಾರಾಟದ ಮೇಲೆ ಸ್ವಯಂ ನಿಯಂತ್ರಣ ಹಾಕಿವೆ. ಕೆಲವೆಡೆ ಪ್ರತಿ ಆಟೋಗೆ ಗರಿಷ್ಠ 300 ರು. ಗ್ಯಾಸ್ ಫಿಲ್ ಮಾಡಿದರೆ ಮತ್ತೆ ಕೆಲವೆಡೆ ಗರಿಷ್ಠ 700 ರು.ಗೆ ಮಾತ್ರ ಗ್ಯಾಸ್ ಫಿಲ್ ಮಾಡಲಾಗುತ್ತದೆ ಎಂದು ಚಾಲಕರು ಅಳಲು ತೋಡಿಕೊಂಡಿದ್ದಾರೆ.

ಬಂಕ್‌ಗಳ ಬಳಿಯೇ ನಿಲ್ಲುವ ಆಟೋಗಳು: ಗ್ಯಾಸ್ ಪೂರೈಕೆಯಲ್ಲಿ ಕೊರತೆಯಾಗುತ್ತಿರುವುದರಿಂದ ಚಾಲಕರು ಬಂಕ್‌ಗಳ ಎದುರು ಆಟೋ ನಿಲ್ಲಿಸುತ್ತಿದ್ದಾರೆ. ರಾತ್ರಿಯಿಡೀ ಅಲ್ಲೇ ಕಾಯುವ ಪರಿಸ್ಥಿತಿ ಇದೆ. ಒಂದು ಟ್ಯಾಂಕ್ ಬಂದರೆ ಎರಡ್ಮೂರು ತಾಸುಗಳಲ್ಲಿ ಖಾಲಿಯಾಗುತ್ತಿದೆ. ಇದರಿಂದ ಚಾಲಕರ ದುಡಿಮೆಗೆ ಸಮಸ್ಯೆಯಾಗುತ್ತಿದೆ ಎಂದು ಸಿಐಟಿಯು ಆಟೋ ಘಟಕ ಮುಖಂಡ ಶ್ರೀನಿವಾಸ್ ಹೇಳಿದರು.

ಇನ್ನು ಸಿಎನ್‌ಜಿ ದರ ಪ್ರತಿ ಕೆ.ಜಿಗೆ ಎರಡು ತಿಂಗಳ ಹಿಂದೆ 69 ರು. ಇದ್ದದ್ದು ಈಗ 105 ರು.ಗೆ ಏರಿಕೆಯಾಗಿದೆ. ಈಗ ಅದು ಕೂಡ ಸಿಗುತ್ತಿಲ್ಲ. ಚಾಲಕರ ಜೀವನ ಕಷ್ಟಕರವಾಗಿದೆ. ಆಟೋ ಚಾಲಕರಿಗೆ ಗ್ಯಾಸ್ ಪೂರೈಕೆ ಮತ್ತು ಅಭಾವದಿಂದ ಉಂಟಾಗುತ್ತಿರುವ ನಷ್ಟಕ್ಕೆ ಪರಿಹಾರವನ್ನು ಕಂಡು ಹಿಡಿಯಬೇಕು ಎಂದು ಶ್ರೀನಿವಾಸ್ ಒತ್ತಾಯಿಸಿದರು.

ಸರ್ಕಾರವೂ ಹೋಟೆಲ್‌ಗಳಿಗೆ ಗ್ಯಾಸ್ ಕೊರತೆಯಾದಾಗ ಅದನ್ನು ಸಮರ್ಪಕವಾಗಿ ಪೂರೈಸಲು ಸಭೆ ನಡೆಸಿತು. ಅದೇ ರೀತಿ ದಿನವಿಡೀ ದುಡಿಯುವ ಆಟೋ ಚಾಲಕರು ಎದುರಿಸುತ್ತಿರುವ ಸಮಸ್ಯೆಗಳು, ನೋವಿನ ಕಡೆಯು ಸರ್ಕಾರ ಗಮನ ಹರಿಸಬೇಕು ಎಂದು ಶೇಷಾದ್ರಿಪುರದ ಬಂಕ್ ಎದುರು ಸಾಲಿನಲ್ಲಿ ನಿಂತಿದ್ದ ಚಾಲಕರೊಬ್ಬರು ಹೇಳಿದರು.

ದುಡಿಮೆ ಚಿಂತೆಯಲ್ಲಿ ಚಾಲಕರು ಹಲವು ದಿನಗಳಿಂದ ಗ್ಯಾಸ್ ಕೊರತೆಯಿಂದ ಬಾಡಿಗೆ ಕಡಿಮೆಯಾಗಿ ಆದಾಯವೂ ಕಡಿಮೆಯಾಗಿದೆ. ಆಟೋ ಖರೀದಿಗೆ ಮಾಡಿಕೊಂಡ ಸಾಲದ ಇಎಂಐ ಪಾವತಿ, ಮನೆ ಬಾಡಿಗೆ, ಜೀವನ ನಿರ್ವಹಣೆ, ಮಕ್ಕಳ ಶಾಲಾ ಫೀಸು ಕಟ್ಟಲು ಸಮಸ್ಯೆಯಾಗುತ್ತಿದೆ. ಹೀಗಾಗಿ, ಆಟೋ ಚಾಲಕರಿಗೆ ಸರ್ಕಾರ ಪರಿಹಾರ ಘೋಷಿಸಬೇಕು ಕೆಲವು ಆಟೋ ಚಾಲಕರು ಮನವಿ ಮಾಡಿದ್ದಾರೆ.

ಪೆಟ್ರೋಲ್ ಆಯ್ಕೆ ಬಂದ್ ಮಾಡಿದ ಚಾಲಕರು

ಸಿಎನ್‌ಜಿ ಮೇಲೆ ಚಲಿಸುವ ಆಟೋಗಳಲ್ಲಿ ಪೆಟ್ರೋಲ್ ಆಯ್ಕೆ ಕೂಡ ಇರುತ್ತದೆ. ಆದರೆ, ಸಿಎನ್‌ಜಿಯಲ್ಲಿ ಸುಮಾರು 40 ಕಿ.ಮೀ ಮೈಲೇಜ್ ಸಿಕ್ಕರೆ, ಪೆಟ್ರೋಲ್‌ನಲ್ಲಿ ಬರೀ 15 ಕಿ.ಮೀ ಬರುತ್ತದೆ. ಹೀಗಾಗಿ, ಬಹುತೇಕ ಆಟೋ ಚಾಲಕರು ಪೆಟ್ರೋಲ್ ಆಯ್ಕೆಯನ್ನು ಬಂದ್ ಮಾಡಿಕೊಂಡಿದ್ದಾರೆ ಎಂದು ಸಿಐಟಿಯು ಸದಸ್ಯ ಶ್ರೀನಿವಾಸ್ ತಿಳಿಸಿದರು.

1 ಗ್ಯಾಸ್ ಇಲ್ಲದೇ ಬಂದ್ ಆಗಿರುವ ಮೈಸೂರು ರಸ್ತೆಯ ಬಂಕ್.

2 ಮೈಸೂರು ರಸ್ತೆ ಬಂಕ್ ಬಳಿ ಸಾಲುಗಟ್ಟಿ ನಿಂತಿರುವ ಆಟೋಗಳು.ಸಿಎನ್‌ಜಿಗಾಗಿ ಆಟೋ ಚಾಲಕರು ಬಂಕ್‌ಗಳ ಬಳಿ ರಾತ್ರಿಯಿಡೀ ಮಲಗುತ್ತಿದ್ದಾರೆ. ಸರಿಯಾಗಿ ಟ್ರಿಪ್‌ಗಳು ಆಗುತ್ತಿಲ್ಲ. ಇದರಿಂದ ದುಡಿಮೆ ಕಡಿಮೆಯಾಗಿದೆ. ಸಮಸ್ಯೆ ಬಗ್ಗೆ ಸರ್ಕಾರ ಗಮನ ಹರಿಸಬೇಕು.- ಶ್ರೀನಿವಾಸ್, ಸದಸ್ಯರು, ಸಿಐಟಿಯು ಆಟೋರಿಕ್ಷಾ ಯುನಿಯನ್

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಡಿದ ಮತ್ತಿನಲ್ಲಿ ಬೈಕ್‌ ಜಖಂಮಾಡಿದ್ದಕ್ಕೆ ಸ್ನೇಹಿತನ ಕೊಲೆ
ಐಪಿಎಲ್‌ ಪಂದ್ಯದ ವೇಳೆ ಮೊಬೈಲ್‌ಎಗರಿಸಿದ್ದ ಇನ್ನು 9 ಮಂದಿ ಬಂಧನ