ಹಾಸನದಲ್ಲಿ ಬಂದೋಬಸ್ತಿನಲ್ಲಿ ಲೋಕಸಭೆ ಚುನಾವಣಾ ಮತಗಟ್ಟೆಗೆ ಹೊರಟ ಚುನಾವಣಾ ಸಿಬ್ಬಂದಿ

KannadaprabhaNewsNetwork | Updated : Apr 26 2024, 12:59 AM IST

ಸಾರಾಂಶ

ಲೋಕಸಭಾ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿ ಗುರುವಾರ ಅಗತ್ಯ ಮಾರ್ಗಸೂಚಿಗಳು ಹಾಗೂ ಚುನಾವಣಾ ಪತಿಕರಗಳೊಂದಿಗೆ ಬಿಗಿ ಪೊಲೀಸ್‌ ಬಂದೋಬಸ್ತಿನೊಂದಿಗೆ ಹಾಸನದಲ್ಲಿ ತಾವು ನಿಯೋಜನೆಗೊಂಡ ಮತಗಟ್ಟೆಗಳಿಗೆ ತೆರಳಿದರು.

ಜಿಲ್ಲೆಯಲ್ಲಿ ಒಟ್ಟು ಒಟ್ಟು ೨೨೨೧ ಮತಗಟ್ಟೆಗಳು । ಲೋಕಸಭೆ ಚುನಾವಣೆಗೆ ಸಕಲ ಸಿದ್ಧತೆ । ಚುನಾವಣಾ ಮಸ್ಟರಿಂಗ್‌ ಕಾರ್ಯ ಪೂರ್ಣ

ಕನ್ನಡಪ್ರಭ ವಾರ್ತೆ ಹಾಸನ

ಲೋಕಸಭಾ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿ ಗುರುವಾರ ಅಗತ್ಯ ಮಾರ್ಗಸೂಚಿಗಳು ಹಾಗೂ ಚುನಾವಣಾ ಪತಿಕರಗಳೊಂದಿಗೆ ಬಿಗಿ ಪೊಲೀಸ್‌ ಬಂದೋಬಸ್ತಿನೊಂದಿಗೆ ತಾವು ನಿಯೋಜನೆಗೊಂಡ ಮತಗಟ್ಟೆಗಳಿಗೆ ತೆರಳಿದರು. ಚುನಾವಣೆಗೆ ಜಿಲ್ಲೆಯಲ್ಲಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆದ ಮಸ್ಟರಿಂಗ್ ಪ್ರಕ್ರಿಯೆಯಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ್ದ ಸರ್ಕಾರಿ ನೌಕರರು ಮತಪೆಟ್ಟಿಗೆಯನ್ನು ಕೊಂಡೊಯ್ಯಲು ಸರದಿಯಲ್ಲಿ ಕಾಯುತ್ತಿದ್ದರು. ಚುನಾವಣೆ ಮತಗಟ್ಟೆಗೆ ಬೇಕಾಗುವ ಸಾಮಗ್ರಿಯನ್ನು ಪಡೆದು ಚುನಾವಣಾ ಸಿಬ್ಬಂದಿ ತಮಗೆ ಕೊಟ್ಟ ಪರಿಕರಗಳನ್ನು ಪರಿಶೀಲಿಸಿಕೊಂಡರು. ಕೆಎಸ್‌ಆರ್‌ಟಿಸಿ, ಖಾಸಗಿ ಬಸ್ ಹಾಗೂ ಟೆಂಪೊ ಮೂಲಕ ಮತಗಟ್ಟೆ ಸ್ಥಳಕ್ಕೆ ಚುನಾವಣಾಧಿಕಾರಿಗಳನ್ನು ಪೊಲೀಸರ ಭದ್ರತೆಯೊಂದಿಗೆ ಕರೆದೊಯ್ದರು.

ಹಾಸನ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ೨೨೨೧ ಮತಗಟ್ಟೆಗಳಿವೆ. ಈ ಬಾರಿ ನಡೆಯುವ ಲೋಕಸಭಾ ಚುನಾವಣೆಯು ಶಾಂತಿಯುತವಾಗಿ ನಡೆಯಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಎಲ್ಲೂ ಗೊಂದಲ ಆಗದಂತೆ ಪ್ರತಿಯೊಂದು ಭಾಗಗಳಲ್ಲೂ ನಿಗಾ ವಹಿಸಲಾಗಿದೆ. ಮತಗಟ್ಟೆಗೆ ತೆರಳುವ ಬಸ್ ಮತ್ತು ಟೆಂಪೊವನ್ನು ಸರ್ಕಾರಿ ಕಲಾ ಕಾಲೇಜು ಎದುರು ಮೈದಾನದಲ್ಲಿ ನಿಲ್ಲಿಸಲಾಗಿತ್ತು. ಮತಗಟ್ಟೆಗೆ ತೆರಳುವ ಅಧಿಕಾರಿಗಳಿಗೆ, ಪೊಲೀಸ್ ಸಿಬ್ಬಂದಿಗೆ ಸೇರಿದಂತೆ ಚುನಾವಣೆಗೆ ಕರ್ತವ್ಯ ನಿರ್ವಹಿಸುವ ಎಲ್ಲಾರಿಗೂ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು. ಇನ್ನು ಬೆಳಗಿನಿಂದ ಬಂದಿದ್ದ ರಕ್ಷಣಾ ಸಿಬ್ಬಂದಿಯೊಬ್ಬರು ಬಿಸಿಲಿನ ಬೇಗೆಗೆ ತಲೆ ತಿರುಗಿ ಕೆಳಗೆ ಬಿದ್ದ ಘಟನೆ ನಡೆಯಿತು. ತಕ್ಷಣ ಅವರಿಗೆ ತುರ್ತು ಚಿಕಿತ್ಸೆ ಕೊಡಲಾಯಿತು.

ಏ.೨೬ರ ಶುಕ್ರವಾರ ಹಾಸನ ಲೋಕಸಭಾ ಕ್ಷೇತ್ರದಾದ್ಯಂತ ಬೆಳಿಗ್ಗೆ ೭ ಗಂಟೆಯಿಂದ ಸಂಜೆ ೬ರ ವರೆಗೆ ಮತದಾನ ನಡೆಯಲಿದ್ದು, ಮತಗಟ್ಟೆಗಳಿಗೆ ಅಗತ್ಯ ಇರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸಿದ್ಧತೆ ಮಾಡಲಾಗಿದೆ. ಅಂಗವಿಕಲರು ಮತ್ತು ಹಿರಿಯ ನಾಗರಿಕರಿಗೆ ರ್‍ಯಾಂಪ್, ರೈಲಿಂಗ್ಸ್ ಮತ್ತು ಗಾಲಿಕುರ್ಚಿ, ಬ್ರೈಲ್ ಲಿಪಿಗಳನ್ನು ಒಳಗೊಂಡ ಇವಿಎಂ, ಸಂಕೇತ ಫಲಕ, ಶೌಚಾಲಯ ವ್ಯವಸ್ಥೆ, ಸಾರಿಗೆ ವ್ಯವಸ್ಥೆ, ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಚುನಾವಣಾ ಕರ್ತವ್ಯಕ್ಕೆ ಎನ್‌ಎಸ್‌ಎಸ್ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಸ್ವಯಂ ಸೇವಕರನ್ನು ಬಳಸಿಕೊಳ್ಳಲಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಅರೆ ಸೇನಾಪಡೆಯನ್ನು ಕೂಡ ನಿಯೋಜಿಸಲಾಗಿದೆ.

ಇದೇ ವೇಳೆ ಮುಖ್ಯ ಚುನಾವಣಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ಹಾಗೂ ತಹಸೀಲ್ದಾರ್, ಉಪ ವಿಭಾಗಧಿಕಾರಿಗಳು ಶಿಕ್ಷಣಾಧಿಕಾರಿ ಸೇರಿದಂತೆ ವಿವಿಧ ಅಧಿಕಾರಿಗಳು ಸ್ಥಳದಲ್ಲಿದ್ದರು.

ಹಾಸನದಲ್ಲಿ ಚುನಾವಣಾ ಸಿಬ್ಬಂದಿಯನ್ನು ಮತಗಟ್ಟೆಗಳಿಗೆ ಕರೆದೊಯ್ಯಲು ಸಜ್ಜಾಗಿದ್ದ ಬಸ್‌ಗಳು. ಮತಗಟ್ಟೆ ಸಾಮಗ್ರಿಗಳೊಂದಿಗೆ ನಿಯೋಜಿತ ಮತಗಟ್ಟೆಗೆ ಹೊರಟ ಚುನಾವಣೆ ಸಿಬ್ಬಂದಿ.

Share this article