ಕನ್ನಡಪ್ರಭ ವಾರ್ತೆ ಶಹಾಬಾದ
ಇಂದು ರಾಜ್ಯ, ಸಾರ್ವತ್ರಿಕ ಚುನಾವಣೆಯಲ್ಲಿ ಸೋತ ರಾಜಕೀಯ ಪಕ್ಷಗಳು ತಮ್ಮ ವೈಫಲ್ಯಗಳನ್ನು ಬದಿಗೊತ್ತಿ, ಇವಿಎಂ ಮೇಲೆ ಗೂಬೆ ಕುರಿಸುವುದು ಸಾಮಾನ್ಯ ಎನ್ನುವಂತಾಗಿದ್ದು, ರಾವೂರನ ಶಾಲೆಯ ಮಕ್ಕಳು ಅದೇ ಇವಿಎಂ ಮೂಲಕ ಶೇ.96 ರಷ್ಟು ಮತದಾನದ ಮೂಲಕ ತಮ್ಮ ಪ್ರತಿನಿಧಿಗಳನ್ನು ಅಯ್ಕೆ ಮಾಡಿ, ಪ್ರಜಾತಂತ್ರ ವ್ಯವಸ್ಥೆ ಬಗ್ಗೆ ಅರಿತುಕೊಂಡರು.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಹೇಗೆ ನಡೆಯುತ್ತವೆ ಎನ್ನುವ ಜ್ಞಾನವನ್ನು ಶಾಲಾ ಹಂತದಲ್ಲಿ ಮಕ್ಕಳಿಗೆ ತಿಳಿಸುವ ಪ್ರಯತ್ನ ರಾವೂರ ಸಚ್ಚಿದಾನಂದ ಪ್ರೌಢ ಶಾಲೆಯ ಶಿಕ್ಷಕರು ಚುನಾವಣಾ ಸಾಕ್ಷರತಾ ಕ್ಲಬ್ ವತಿಯಿಂದ ಹಮ್ಮಿಕೊಂಡಿತ್ತು. ತರಗತಿ ನಾಯಕತ್ವಕ್ಕಾಗಿ ನಡೆದ ಚುನಾವಣೆಯಲ್ಲಿ ಮಕ್ಕಳು ತಮ್ಮ ನಾಯಕನನ್ನು ತಾವೇ ಮತಚಲಾಯಿಸುವ ಮೂಲಕ ಆಯ್ಕೆ ಮಾಡಿದರು.
ಪ್ರತಿವರ್ಷದಂತೆ ಈ ಬಾರಿ ಬ್ಯಾಲೇಟ್ ಪೇಪರ್ ಬಳಸದೆ, ಪ್ರಥಮ ಬಾರಿಗೆ ಎಲೆಕ್ಟ್ರಾನಿಕ್ ಮತಯಂತ್ರದ ಮೂಲಕ ಮತದಾನ ಪ್ರಕ್ರೀಯೆ ನಡೆದಿದ್ದು ತುಂಬಾ ವಿಶೇಷವಾಗಿತ್ತು.ಸಮಾಜ ವಿಜ್ಞಾನ ಶಿಕ್ಷಕ ಸಿದ್ಧಲಿಂಗ ಬಾಳಿ ಚುನಾವಣಾ ವೇಳಾಪಟ್ಟಿ ಪ್ರಕಟಿಸಿ ಆ ಮೂಲಕ ಮಕ್ಕಳಿಂದ ನಾಮಪತ್ರ ಸ್ವಿಕಾರ, ಪರಿಶೀಲನೆ, ಹಿಂಪಡೆತ ಪ್ರಕ್ರೀಯೆಗಳು ನಡೆದವು. 80 ನಾಮಪತ್ರಗಳಲ್ಲಿ 3 ತಿರಸ್ಕೃತಗೊಂಡು ಅಂತಿಮವಾಗಿ 77 ಅಭ್ಯರ್ಥಿಗಳು ಕಣದಲ್ಲಿ ಉಳಿದರು. ಬೆಳಗ್ಗೆ ಹತ್ತು ಗಂಟೆಯಿಂದ ವಿದ್ಯಾರ್ಥಿಗಳು ಅತ್ಯಂತ ಹುರುಪಿನಿಂದ ಆಧಾರ ಕಾರ್ಡ್, ರೇಷನ್ ಕಾರ್ಡ್ ದಾಖಲೆಗಳನ್ನು ತಂದು ಮತಚಲಾಯಿಸಿದರು.
ವಿಧ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಂತು ಪ್ರಥಮ ಬಾರಿಗೆ ಇವಿಎಂ ಮೂಲಕ ಮತಚಲಾಯಿಸಿ ಸಂಭ್ರಮಿಸಿದರು. ಇಡೀ ಚುನಾವಣಾ ವ್ಯವಸ್ಥೆಯನ್ನು ಸಂಸ್ಥೆಯ ಅಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿ ಮತ್ತು ಸಂಸ್ಥೆಯ ಕಾರ್ಯದರ್ಶಿ ಡಾ.ಗುಂಡಣ್ಣ ಬಾಳಿ ಅವಲೋಕನ ಮಾಡಿ, ನಿಸ್ಪಕ್ಷಪಾತ ಚುನಾವಣೆಯ ಶಿಕ್ಷಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಚುನಾವಣೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿ ನಾಯಕರು: ವೈಷ್ಣವಿ, ಶ್ರೀನಾಥ (10ನೇ ಎ), ಚಂಪಾ, ಮಾಳಿಂಗರಾಯ (10 ಬಿ) ವಿರೇಶ, ಸಂಗೀತಾ ( 9 ಸಿ), ಮಹಾಲಕ್ಷ್ಮಿ, ಮಲ್ಲಿಕಾರ್ಜುನ (10 ಬಿ), ಭರತ(9 ಎ) ಸಂಜನಾ, ಸುದರ್ಶನ (8ನೇ ಸಿ), ಲಕ್ಷ್ಮೀಕಾಂತ, ಲಕ್ಷ್ಮೀ (8ನೇ ಬಿ) ಅಶ್ವಿನಿ, ಅರುಣಕುಮಾರ (8ನೇ ಎ) ಅವರು ಆಯ್ಕೆಗೊಂಡಿದ್ದಾರೆ. ಒಟ್ಟು 537 ಮತಗಳಲ್ಲಿ 515 ಮತಗಳು ಚಲಾವಣೆಯಾದವು. 390 ವಿದ್ಯಾರ್ಥಿಗಳು, 125 ವಿದ್ಯಾರ್ಥಿನಿಯರು ತಮ್ಮ ಹಕ್ಕು ಚಲಾಯಿಸಿದರು. ಒಟ್ಟು 96 ಪ್ರತಿಶತ ಮತದಾನವಾಯಿತು..
---ಸದಾ ಕ್ರೀಯಾಶೀಲ ಶಿಕ್ಷಕರು ಮಕ್ಕಳನ್ನು ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿ ಮತದಾನದ ಅರಿವನ್ನು ಮೂಡಿಸುತ್ತಿದ್ದಾರೆ. ಮಕ್ಕಳಲ್ಲಿ ನಾಯಕತ್ವ ಗುಣ ಈ ಹಂತದಲ್ಲಿ ಬೆಳೆಯುತ್ತವೆ. ಮತ್ತು ಮತದಾನ ನಮ್ಮೇಲ್ಲರ ಹಕ್ಕು ಎನ್ನುವುದನ್ನು ಅರಿತುಕೊಂಡರು.
- ಸಿದ್ಧಲಿಂಗ ಸ್ವಾಮೀಜಿ, ಸಂಸ್ಥೆಯ ಅಧ್ಯಕ್ಷರು