ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ತಾಲೂಕಿನಲ್ಲಿ ಶೇ.94.40 ರಷ್ಟು ಮತದಾನ ನಡೆದಿದೆ.ಕ್ಷೇತ್ರದಲ್ಲಿ ಒಟ್ಟು 464 ಮತದಾರರ ಪೈಕಿ 312 ಪುರುಷ ಮತದಾರರು ಹಾಗೂ 127 ಮಹಿಳಾ ಮತದಾರರು ಸೇರಿದಂತೆ ಒಟ್ಟು 439 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಸೋಮವಾರ ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮತ್ತು ಬಿಎಸ್‌ಪಿ ಅಭ್ಯರ್ಥಿ ಕಡೆಯವರು ಪ್ರತ್ಯೇಕ ಶಾಮಿಯಾನ ಹಾಕಿಸಿಕೊಂಡು ಮತಯಾಚನೆಯಲ್ಲಿ ತೊಡಗಿದ್ದರು.ಮೈತ್ರಿ ಅಭ್ಯರ್ಥಿ ಪರ ಶಾಸಕ ಎಚ್.ಟಿ.ಮಂಜು, ಮಂಡ್ಯ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಕೆ.ಅಶೋಕ್, ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಮು, ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಧನಂಜಯ, ಬಿಜೆಪಿ ತಾಲೂಕು ಅಧ್ಯಕ್ಷ ಸಾರಂಗಿನಾಗರಾಜು, ಕಾರ್ಯದರ್ಶಿ ಚೋಕನಹಳ್ಳಿಪ್ರಕಾಶ್ ಬಿಜೆಪಿ ಮುಖಂಡರು ಸಮನ್ವಯತೆಯಿಂದ ಚುನಾವಣಾ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಕಾಂಗ್ರೆಸ್‌ನಿಂದ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಕೆಪಿಸಿಸಿ ಸದಸ್ಯ ಸುರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಂದ್ರಕುಮಾರ್, ಮುಖಂಡ ವಿಜಯ್ ರಾಮೇಗೌಡ ಸೇರಿದಂತೆ ಹಲವರು ಅಂತಿಮ ಕ್ಷಣದ ವರೆಗೂ ಮತಯಾಚನೆ ಮಾಡುವ ಮೂಲಕ ಗಮನ ಸೆಳೆದರು.ಕಳೆದ ಒಂದು ವಾರದಿಂದಲೂ ನಡೆದ ಪ್ರಚಾರ ಸಭೆಗಳು ಮತ್ತು ಶಾಲೆಗಳ ಭೇಟಿ ವೇಳೆಯಲ್ಲಿ ಅಭ್ಯರ್ಥಿಗಳು ತಾಲೂಕಿಗೆ ಆಗಮಿಸಿ ಮತದಾರರನ್ನು ಭೇಟಿ ಮಾಡಿ ಮತಯಾಚನೆ ಮಾಡಿದ್ದರು. ನಂತರ ಪಕ್ಷದ ಬೆಂಬಲಿಗರು, ಮುಖಂಡರು ತಮ್ಮ ತಮ್ಮ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದ್ದರು. ವಿವೇಕಾನಂದರನ್ನು ಹಣಬಲದಿಂದ ಗೆಲ್ಲಿಸಬೇಡಿ ಎಂದು ಕಾಂಗ್ರೆಸ್ ಮುಖಂಡರು ಮತಯಾಚಿಸಿದರೆ, ಮೈತ್ರಿ ಅಭ್ಯರ್ಥಿ ಕಡೆಯವರು ಪಕ್ಷಾಂತರ ಮಾಡಿದವರಿಗೆ ತಕ್ಕ ಪಾಠ ಕಲಿಸಿ ಎಂಬ ವಿಷಯದ ಆಧಾರದ ಮೇಲೆ ಚುನಾವಣಾ ಪ್ರಚಾರ ನಡೆಸಿದ್ದರು.