ರೈತರ ಜಮೀನಿನ ಮಧ್ಯೆಯೇ ವಿದ್ಯುತ್ ಮಾರ್ಗ!

KannadaprabhaNewsNetwork | Published : Jul 14, 2024 1:32 AM

ಸಾರಾಂಶ

ವಿದ್ಯುತ್ ಪ್ರಸರಣ ನಿಗಮವು ಕಾಗೋಡಿನಲ್ಲಿ ಗ್ರಿಡ್ ನಿರ್ಮಿಸುತ್ತಿದ್ದು 9 ಕಿ.ಮೀ. ದೂರದ 110 ಕೆ.ವಿ. ಪ್ರಸರಣ ಮಾರ್ಗವು ಅಡಕೆ ತೋಟ ಹಾಗೂ ಭತ್ತದ ಗದ್ದೆಯಲ್ಲಿ ಹಾದುಹೋಗುವಂತೆ ವಿನ್ಯಾಸಗೊಳಿಸಿರುವುದು ರೈತರ ವಿರೋಧಕ್ಕೆ ಕಾರಣವಾಗಿದೆ.

ಕಲಗಾರು ಲಕ್ಷ್ಮೀನಾರಾಯಣ ಹೆಗಡೆ

ಕನ್ನಡಪ್ರಭ ವಾರ್ತೆ ತಾಳಗುಪ್ಪ

ಗ್ರಾಮೀಣ ಪ್ರದೇಶದಲ್ಲಿ ಗುಣ ಮಟ್ಟದ ವಿದ್ಯುತ್ ಸರಬರಾಜಿಗಾಗಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ಕಾಗೋಡಿನಲ್ಲಿ ಗ್ರಿಡ್ ನಿರ್ಮಿಸುತ್ತಿದ್ದು. ಅದಕ್ಕೆ ಸಂಭಂದಿಸಿದಂತೆ 9 ಕಿ.ಮೀ. ದೂರದ 110 ಕೆ.ವಿ. ಪ್ರಸರಣ ಮಾರ್ಗವು ಅಡಕೆ ತೋಟ ಹಾಗೂ ಭತ್ತದ ಗದ್ದೆಯಲ್ಲಿ ಹಾದುಹೋಗುವಂತೆ ವಿನ್ಯಾಸಗೊಳಿಸಿರುವುದು ರೈತರ ವಿರೋಧಕ್ಕೆ ಕಾರಣವಾಗಿದೆ.

ಇದರಿಂದ ಕಾನ್ಲೆ ಗ್ರಾಮದಲ್ಲಿ ಸುಮಾರು 2 ಕಿ.ಮೀ. ದೂರದ 80 ರೈತರ ಅಂದಾಜು 100 ಎಕರೆ ಅಡಕೆ ತೋಟದ ಮಧ್ಯದಲ್ಲಿ ಮಾರ್ಗ ನಿರ್ಮಾಣಗೊಳ್ಳಲಿದೆ. ಅಡಕೆ ತೋಟ 200-300 ಅಡಿ ಅಗಲವಿದ್ದು, ಕಾರಿಡಾರ್ ನಿರ್ಮಾಣದಿಂದ 22 ಮೀಟರ್ ಅಗಲದ ಅಡಕೆ ತೋಟ ನಾಶಗೊಳ್ಳುವುದಲ್ಲದೆ ತೋಟ ಇಬ್ಭಾಗವಾಗಿ ಕೃಷಿ ಚಟುವಟಿಕೆಗಳಿಗೆ ಅಡಚಣೆಯಾಗಲಿದೆ. ಶಿರೂರು, ಮಂಡಗಳಲೆ, ಕಾಗೋಡಿನಲ್ಲಿಯೂ ಇದೇ ಪರಿಸ್ಥಿತಿಯಿದ್ದು, ಸುಮಾರು 200ಕ್ಕೂ ಹೆಚ್ಚು ರೈತರ ಜಮೀನಿ ನಲ್ಲಿ ಮಾರ್ಗ ಹಾದು ಹೋಗುತ್ತದೆ ಇದು ರೈತರನ್ನು ಚಿಂತೆಗೀಡು ಮಾಡಿದೆ.

ಪರ್ಯಾಯ ಭೂಮಿ ಇದೆ:

ಮಾರ್ಗ ನಿರ್ಮಿಸಲು ಕೃಷಿ ಜಮೀನುಗಳ ಪಕ್ಕದಲ್ಲಿಯೇ ಕಂದಾಯ, ಖಾಸಗಿ, ಅರಣ್ಯ ಇಲಾಖೆಗೆ ಸೇರಿದ ಖುಷ್ಕಿ ಜಮೀನುಗಳಿವೆ. ದಾಖಲೆಯಂತೆ ಅರಣ್ಯ, ಕಂದಾಯ, ಭೂಮಿಯಾಗಿರುವ ತೋಟದ ಮೇಲ್ಭಾಗದಲ್ಲಿರುವ ಖುಷ್ಕಿ ಪ್ರದೇಶವನ್ನು ಕೃಷಿಕರು ಹಲವು ವರ್ಷಗಳಿಂದ ಬೇಲಿ ಕಟ್ಟಿ ತಮ್ಮ ಸ್ವಾಧೀನದಲ್ಲಿಟ್ಟು ಕೊಂಡಿದ್ದು, ಅಲ್ಲಿ ಪ್ರಸರಣ ಮಾರ್ಗ ನಿರ್ಮಿಸಿದರೆ ರೈತರಿಗೆ ತೊಂದರೆಯಾಗುವುದಿಲ್ಲ. ಆದರೆ ನಿಗಮವು ಅದನ್ನು ಪರಿಗಣಿಸದೆ ರೈತರ ಫಲವತ್ತಾದ ಭೂಮಿಯನ್ನು ಗುರುತಿಸಿಕೊಂಡು ಸ್ವಾಧೀನ ಕ್ರಮಕ್ಕೆ ಮುಂದಾಗಿದೆ ಎಂದು ರೈತರು ದೂರಿದ್ದಾರೆ.

ರೈತರ ಪ್ರತಿಭಟನೆ:

ಈ ಹಿಂದೆ ಜಮೀನಿನ ಪಕ್ಕದಲ್ಲಿ ಲೈನು ಹೋಗುತ್ತದೆ ಎನ್ನುತ್ತಿದ್ದ ಅಧಿಕಾರಿಗಳು ಜುಲೈ 10ರಂದು ತೋಟದ ಮಧ್ಯೆ ಸ್ಥಳ ಗುರುತಿಸಲು ಮುಂದಾದಾಗ ರೈತರು ತಡೆದಿದ್ದಾರೆ. ಈ ವೇಳೆ ಸ್ಥಳದಲ್ಲಿ ಮಾತಿನ ಚಕಮಕಿ ನಡೆದಿದೆ. ಪೋಲೀಸ್ ಕಾವಲಿನಲ್ಲಿ ತೋಟ ಕಡಿದು ಲೈನು ಹಾಕುವುದಾಗಿ ನಿಗಮದ ಅಧಿಕಾರಿಗಳು ಬೆದರಿಕೆ ಒಡ್ಡಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಿಡ್ ಕಾಮಗಾರಿ ಯೋಜಿತವಾಗಿ 7 ವರ್ಷಗಳು ಗತಿಸಿದೆ. ಅರಣ್ಯ ಭೂಮಿಯಲ್ಲಿ ವಿದ್ಯುತ್ ಮಾರ್ಗ ನಿರ್ಮಾಣಕ್ಕೆ ಕಾನೂನಿಲ್ಲಿ ಅವಕಾಶವಿದ್ದರೂ ಆ ಬಗ್ಗೆ ಪ್ರಯತ್ನ ವನ್ನೇ ನಡೆಸದೆ ಕೆಪಿಟಿಸಿಎಲ್ ಅಧಿಕಾರಿಗಳು ನಿರ್ಲಕ್ಷ್ಯದಿಂದ ವರ್ತಿಸಿದ್ದಾರೆ. ಯಾವುದೇ ಕಾರಣದಿಂದಲೂ ಅಡಕೆತೋಟ ಕಡಿಯಲು ಅವಕಾಶ ನೀಡುವುದಿಲ್ಲ. ಅಧಿಕಾರಿಗಳು ಬಲಾತ್ಕಾರಕ್ಕೆ ಮುಂದಾದರೆ ಅದರ ಪರಿಣಾಮ ಒಳ್ಳೆಯದಾಗಿರುವುದಿಲ್ಲ ಎಂದು ಮಂಡಗಳಲೆ ಶಿವಮೂರ್ತಿ ಹೇಳಿದರು.

ಸೂಕ್ತ ಭೂಮಿ ಇದ್ದರೂ ಸಣ್ಣ ಅತಿ ಸಣ್ಣ ರೈತರ ಜೀವನಾಧಾರವಾದ ತೋಟವನ್ನು ಕಿತ್ತುಕೊಳ್ಳಲು ವಿದ್ಯುತ್ ನಿಗಮದ ಅಧಿಕಾರಿಗಳು ಮುಂದಾಗಿದ್ದಾರೆ. ಅಧಿಕಾರಿಗಳು ಅಡಕೆ ತೋಟ ಕಡಿಯಲು ಬಂದರೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಕಾನ್ಲೆಯ ರಾಜು ಹೇಳಿದರು.

ಜುಲೈ 10ರಂದು ಪ್ರಸರಣ ಮಾರ್ಗದ ಭೂನಷ್ಟ, ಗೋಪುರದ ತಳಪಾಯಕ್ಕೆ ಪರಿಹಾರದ ಮಾಹಿತಿಗಾಗಿ ಉಪವಿಭಾಗಾಧಿಕಾರಿಗಳು ನಡೆಸಿದ ಸಭೆಯಲ್ಲಿ ರೈತರ ಪ್ರತಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಉಪ ವಿಭಾಗಾಧಿಕಾರಿಗಳು ಪರ್ಯಾಯ ಮಾರ್ಗ ಪರಿಶೀಲಿಸಿ ವರದಿ ಸಲ್ಲಿಸಲು ಸೂಚಿಸಿದ್ದಾರೆ ಎಂದು ವಿದ್ಯುತ್ ಪ್ರಸರಣ ನಿಗಮ ಕಾರ್ಯಪಾಲಕ ಅಭಿಯಂತರ ಕುಮಾರಸ್ವಾಮಿ ಮಾಹಿತಿ ನೀಡಿದರು.

ಇನ್ನು, ಸಾಗರ ಉಪವಿಭಾಗಾಧಿಕಾರಿ ಎನ್.ಯತೀಶ ಮಾತನಾಡಿ, ಈಗ ಗುರುತಿಸಿರುವ ಮಾರ್ಗದ ಬಗ್ಗೆ ರೈತರ ವಿರೋಧ ವಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿಗಳು ಪರ್ಯಾಯ ಮಾರ್ಗ ಗುರುತಿಸಲು ತಿಳಿಸಿದ್ದಾರೆ. ಪರ್ಯಾಯ ಸ್ಥಳದ ಸರ್ವೇ ನಡೆಸಲು ಕೆಪಿಟಿಸಿಎಲ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

Share this article