ಕಾರವಾರ: ವಿದ್ಯುತ್ ಮಂಡಳಿ ನೌಕರರ ಪಿಂಚಣಿ ಮತ್ತು ಗ್ರಾಚ್ಯುಟಿ ಹಣವನ್ನು ಗ್ರಾಹಕರ ವಿದ್ಯುತ್ ಬಿಲ್‌ನಲ್ಲಿ ಸೇರಿಸಿ ವಸೂಲಿ ಮಾಡುತ್ತಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಪದ್ಧತಿಯನ್ನು ಕೈಬಿಡುವಂತೆ ಶಾಸಕ ಸತೀಶ ಸೈಲ್ ಅವರನ್ನು ಆಗ್ರಹಿಸಿದ್ದಾರೆ.
ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಾಬು ಜೆ. ಅಂಬಿಗ, ಹೆಸ್ಕಾಂ ನೀಡುವ ವಿದ್ಯುತ್ ಬಿಲ್‌ನಲ್ಲಿ ಪಿ ಆ್ಯಂಡ್ ಜಿ ಚಾರ್ಜಸ್ ಎಂಬ ಹೆಸರಿನಲ್ಲಿ ಹೆಸ್ಕಾಂ ನೌಕರರ ಪಿಂಚಣಿ ಮತ್ತು ಗ್ರಾಟ್ಯುಟಿ ವೆಚ್ಚವನ್ನು ಪ್ರತಿ ತಿಂಗಳು ಗ್ರಾಹಕರಿಂದ ವಸೂಲಿ ಮಾಡಲಾಗುತ್ತಿದೆ. ನೌಕರರ ಪಿಂಚಣಿಗಾಗಿ ಅವರ ವೇತನದಿಂದಲೇ ಹಣ ಕಡಿತ ಮಾಡಬೇಕು. ಅದನ್ನು ಬಿಟ್ಟು ಸಾಮಾನ್ಯ ಗ್ರಾಹಕರ ಮೇಲೆ ಈ ಹೊರೆ ಹಾಕುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಇದಕ್ಕೆ ಸ್ಪಂದಿಸಿದ ಶಾಸಕ ಸತೀಶ ಸೈಲ್, ಈ ಕುರಿತು ಪರಿಶೀಲಿಸಿ ಮುಖ್ಯಮಂತ್ರಿಗೆ ಪತ್ರ ಬರೆಯುವುದಾಗಿ ಭರವಸೆ ನೀಡಿದರು.ಕೈಗಾ ರಸ್ತೆಯಲ್ಲಿ ವಿದ್ಯುತ್ ತಂತಿಗಳನ್ನು ಗರಿಷ್ಠ ಎತ್ತರಕ್ಕೆ ಅಳವಡಿಸಬೇಕು. ಇಲ್ಲವೇ ಅಂಡರ್‌ಗ್ರೌಂಡ್ ಕೇಬಲ್ ಅಳವಡಿಸಬೇಕು. ಕೈಗಾ ಸಿಎಸ್‌ಆರ್ ನಿಧಿಯಡಿ ₹24 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಯಲಿದ್ದು, ಅದೇ ಕಾಮಗಾರಿಯ ಜತೆಗೆ ವಿದ್ಯುತ್ ಲೈನ್ ಅಳವಡಿಕೆಗೂ ಪ್ರಸ್ತಾವನೆ ಸಿದ್ಧಪಡಿಸಿ ಕೈಗಾ ಅಧಿಕಾರಿಗಳಿಗೆ ಕಳುಹಿಸಿ ಎಂದು ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಲಂಚದ ಆರೋಪ: ಹೆಸ್ಕಾಂ ಸಿಬ್ಬಂದಿ ಅಮಾನತಿಗೆ ಆದೇಶಸಭೆಯ ನಡುವೆ ಬಿಲ್ಡರ್ ರಾಜು ಪಾಟೀಲ್ ಹಾಗೂ ಮುಸ್ಲಿಂ ದಂಪತಿ ಆಗಮಿಸಿ ಹೆಸ್ಕಾಂ ಸಿಬ್ಬಂದಿಯೊಬ್ಬರ ಮೇಲೆ ನೇರವಾಗಿ ಭ್ರಷ್ಟಾಚಾರದ ಆರೋಪ ಹೊರಿಸಿದ ಘಟನೆ ನಡೆಯಿತು. ಶಾಸಕ ಸತೀಶ ಸೈಲ್, ಬಹಿರಂಗ ಸಭೆಯಲ್ಲಿ ಈ ರೀತಿಯ ಭ್ರಷ್ಟಾಚಾರದ ಆರೋಪಗಳನ್ನು ನಾನು ಸಹಿಸುವುದಿಲ್ಲ. ಈ ಕುರಿತು ಲಿಖಿತವಾಗಿ ದೂರು ನೀಡಿ ಎಂದು ರಾಜು ಪಾಟೀಲ ಅವರಿಗೆ ಸೂಚಿಸಿದರು. ಅಲ್ಲದೇ, ಆರೋಪ ಎದುರಿಸುತ್ತಿರುವ ಸಿಬ್ಬಂದಿಯನ್ನು ತಕ್ಷಣವೇ ಅಮಾನತು ಮಾಡುವಂತೆ ಎಇಇ ಅವರಿಗೆ ಆದೇಶಿಸಿದರು.