ವಿದ್ಯುತ್‌, ವಾಣಿಜ್ಯ ಸಿಲಿಂಡರ್‌ಬೆನ್ನಲ್ಲೇ ತರಕಾರಿಯೂ ದುಬಾರಿ

KannadaprabhaNewsNetwork |  
Published : May 04, 2026, 04:00 AM IST
ತರಕಾರಿ | Kannada Prabha

ಸಾರಾಂಶ

ವಿದ್ಯುತ್‌, ಗ್ಯಾಸ್‌ ಸಿಲಿಂಡರ್‌ ದರ ಹೆಚ್ಚಳದಿಂದ ಸಂಕಷ್ಟದಲ್ಲಿರುವ ಶ್ರೀಸಾಮಾನ್ಯರಿಗೆ ಈಗ ನಿತ್ಯ ಬಳಕೆಯ ತರಕಾರಿ ಬೆಲೆಯೂ ಹೆಚ್ಚಳವಾಗಿ, ಗಾಯದ ಮೇಲೆ ಬರೆ ಎಳೆದಂತಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿದ್ಯುತ್‌, ಗ್ಯಾಸ್‌ ಸಿಲಿಂಡರ್‌ ದರ ಹೆಚ್ಚಳದಿಂದ ಸಂಕಷ್ಟದಲ್ಲಿರುವ ಶ್ರೀಸಾಮಾನ್ಯರಿಗೆ ಈಗ ನಿತ್ಯ ಬಳಕೆಯ ತರಕಾರಿ ಬೆಲೆಯೂ ಹೆಚ್ಚಳವಾಗಿ, ಗಾಯದ ಮೇಲೆ ಬರೆ ಎಳೆದಂತಾಗಿದೆ.

ಸಿಕ್ಕಾಪಟ್ಟೆ ಬಿಸಿಲಿನ ಝಳದಿಂದಾಗಿ ಹೂವು ಉದುರಿ ಇಳುವರಿ ಕಡಿಮೆಯಾಗಿರುವುದು, ಲೋಡ್‌ ಶೆಡ್ಡಿಂಗ್‌ನಿಂದಾಗಿ ಪಂಪ್‌ಸೆಟ್‌ಗಳು ಕಾರ್ಯನಿರ್ವಹಿಸದೆ ಸೂಕ್ತ ಪ್ರಮಾಣದಲ್ಲಿ ನೀರು ಸಿಗದಿರುವ ಕಾರಣ ಇಳುವರಿ ಪ್ರಮಾಣ ಕುಸಿದಿದೆ. ಮಾರುಕಟ್ಟೆಗೆ ಬರುವ ಪ್ರಮಾಣ ಕಡಿಮೆಯಾಗಿರುವುದರಿಂದ ತರಕಾರಿಗಳ ಬೆಲೆ ದಿನದಿಂದ ದಿನಕ್ಕೆ ಏರುಗತಿಯಲ್ಲಿದೆ.

ಮಾರುಕಟ್ಟೆಯಲ್ಲಿ ಬೀನ್ಸ್‌ ಬೆಲೆ ಕೇಳಿದರೆ ಬೆಚ್ಚಿ ಬೀಳುವಂತಾಗಿದೆ. ಒಂದು ಕೆ.ಜಿ. ಬೀನ್ಸ್‌ ಚಿಲ್ಲರೆ ಮಾರುಕಟ್ಟೆಯಲ್ಲಿ 200 ರು.ಗೆ ಮಾರಾಟವಾಗುತ್ತಿದೆ. ಕೆಜಿ ಬದನೆ 80, ಬೆಂಡೆಕಾಯಿ 75 ರು, ಟೊಮ್ಯಾಟೋ, ಸೌತೆಕಾಯಿ, ಬೀಟ್‌ರೋಟ್‌ ಪ್ರತಿ ಕೆಜಿಗೆ 60 ರು, ಕ್ಯಾರೇಟ್‌ 50 ರುಪಾಯಿಗೆ ಬಿಕರಿಯಾಗುತ್ತಿವೆ. ಒಂದು ಕಟ್ಟು ಸೊಪ್ಪಿನ ಬೆಲೆಯೂ 40 ರು. ಇದೆ.

ಇತ್ತೀಚೆಗೆ ಒಂದಷ್ಟು ಮಳೆ ಆಗಿರುವುದರಿಂದ ತರಕಾರಿ ಬೆಲೆಗಳು ಇಳಿಕೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಗ್ರಾಹಕರು ಬೆಲೆ ಹೆಚ್ಚಳವಾಗುತ್ತಿರುವುದನ್ನು ಕಂಡು ಕಂಗಾಲಾಗಿದ್ದಾರೆ. ಸದ್ಯಕ್ಕೆ ತರಕಾರಿ ಬೆಲೆ ಇಳಿಕೆಯಾಗುವ ಲಕ್ಷಣ ಕಂಡುಬರುತ್ತಿಲ್ಲ. ಜೂನ್‌ ಬಳಿಕ ಬೆಲೆ ಕಡಿಮೆ ಆಗಬಹುದು ಎಂದು ಅಂದಾಜಿಸಲಾಗಿದೆ.

ಬಿಸಿಲಿನಿಂದ ಫಸಲಿಲ್ಲ

ಬಿಸಿಲು ಹೆಚ್ಚಾಗಿದ್ದು ಇಳುವರಿ ಮೇಲೆ ಹೊಡೆತ ನೀಡುತ್ತಿರುವುದು ತರಕಾರಿ ಬೆಲೆ ಹೆಚ್ಚಾಗಲು ಪ್ರಮುಖ ಕಾರಣ ಎಂದು ಯಶವಂತಪುರದ ಸಗಟು ತರಕಾರಿ ವ್ಯಾಪಾರ ಮಾಡುವ ನಾಗರಾಜ್‌ ಅಭಿಪ್ರಾಯಪಟ್ಟಿದ್ದಾರೆ. ‘ಕನ್ನಡ ಪ್ರಭ’ದೊಂದಿಗೆ ಮಾತನಾಡಿ, ಬಿಸಿಲು ಹೆಚ್ಚಾಗಿರುವುದರಿಂದ ತರಕಾರಿ ಇಳುವರಿ ಬರುತ್ತಿಲ್ಲ. ಹಳ್ಳಿಗಳಿಂದ ನಗರಕ್ಕೆ ಸರಬರಾಜು ಆಗುವ ತರಕಾರಿ ಪ್ರಮಾಣ ಕಡಿಮೆಯಾಗಿದೆ. ನೀರಿನ ಕೊರತೆ ಹಾಗೂ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಕೆಲ ಕಡೆ ತರಕಾರಿ ಹಾಳಾಗಿದೆ. ಹೀಗಾಗಿ ಬೇಡಿಕೆಗೆ ತಕ್ಕಂತೆ ತರಕಾರಿ ಬರುತ್ತಿಲ್ಲ. ಇದರಿಂದಲೂ ತರಕಾರಿಗಳು ದುಬಾರಿಯಾಗಿದೆ ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಾರ್‌ಧಾಮ್‌ ಯಾತ್ರೆ ಹೆಸರಲ್ಲಿ26 ಮಂದಿಗೆ ₹15 ಲಕ್ಷ ಟೋಪಿ
2 ಮಕ್ಕಳಿಗೆ ವಿಷ ಕುಡಿಸಿತಾಯಿ ಆತ್ಮಹತ್ಯೆ ಯತ್ನ