ಕನ್ನಡಪ್ರಭ ವಾರ್ತೆ ಬೆಂಗಳೂರು

ಕೌಟುಂಬಿಕ ಕಲಹದಿಂದ ಬೇಸತ್ತ ತಾಯಿ ತನ್ನ ಇಬ್ಬರು ಮಕ್ಕಳಿಗೆ ಇಲಿ ಪಾಷಾಣ ಹಾಕಿ ಕೊಂದ ಬಳಿಕ ತಾನೂ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಯಶವಂತಪುರ ಠಾಣೆ ವ್ಯಾಪ್ತಿಯ ಮತ್ತಿಕೆರೆಯಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.

ಯಶವಂತಪುರದ ಮತ್ತಿಕೆರೆ ನಿವಾಸಿ ಪ್ರಶಾಂತ್ ಅವರ ಮಕ್ಕಳಾದ ನಿವೇದ್ (4) ಮತ್ತು ನಿರ್ಮಲ್‌ (2) ಮೃತ ಮಕ್ಕಳು. ತಾಯಿ ಪವಿತ್ರಾ (24) ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತುಮಕೂರು ಜಿಲ್ಲೆ ಪಾವಗಡ ಮೂಲದ ಪ್ರಶಾಂತ್‌ ಮತ್ತು ಪವಿತ್ರಾ 5 ವರ್ಷಗಳ ಹಿಂದೆ ಮದುವೆಯಾಗಿದ್ದು, ದಂಪತಿಗೆ ನಿವೇದ್‌ ಮತ್ತು ನಿರ್ಮಲ್‌ ಎಂಬ ಇಬ್ಬರು ಗಂಡು ಮಕ್ಕಳು ಇದ್ದರು.ಮತ್ತಿಕೆರೆಯಲ್ಲಿ ವಾಸವಾಗಿದ್ದರು. ಪ್ರಶಾಂತ್‌ ಎಲೆಕ್ಟ್ರಿಕಲ್‌ ವಸ್ತುಗಳ ಶೋರೂಮ್‌ನಲ್ಲಿ ಮಾರಾಟ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದಾರೆ. ಪವಿತ್ರಾ ಮನೆಯಲ್ಲೇ ಇರುತ್ತಿದ್ದರು. ದಂಪತಿ ನಡುವೆ ಆಗಾಗ್ಗೆ ಕ್ಷುಲ್ಲಕ ವಿಚಾರಕ್ಕೆ ಜಗಳ ನಡೆಯುತ್ತಿತ್ತು. ಶನಿವಾರ ಸಂಜೆ ಕೂಡ ದಂಪತಿ ನಡುವೆ ಜಗಳ ನಡೆದಿದೆ. ಬಳಿಕ ಪತಿ ಪ್ರಶಾಂತ್‌ ಹೊರಗಡೆ ಹೋಗಿದ್ದಾರೆ.

ಹಾಲಿನಲ್ಲಿ ಇಲಿ ಪಾಷಾಣ ಬೆರೆಸಿ ಕುಡಿಸಿದ ತಾಯಿ:


ಜಗಳದಿಂದ ಬೇಸರಗೊಂಡಿದ್ದ ಪವಿತ್ರಾ ರಾತ್ರಿ ಪತಿ ಮನೆಗೆ ಬರುವಷ್ಟರಲ್ಲಿ ಮಕ್ಕಳಿಗೆ ಹಾಲಿನಲ್ಲಿ ಇಲಿ ಪಾಷಾಣ ಬೆರೆಸಿ ಕುಡಿಸಿ, ಬಳಿಕ ತಾನೂ ಸೇವಿಸಿ ಕೋಣೆಗೆ ಹೋಗಿ ಮಲಗಿದ್ದಾರೆ. ತಡರಾತ್ರಿ ಮನೆಗೆ ಬಂದ ಪ್ರಶಾಂತ್‌, ಪತ್ನಿ, ಮಕ್ಕಳು ಮಲಗಿದ್ದನ್ನು ನೋಡಿ ಊಟ ಮಾಡಿ ಹಾಲ್‌ನಲ್ಲಿ ಮಲಗಿದ್ದಾರೆ. ಭಾನುವಾರ ಬೆಳಗ್ಗೆ ಮಕ್ಕಳನ್ನು ಎಬ್ಬಿಸಲು ಯತ್ನಿಸಿದ್ದಾರೆ. ಆದರೆ, ಎಚ್ಚರಗೊಂಡಿಲ್ಲ. ಆಗ ಪತ್ನಿ ಪವಿತ್ರಾ, ಮಕ್ಕಳಿಗೆ ವಿಷ ಕುಡಿಸಿ, ತಾನೂ ಕುಡಿದಿದ್ದಾಗಿ ಹೇಳಿದ್ದಾಳೆ. ಇದರಿಂದ ಗಾಬರಿಗೊಂಡ ಪ್ರಶಾಂತ್‌, ಮೂವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಪರೀಕ್ಷಿಸಿದ ವೈದ್ಯರು ಈಗಾಗಲೇ ಮಕ್ಕಳು ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ. ಪವಿತ್ರಾಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರಶಾಂತ್‌ ಅವರಿಂದ ದೂರು ಸ್ವೀಕರಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.