ಮನೆ ಮುಂದೆ ಆಟೋ ನಿಲುಗಡೆ ಮಾಡಿದ ವಿಚಾರಕ್ಕೆ ಆರಂಭವಾದ ಜಗಳ ಆಟೋ ಚಾಲಕನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಗಜೀವನ್ ರಾಂನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮನೆ ಮುಂದೆ ಆಟೋ ನಿಲುಗಡೆ ಮಾಡಿದ ವಿಚಾರಕ್ಕೆ ಆರಂಭವಾದ ಜಗಳ ಆಟೋ ಚಾಲಕನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಗಜೀವನ್ ರಾಂನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಪಾದರಾಯನಪುರದ ನಿವಾಸಿ ಮುಬಾರಕ್ (26) ಕೊಲೆಯಾದ ಆಟೋ ಚಾಲಕ. ಕೃತ್ಯ ಎಸಗಿದ ತಬ್ರೇಜ್ ಎಂಬಾತನ ಬಂಧಿಸಲಾಗಿದೆ. ಮೇ 1ರಂದು ಪಾದರಾಯನಪುರದ 7ನೇ ಕ್ರಾಸ್‌ನಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಬಾರಕ್ 1 ವರ್ಷಗಳ ಹಿಂದೆ ಮದುವೆಯಾಗಿದ್ದು, ಪಾದರಾಯನಪುರದಲ್ಲಿ ಪತ್ನಿ ಜತೆ ವಾಸವಾಗಿದ್ದ. ಆಟೋ ಚಾಲನೆ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಮನೆ ಮುಂದೆಯೇ ಆಟೋ ನಿಲುಗಡೆ ಮಾಡುತ್ತಿದ್ದ. ಏ.31 ರಂದು ರಾತ್ರಿ ಆಟೋ ನಿಲುಗಡೆ ಮಾಡುವ ವಿಚಾರಕ್ಕೆ ಪಕ್ಕದ ಮನೆ ನಿವಾಸಿ ತಬ್ರೇಜ್ ಜತೆ ಗಲಾಟೆ ಮಾಡಿಕೊಂಡಿದ್ದ. ಅದರಿಂದ ಕೋಪಗೊಂಡಿದ್ದ ಆರೋಪಿ, ತಡರಾತ್ರಿ ಮುಬರಾಕ್‌ನ ಆಟೋ ಸೀಟ್ ತೆಗೆದುಕೊಂಡು ಹೋಗಿದ್ದ. ಮರುದಿನ ಬೆಳಗ್ಗೆ 10 ಗಂಟೆ ಸುಮಾರಿಗೆ ಆಟೋ ಬಳಿ ಹೋದಾಗ ಸೀಟ್ ಇರಲಿಲ್ಲ. ಅದರಿಂದ ಅನುಮಾನಗೊಂಡ ಮುಬಾರಕ್, ತಬ್ರೇಜ್‌ನನ್ನು ಪ್ರಶ್ನಿಸಿದ್ದು, ಏಕಾಏಕಿ ಇಬ್ಬರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಅದು ವಿಕೋಪಕ್ಕೆ ಹೋದಾಗ ಆರೋಪಿ ತಬ್ರೇಜ್, ಮರದ ರಿಪೀಸ್ ಪಟ್ಟಿಯಿಂದ ಮುಬಾರಕ್ ತಲೆಗೆ ಹೊಡೆದಿದ್ದು, ಆತ ಕುಸಿದು ಬಿದ್ದಿದ್ದಾನೆ. ಗಂಭೀರ ಗಾಯಗೊಂಡಿದ್ದ ಮುಬಾರಕ್‌ನನ್ನು ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಶನಿವಾರ ರಾತ್ರಿ ಮೃತಪಟ್ಟಿದ್ದಾನೆ.ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಗಜೀವನ್ ರಾಂ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.