ಕನ್ನಡಪ್ರಭ ವಾರ್ತೆ ಬೆಂಗಳೂರು

ಚಾರ್‌ಧಾಮ್‌ ಯಾತ್ರೆ ಹೆಸರಿನಲ್ಲಿ 26 ಮಂದಿಗೆ 14.60 ಲಕ್ಷ ರು. ವಂಚಿಸಿರುವ ಆರೋಪದ ಮೇಲೆ ಸಾಯಿರಾಗ ಟೂರ್ಸ್‌ ಆ್ಯಂಡ್‌ ಟ್ರಾವೆಲ್ಸ್‌ ಮಾಲೀಕರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಬನಶಂಕರಿ ನಿವಾಸಿ ಸುಬ್ಬಕೃಷ್ಣ ಎಂಬುವರು ನೀಡಿದ ದೂರಿನನ್ವಯ ನಂದಿನಿ ಲೇಔಟ್‌ನಲ್ಲಿರುವ ಸಾಯಿರಾಗ ಟೂರ್ಸ್‌ ಆ್ಯಂಡ್‌ ಟ್ರಾವೆಲ್ಸ್‌ನ ಮಾಲೀಕ ಅನಂತ ಪದ್ಮನಾಭ ಮತ್ತು ಈತನ ಪತ್ನಿ ಸೌಮ್ಯ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೂರುದಾರ ಸುಬ್ಬಕೃಷ್ಣ ಅವರು ನಿವೃತ್ತ ಸರ್ಕಾರಿ ನೌಕರರಾಗಿದ್ದು, ಕಳೆದ ಜನವರಿ ತಿಂಗಳಿನಲ್ಲಿ ನಂದಿನಿ ಲೇಔಟ್‌ನಲ್ಲಿರುವ ಸಾಯಿರಾಗ ಟೂರ್ಸ್‌ ಆ್ಯಂಡ್‌ ಟ್ರಾವೆಲ್ಸ್‌ ಜಾಹಿರಾತು ನೀಡಿ ಒಬ್ಬ ಯಾತ್ರಿಗೆ 57,750 ರು. ಪ್ಯಾಕೇಜ್‌ನಲ್ಲಿ ಚಾರ್‌ಧಾಮ್‌ (ಕೇದಾರ, ಬದರಿ, ಗಂಗೋತ್ರಿ, ಯಮುನೋತ್ರಿ) ಯಾತ್ರೆಯನ್ನು ಕರೆದೊಯ್ಯಲಾಗುವುದು ಎಂದು ತಿಳಿಸಿದ್ದರು.

ಹೀಗಾಗಿ ದೂರುದಾರರು ಆ ಟ್ರಾವೆಲ್ಸ್‌ ಅವರನ್ನು ಸಂಪರ್ಕಿಸಿ ಆರು ಮಂದಿಯ ಕುಟುಂಬ ಸದಸ್ಯರ ಹಣವನ್ನು ಆನ್‌ಲೈನ್‌ ಮೂಲಕ ಒಟ್ಟು 3.45 ಲಕ್ಷ ರು. ಪಾವತಿಸಿದ್ದರು. ಆದರೆ ಮೇ 2ರಂದು ದೂರುದಾರರು ಕರೆ ಮಾಡಿ ಯಾತ್ರೆ ವಿಚಾರಿಸಿದ್ದಾಗ ಟ್ರಾವೆಲ್ಸ್‌ನವರು ಸದ್ಯಕ್ಕೆ ನಮ್ಮಲ್ಲಿ ಯಾವುದೇ ವ್ಯವಸ್ಥೆ ಆಗಿರುವುದಿಲ್ಲ. ನೀವು ಎಲ್ಲರೂ ದೆಹಲಿವರೆಗೆ ಹೋಗಿ ಅಲ್ಲಿಂದ ನಾವು ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ. ಈಗ ದೂರುದಾರರು ನಮ್ಮ ಹಣ ವಾಪಸ್‌ ನೀಡುವಂತೆ ಕೇಳಿದ್ದಾಗ ಬೆದರಿಕೆ ಹಾಕಿದ್ದಾರೆ. ಒಟ್ಟು 26 ಮಂದಿ ಯಾತ್ರಿಗಳಿಂದ 14.60 ಲಕ್ಷ ರು. ಪಡೆದು ಯಾವುದೇ ಯಾತ್ರೆಗೆ ಕರೆದುಕೊಂಡು ಹೋಗದೆ ವಂಚಿಸಿರುವ ಸಾಯಿರಾಗ ಟೂರ್ಸ್‌ ಆ್ಯಂಡ್‌ ಟ್ರಾವೆಲ್ಸ್‌ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸುಬ್ಬಕೃಷ್ಣ ದೂರಿನಲ್ಲಿ ಮನವಿ ಮಾಡಿದ್ದಾರೆ.