ಕನ್ನಡಪ್ರಭ ವಾರ್ತೆ ಮಡಿಕೇರಿ
ಅನಿಯಮಿತವಾಗಿ 2-3 ದಿನ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳುತ್ತಿರುವ ಬಗ್ಗೆ ದಕ್ಷಿಣ ಕೊಡಗಿನ ಕಿರುಗೂರು ಗ್ರಾ.ಪಂ ವ್ಯಾಪ್ತಿಯ ಕಿರುಗೂರು, ಮತ್ತೂರು ಮತ್ತು ಕೋಟೂರು ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಈ ಕುರಿತು ಪ್ರತಿಕ್ರಿಯಿಸಿರುವ ಕಿರುಗೂರು ಗ್ರಾ.ಪಂ ಅಧ್ಯಕ್ಷ ಚೆಪ್ಪುಡಿರ ರಾಕೇಶ್ ದೇವಯ್ಯ, ವಿದ್ಯುತ್ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗಾಳಿ, ಮಳೆ, ಸಿಡಿಲು ಇಲ್ಲದಿದ್ದರೂ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ಗ್ರಾಮಗಳು ನಿರಂತರವಾಗಿ ಕತ್ತಲೆಯಲ್ಲಿ ಮುಳುಗುತ್ತಿವೆ. ಇದರಿಂದಾಗಿ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅಡಚಣೆ ಉಂಟಾಗಿದೆ. ಚೆಸ್ಕಾಂಗೆ ದೂರು ನೀಡಿದರೂ ಅಧಿಕಾರಿಗಳು ಸಮಸ್ಯೆ ಗಂಭೀರವಾಗಿ ಪರಿಗಣಿಸುತ್ತಿಲ್ಲ. ತುರ್ತು ಸಹಾಯವಾಣಿಗೆ ಕರೆ ಮಾಡಿದರೆ ಯಾರೂ ಕರೆ ಸ್ವೀಕರಿಸುತ್ತಿಲ್ಲ, ಒಂದು ವೇಳೆ ದೂರು ದಾಖಲಿಸಿಕೊಂಡರೂ ಯಾವುದೇ ಸ್ಪಂದನೆ ದೊರೆಯುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಚೆಸ್ಕಾಂ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸುತ್ತಿಲ್ಲವೆಂದು ಗ್ರಾಮಸ್ಥರು ಗ್ರಾ.ಪಂ ಗೆ ದೂರು ನೀಡುತ್ತಿದ್ದಾರೆ. ವಿದ್ಯುತ್ ವ್ಯತ್ಯಯದ ಕುರಿತು ಅಧಿಕಾರಿಗಳ ಬಳಿ ಕೇಳಿದರೆ ಸಿಬ್ಬಂದಿ ಕೊರತೆ ಇದೆ ಎಂದು ಕಾರಣ ನೀಡುತ್ತಿದ್ದಾರೆ. ಜಿಲ್ಲಾಡಳಿತ ಈ ಹಿಂದೆ ಮಳೆಗಾಲದಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಅಗತ್ಯ ಕ್ರಮ ಕೈಗೊಂಡಿರುವುದಾಗಿ ಭರವಸೆ ನೀಡಿತ್ತು. ಆದರೆ ಚೆಸ್ಕಾಂನಲ್ಲಿ ಶೇ.70 ರಷ್ಟು ಸಿಬ್ಬಂದಿ ಕೊರತೆ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅನೇಕ ಸಿಬ್ಬಂದಿ ವರ್ಗಾವಣೆ ಪಡೆದು ಕೊಡಗು ಜಿಲ್ಲೆಯಿಂದ ತೆರಳಿದ್ದಾರೆ. ಇದರಿಂದಾಗಿ ಹಾನಿಗೊಳಗಾದ ವಿದ್ಯುತ್ ಮಾರ್ಗಗಳ ದುರಸ್ತಿ ಕಾರ್ಯ ಶೀಘ್ರ ಪೂರ್ಣಗೊಳ್ಳುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಕಿರುಗೂರು, ಮತ್ತೂರು ಮತ್ತು ಕೋಟೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳು ವಿದ್ಯುತ್ ಕೊರತೆಯಿಂದ ಕತ್ತಲೆಯಲ್ಲೇ ಕಾಲ ಕಳೆಯಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿರುವ ರಾಕೇಶ್ ದೇವಯ್ಯ, ಸರ್ಕಾರ ಮಲೆನಾಡು ಜಿಲ್ಲೆ ಕೊಡಗಿಗೆ ಹೆಚ್ಚುವರಿ ಚೆಸ್ಕಾಂ ಸಿಬ್ಬಂದಿ ನೇಮಕ ಮಾಡಬೇಕೆಂದು ಆಗ್ರಹಿಸಿದ್ದಾರೆ.ವಿದ್ಯುತ್ ಸಮಸ್ಯೆಯನ್ನು ಶೀಘ್ರ ಬಗೆಹರಿಸದಿದ್ದಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಚೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.