ಉತ್ತಮ ಮಳೆಯಿಂದ ವಿದ್ಯುತ್‌ ಸಮಸ್ಯೆ ಅಷ್ಟಾಗಿಲ್ಲ

KannadaprabhaNewsNetwork |  
Published : Jul 04, 2025, 11:46 PM IST
4ಎಚ್ಎಸ್ಎನ್9 :  | Kannada Prabha

ಸಾರಾಂಶ

ರಾಜ್ಯದ ಎಲ್ಲಾ ಕಡೆ ಉತ್ತಮವಾಗಿ ಮಳೆ ಆಗುತ್ತಿರುವುದರಿಂದ ವಿದ್ಯುತ್ ಸಮಸ್ಯೆ ಅಷ್ಟಾಗಿ ಇಲ್ಲ. ರಾಜ್ಯದಲ್ಲಿ 2500 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆಗೆ ಟೆಂಡರ್‌ ಆಹ್ವಾನಿಸಿದ್ದು, 10 ಸಾವಿರ ಕೋಟಿ ರು. ಹೂಡಿಕೆಗೆ ಖಾಸಗಿ ಕಂಪೆನಿಗಳು ಮುಂದೆ ಬಂದಿವೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದರು. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ೨೫೦೦ ಮೆಗಾವ್ಯಾಟ್‌ ವಿದ್ಯುತ್ ಉತ್ಪಾದನೆ ಮಾಡಲು ಖಾಸಗಿಯವರು ಬಂಡವಾಳ ಹೂಡುತ್ತಿದ್ದು, ನಾವು ಅವರಿಂದ ವಿದ್ಯುತ್ ಖರೀದಿ ಮಾಡಿ, ರೈತರು ಸೇರಿ ಎಲ್ಲರಿಗೂ ಪೂರೈಕೆ ಮಾಡುತ್ತೇವೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ರಾಜ್ಯದ ಎಲ್ಲಾ ಕಡೆ ಉತ್ತಮವಾಗಿ ಮಳೆ ಆಗುತ್ತಿರುವುದರಿಂದ ವಿದ್ಯುತ್ ಸಮಸ್ಯೆ ಅಷ್ಟಾಗಿ ಇಲ್ಲ. ರಾಜ್ಯದಲ್ಲಿ 2500 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆಗೆ ಟೆಂಡರ್‌ ಆಹ್ವಾನಿಸಿದ್ದು, 10 ಸಾವಿರ ಕೋಟಿ ರು. ಹೂಡಿಕೆಗೆ ಖಾಸಗಿ ಕಂಪೆನಿಗಳು ಮುಂದೆ ಬಂದಿವೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದರು.

ಜಿಲ್ಲಾ ಪಂಚಾಯ್ತಿ ಹೊಯ್ಸಳ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರು ಹಗಲು ವೇಳೆ ೭ ಗಂಟೆ ಕಾಲ ಮೂರು ಫೇಸ್‌ ಕರೆಂಟ್ ಕೊಡಿ ಎಂಬ ಬೇಡಿಕೆ ಇಟ್ಟಿದ್ದಾರೆ. ಅವರ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ೨೫೦೦ ಮೆಗಾವ್ಯಾಟ್‌ ವಿದ್ಯುತ್ ಉತ್ಪಾದನೆ ಮಾಡಲು ಖಾಸಗಿಯವರು ಬಂಡವಾಳ ಹೂಡುತ್ತಿದ್ದು, ನಾವು ಅವರಿಂದ ವಿದ್ಯುತ್ ಖರೀದಿ ಮಾಡಿ, ರೈತರು ಸೇರಿ ಎಲ್ಲರಿಗೂ ಪೂರೈಕೆ ಮಾಡುತ್ತೇವೆ ಎಂದರು.

ರಾಜ್ಯದ ವಿವಿಧೆಡೆ ಹೊಸದಾಗಿ ೪೦೦ ಸಬ್ ಸ್ಟೇಷನ್ ಸ್ಥಾಪಿಸಲು ಟೆಂಡರ್ ಆಹ್ವಾನಿಸಲಾಗುತ್ತಿದೆ ಎಂದರು.

ನಂತರ ಮಾತನಾಡಿದ ಅರಕಲಗೂಡು ಶಾಸಕ ಎ.ಮಂಜು, ಚೆಸ್ಕಾಂ ಅಧಿಕಾರಿಗಳು ಕರೆ ಮಾಡಿದರೆ ಫೋನ್ ರಿಸೀವ್ ಮಾಡುವುದಿಲ್ಲ ಎಂದು ದೂರಿದರು. ತಮ್ಮ ಕ್ಷೇತ್ರದಲ್ಲೂ ಕರೆಂಟ್ ಸಮಸ್ಯೆ ಇರುವುದನ್ನು ಶಾಸಕರು ಇಂಧನ ಸಚಿವರ ಮುಂದೆ ತೆರೆದಿಟ್ಟರು. ೧೦೦ ಪರ್ಸೆಂಟ್ ಅಲ್ಲದಿದ್ದರೂ, ಅಗತ್ಯ ಕರೆಂಟ್ ಕೊಡುವಂತೆ ಮನವಿ ಮಾಡಿದರು. ಪ್ರಗತಿ ಪರಿಶೀಲನಾ ಸಭೆಯಲ್ಲಿ ತಮ್ಮ ತಮ್ಮ ಕ್ಷೇತ್ರಗಳ ವಿದ್ಯುತ್ ಸಮಸ್ಯೆ, ಸಬ್ ಸ್ಟೇಷನ್ ಬೇಡಿಕೆ, ಕೆಲವು ಅಧಿಕಾರಿಗಳ ಅಸಹಕಾರ ಹಾಗೂ ನಿರ್ಲಕ್ಷ್ಯದ ಬಗ್ಗೆ ಜಿಲ್ಲೆಯ ಎಲ್ಲ ಶಾಸಕರು ಸೇರಿ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು. ಶ್ರವಣಬೆಳಗೊಳ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ತಮ್ಮ ಕ್ಷೇತ್ರಕ್ಕೆ ಈಗಾಗಲೇ ಮಂಜೂರಾಗಿರುವ ಸಬ್ ಸ್ಟೇಷನ್ ಕಾಮಗಾರಿ ಬೇಗ ಮುಗಿಸಿಕೊಡಬೇಕು. ಹೇಮಾವತಿ ಸಕ್ಕರೆ ಕಾರ್ಖಾನೆ ಬಳಿ ಹೊಸ ಸಬ್ ಸ್ಟೇಷನ್ ಆರಂಭಿಸಬೇಕು. ಇದಕ್ಕಾಗಿ ಆದೇಶ ಮಾಡಿ ಎಂದು ಸಚಿವರಲ್ಲಿ ಮನವಿ ಮಾಡಿದರು. ಬೇಲೂರು ಶಾಸಕ ಹುಲ್ಲಹಳ್ಳಿ ಸುರೇಶ್ ಮಾತನಾಡಿ, ಸಮಸ್ಯೆ ಇರುವುದನ್ನು ಬಗೆಹರಿಸಿ, ಸಬ್‌ಸ್ಟೇಷನ್ ಬೇಡಿಕೆ ಮಂಡಿಸಿ, ನಮ್ಮ ಭಾಗದಲ್ಲಿ ಕಾಡಾನೆ ಸಮಸ್ಯೆಯಿದ್ದು, ಸರಿಯಾಗಿ ವಿದ್ಯುತ್ ಪೂರೈಕೆ ಮಾಡುವಂತೆ ವಿನಂತಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಚೆಸ್ಕಾಂ ಅಧಿಕಾರಿಗಳು, ಹನಿಕೆ ಕೇಂದ್ರದ ಕಾಮಗಾರಿಗೆ ಶೀಘ್ರ ಟೆಂಡರ್ ಕರೆಯಲಾಗುವುದು. ಬಿಕ್ಕೋಡು ಸ್ಥಳದ ವಿವಾದ ಕೋರ್ಟ್‌ನಲ್ಲಿದೆ. ಸ್ಟೇ ಇರುವುದನ್ನು ತೆರವು ಮಾಡಿಸಿ ಎಂದರೆ, ಇದಕ್ಕೆ ದನಿಗೂಡಿಸಿದ ಸಚಿವರು, ನಿಮ್ಮಲ್ಲಿ ಕೆಲಸ ಮಾಡೋ ಆಸಕ್ತಿ ಇಲ್ಲ ಎಂದು ಸಿಟ್ಟಾದರು. ಆಲೂರು-ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಮಾತನಾಡಿ, ಎರಡು ಸಬ್ ಸ್ಟೇಷನ್ ಕೆಲಸ ಬೇಗ ಮುಗಿಸಿಕೊಡಿ. ಟಿಸಿ ಸಮಸ್ಯೆ ಬಗೆಹರಿಸಿ, ಎರಡು ತಾಲೂಕುಗಳ ೩೩೦ ಮನೆಗಳಿಗೆ ಕರೆಂಟೇ ಇಲ್ಲ. ಹೇಗಾದರೂ ಬೆಳಕು ಕೊಡಿಸಿ ಎಂದು ಮನವಿ ಮಾಡಿದರು. ಹಾಸನ ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಮಾತನಾಡಿ, ಹಿಂದೆಯೇ ನಮ್ಮ ಕ್ಷೇತ್ರಕ್ಕೆ ೩ ವಿದ್ಯುತ್ ಉಪಕೇಂದ್ರಗಳು ಮಂಜೂರಾಗಿದ್ದವು. ಆದರೆ ಅವು ಇನ್ನೂ ಕಾರ್ಯಗತ ಆಗಿಲ್ಲ. ಇದೀಗ ಹಾಸನ ಮಹಾನನಗರ ಪಾಲಿಗೆ ಆಗಿದೆ. ಬಡಾವಣೆಗಳು ಬೆಳೆಯುತ್ತಿವೆ. ಹಾಗಾಗಿ ಸಾಲಗಾಮೆ, ನಿಟ್ಟೂರು, ಅಗಿಲೆ ಸೇರಿದಂತೆ ನಗರದ ಬಳಿಯೂ ಹೆಚ್ಚುವರಿ ಸಬ್ ಸ್ಟೇಷನ್ ಬೇಡಿಕೆಗೆ ಸ್ಪಂದಿಸುವಂತೆ ಮನವಿ ಮಾಡಿದರು. ಎಸ್‌ಎಂಕೆ ನಗರದಲ್ಲಿ ಕಳೆದ ೭ ವರ್ಷಗಳಿಂದ ಪವರ್ ಸಮಸ್ಯೆ ಇದೆ. ಈ ಬಗ್ಗೆ ಹಲವು ಬಾರಿ ಗಮನ ಸೆಳೆದಿದ್ದರೂ ಬಗೆಹರಿದಿಲ್ಲ ಎಂದು ಶಾಸಕರು ದೂರಿದರು. ಇದಕ್ಕೆ ೬೬ ಕೆವಿ ಸಾಮರ್ಥ್ಯದ ತಾತ್ಕಾಲಿಕ ಲೈನ್ ಇದೆ ಎಂದು ಅಧಿಕಾರಿಗಳು ಉತ್ತರಿಸಿದಾಗ, ಶಾಶ್ವತ ಸಂಪರ್ಕ ಕಲ್ಪಿಸಿ ಎಂದು ಸಚಿವರು ಗರಂ ಆದರು. ಇದೇ ವೇಳೆ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಕರೆಂಟ್ ಶಾಕ್‌ನಿಂದ ಇಬ್ಬರು ಮೃತಪಟ್ಟಿದ್ದರೂ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿಲ್ಲ ಎಂದು ಬೇಸರ ಹೊರಹಾಕಿದರು. ಸಾವಿಗೆ ಯಾರು ಕಾರಣ. ದುರಂತ ಆಗುವ ಮುನ್ನ ಏಕೆ ರಿಪೇರಿ ಮಾಡಲಿಲ್ಲ ಎಂದು ಸಚಿವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

೩ ಸಾವಿರ ಲೈನ್‌ಮನ್‌ಗಳ ನೇಮಕಾತಿ:

ಇಂಧನ ಇಲಾಖೆಯಲ್ಲಿ ಎಲ್ಲ ಕೆಲಸಗಳು ಸಮರ್ಪಕವಾಗಿ ನಡೆಯುತ್ತಿವೆ. ಯಾವುದೇ ಆರ್ಥಿಕ ಸಮಸ್ಯೆ ಇಲ್ಲ. ಕಳೆದ ವರ್ಷ ೧೫೦೦ ಎಂಜಿನಿಯರ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ವರ್ಷ ೩ ಸಾವಿರ ಲೈನ್‌ಮನ್‌ಗಳ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಕೆಲವು ರೈತರು ಟ್ರಾನ್ಸ್‌ಫಾರ್ಮರ್‌ಗೆ ಹಣ ಕಟ್ಟಿ ಅರ್ಜಿ ಹಾಕಿದ್ದರೂ, ಸಕಾಲಕ್ಕೆ ನೀಡುತ್ತಿಲ್ಲ ಎಂಬ ಆರೋಪದ ಬಗ್ಗೆ ಕರೆಂಟೇ ಇಲ್ಲದೇ ಇದ್ದರೆ ಟಿಸಿ ನೀಡಿದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು. ನಮ್ಮ ಅಧಿಕಾರಿಗಳು ಎಲ್ಲಿಗೆ ಎಷ್ಟು ಟಿಸಿ ಬೇಕು ಎಂಬುದನ್ನು ಪರಿಶೀಲಿಸಿ ನಂತರ ಹಂಚಿಕೆ ಮಾಡಲಿದ್ದಾರೆ. ೨೦೦೪ರಿಂದ ಅಕ್ರಮ ಸಕ್ರಮ ಇತ್ತು. ಕೆಲ ರೈತರು ೧೦ ಇಲ್ಲವೇ ೨೫ ಸಾವಿರ ಕಟ್ಟಿದರು. ಈ ಹಣದಲ್ಲಿ ಅಕ್ರಮ ಸಕ್ರಮ ಮಾಡುವುದಕ್ಕೆ ಆಗುವುದಿಲ್ಲ. ನಾಲ್ಕುವರೆ ಲಕ್ಷದ ಪಂಪ್‌ಸೆಟ್‌ಗೆ ಸಕ್ರಮ ಮಾಡಿ ನಾವೆ ಹಣ ಕಟ್ಟಲು ಯೋಚಿಸಲಾಗಿದೆ. ರೈತರೂ ಸಹ ಅಕ್ರಮ-ಸಕ್ರಮ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಸರಿಯಾಗಿ ಹಣ ಕಟ್ಟುತ್ತಿಲ್ಲ. ಸರ್ಕಾರವೇ ಕೆಲ ದಿನಗಳ ಹಿಂದೆ ನಾಲ್ಕೂವರೆ ಲಕ್ಷ ಪಂಪ್‌ಸೆಟ್‌ಗಳನ್ನು ಸಕ್ರಮ ಮಾಡಿದೆ ಎಂದರು. ನಮ್ಮ ಸರ್ಕಾರ ರೈತರಿಗೆ ೧೯ ಸಾವಿರ ಕೋಟಿ ಸಬ್ಸಿಡಿ ನೀಡುತ್ತಿದೆ. ಕಾಫಿ ಬೆಳೆಗಾರರು ಬಾಕಿ ಉಳಿಸಿಕೊಂಡಿದ್ದಾರೆ. ಅವರು ಬಡ್ಡಿ ಸಮೇತ ಕ್ಲಿಯರ್‌ ಮಾಡಿದರೆ ಅವರಿಗೂ ಬೇಕಾದ ವಿದ್ಯುತ್ ಸೌಲಭ್ಯ ಸಿಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮಲೆನಾಡು ಭಾಗದಲ್ಲಿ ವಿದ್ಯುತ್‌ ತಂತಿ ತಗುಲಿ ಕಾಡಾನೆಗಳು ಸಾವಿಗೀಡಾಗುತ್ತಿರುವ ಬಗ್ಗೆ, ಎಲ್ಲೆಲ್ಲಿ ವಿದ್ಯುತ್ ತಂತಿಗಳು ಜೋತು ಬಿದ್ದಿವೆಯೋ ಅವುಗಳನ್ನು ಕೂಡಲೇ ಸರಿಪಡಿಸಿ ವನ್ಯ ಜೀವಿಗಳಿಗೆ ತಾಗದಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.ಸಭೆಯಲ್ಲಿ ಹೊಳೆನರಸೀಪುರ ಶಾಸಕ ಎಚ್.ಡಿ. ರೇವಣ್ಣ ಗೈರಾಗಿದ್ದರು. ಸಂಸದ ಶ್ರೇಯಸ್ ಪಟೇಲ್, ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ, ಡಿಸಿ ಕೆ.ಎಸ್. ಲತಾಕುಮಾರಿ, ಎಸ್‌ಪಿ ಮಹಮದ್ ಸುಜೀತಾ, ಜಿಪಂ ಸಿಇಓ ಬಿ.ಆರ್. ಪೂರ್ಣಿಮಾ, ಗ್ಯಾರಂಟಿ ಸಮಿತಿ ಅಧ್ಯಕ್ಷ ಬನವಾಸೆ ರಂಗಸ್ವಾಮಿ ಇತರರು ಸಭೆಯಲ್ಲಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ