ಸ್ಕೂಟಿಯಲ್ಲಿ ಹೋಗುತ್ತಿದ್ದ ಕಾರ್ಮಿಕನ ಮೇಲೆ ಆನೆ ದಾಳಿ

KannadaprabhaNewsNetwork |  
Published : Sep 20, 2026, 03:45 AM IST
ದಾಳಿ!* | Kannada Prabha

ಸಾರಾಂಶ

ನೆಲ್ಯಹುದಿಕೇರಿ ವ್ಯಾಪ್ತಿಯ ಅತ್ತಿಮಂಗಲ ಬಳಿ ಹಾಡಹಗಲೇ ಒಂಟಿ ಸಲಗ ಕಾರ್ಮಿಕರ ಮೇಲೆ ದಾಳಿ ಮಾಡಿದ ಘಟನೆ ನಡೆದಿದೆ.

ಮಡಿಕೇರಿ : ನೆಲ್ಯಹುದಿಕೇರಿ ವ್ಯಾಪ್ತಿಯ ಅತ್ತಿಮಂಗಲ ಬಳಿ ಹಾಡಹಗಲೇ ಒಂಟಿ ಸಲಗ ಕಾರ್ಮಿಕರ ಮೇಲೆ ದಾಳಿ ಮಾಡಿದ ಘಟನೆ ನಡೆದಿದೆ.ಅಭ್ಯತ್ ಮಂಗಲ ನಿವಾಸಿಗಳಾದ ಸುಬ್ರಮಣಿ (57) ಮತ್ತು ಉಮೇಶ್ ಸ್ಕೂಟಿಯಲ್ಲಿ ಸಿದ್ದಾಪುರದ ಕಡೆಗೆ ಕೆಲಸಕ್ಕೆ ತೆರಳುತ್ತಿದ್ದ ವೇಳೆ ರಸ್ತೆಯಲ್ಲಿ ಎದುರಾದ ಒಂಟಿ ಸಲಗ ಏಕಾಏಕಿ ದಾಳಿ ನಡೆಸಿದೆ. ಸ್ಕೂಟಿ ಸಮೇತ ಕೆಳಗೆ ಬಿದ್ದ ಸುಬ್ರಮಣಿ ಅವರಿಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಕೂಡಲೇ ಸ್ಥಳೀಯರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಗಾಯಾಳು ಸುಬ್ರಮಣಿ ಅವರನ್ನು ಸಿದ್ದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.

ಈ ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಕಾರ್ಮಿಕ ಮುಖಂಡ ಭರತ್, ಹಾಡಹಗಲೇ ಕಾಡುಪ್ರಾಣಿಗಳು ಕೂಲಿ ಕಾರ್ಮಿಕರ ಮೇಲೆ ದಾಳಿ ಮಾಡುತ್ತಿದ್ದರೂ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ. ಕೇವಲ ಭರವಸೆ ನೀಡುತ್ತಿದೆಯೇ ಹೊರತು ಯಾವುದೂ ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ಆರೋಪಿಸಿದ್ದಾರೆ.ಈ ಭಾಗದ ಮೇರಿಲ್ಯಾಂಡ್ ಎಸ್ಟೇಟ್ ಬೇಲಿ ಸಂಪೂರ್ಣ ಅರಣ್ಯದಂತೆ ಬೆಳೆದು ನಿಂತಿದೆ. ಸ್ಥಳೀಯ ಪಂಚಾಯಿತಿ ಆಗಲಿ, ಪಿಡಬ್ಲ್ಯೂಡಿ ಇಲಾಖೆ ಆಗಲಿ ಗಮನ ಹರಿಸುತ್ತಿಲ್ಲ. ರಸ್ತೆಯ ಇಕ್ಕೆಲಗಳಲ್ಲಿ ಪೊದೆಗಳು ಬೆಳೆದಿರುವುದರಿಂದ ವಾಹನ ಸವಾರರಿಗೆ ಕಾಡುಪ್ರಾಣಿಗಳು ನಿಂತಿರುವುದು ಕಾಣುವುದೇ ಇಲ್ಲ. ಇದೇ ಅನಾಹುತಗಳಿಗೆ ಕಾರಣವಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಅರಣ್ಯ ಇಲಾಖೆ ವನ್ಯಜೀವಿ ಹಾವಳಿಯನ್ನು ಶಾಶ್ವತವಾಗಿ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು. ಇದು ಹೀಗೆ ಮುಂದುವರೆದರೆ ದೊಡ್ಡ ಮಟ್ಟದ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೂಡುಬಿದಿರೆ ಆಳ್ವಾಸ್ ಮೆಡಿಕಲ್ ಕಾಲೇಜು ನಾಳೆ ಉದ್ಘಾಟನೆ
ಡೋಂಗಿ ಪರಿಸರವಾದಿ ಹೇಳಿಕೆಗೆ ಮುತ್ತಣ ಖಂಡನೆ