ಆಹಾರ ಅರಸಿ ಕಾಡಿನಿಂದ ಬಂದಿದ್ದ ಆನೆ । ಭದ್ರಾ ಅಭಯಾರಣ್ಯದ ಆನೆ ಕೊಳಗಾವೆ ಎಸ್ಟೇಟ್‌ನಲ್ಲಿ ಬಲಿ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಆಹಾರ ಅರಸಿ ಕಾಡಿನಿಂದ ಎಸ್ಟೇಟ್ ಒಂದಕ್ಕೆ ಆಗಮಿಸಿದ್ದ ಕಾಡಾನೆ ವಿದ್ಯುತ್ ತಂತಿ ತಗುಲಿ ಮೃತಪಟ್ಟಿರುವ ಘಟನೆ ಸೋಮವಾರ ರಾತ್ರಿ ತಾಲೂಕಿನ ಕೊಳಗಾವೆ ಗ್ರಾಮದ ಆರಾಧನಾ ಎಸ್ಟೇಟ್‌ನಲ್ಲಿ ನಡೆದಿದೆ. ಸುಮಾರು 40 ವರ್ಷ ವಯಸ್ಸಿನ ಗಂಡಾನೆ ವಿದ್ಯುತ್ ಶಾಕ್‌ಗೆ ಬಲಿಯಾಗಿದೆ.
ಭದ್ರಾ ಅಭಯಾರಣ್ಯದ ಆನೆಗಳು ಆಹಾರ ಅರಸಿ ಮೇಲಿನಹುಲುವತ್ತಿ ಭಾಗದಿಂದ ಸಿರವಾಸೆವರೆಗೂ ಸಂಚಾರ ನಡೆಸುವುದು ಸಾಮಾನ್ಯ. 4 -5 ಆನೆಗಳು ಈ ಭಾಗದಲ್ಲಿ ಆಗಾಗ ಸಂಚಾರ ನಡೆಸುತ್ತಲೇ ಇರುತ್ತವೆ. ಹೀಗೆ ಸೋಮವಾರ ರಾತ್ರಿಯೂ ಆನೆ ಕಾಫಿ ಎಸ್ಟೇಟ್‌ಗೆ ಆಗಮಿಸಿ ಅಡಕೆ ಮರ ಎಳೆದಿದೆ. ಆಗ ಅಡಕೆ ಮರ ಪಕ್ಕದಲ್ಲೇ ಹಾದುಹೋಗಿದ್ದ ವಿದ್ಯುತ್ ತಂತಿಗೆ ತಾಕಿದೆ.ಭಾರಿ ಮಳೆಯಿಂದಾಗಿ ತೇವಗೊಂಡ ನೆಲದಲ್ಲಿ ವಿದ್ಯುತ್ ಕಂಬಗಳು ಸಡಿಲಗೊಂಡಿದ್ದರಿಂದ ಕಂಬಗಳು ಬಾಗಿದ ಪರಿಣಾಮ ವಿದ್ಯುತ್ ತಂತಿ ಕಾಡಾನೆಗೆ ತಾಗಿದೆ. ಆಗ ವಿದ್ಯುತ್ ಶಾಕ್‌ನಿಂದ ಆನೆ ವಿದ್ಯುತ್ ತಂತಿ ಮೇಲೆಯೇ ಬಿದ್ದಿದ್ದರಿಂದ ಸ್ಥಳದಲ್ಲಿಯೇ ಧಾರುಣವಾಗಿ ಮೃತಪಟ್ಟಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಆನೆಯ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.ಹಲವು ವರ್ಷಗಳಿಂದಲೂ ಮೃತ ಆನೆ ಇದೇ ಭಾಗದಲ್ಲಿ ಸಂಚಾರ ನಡೆಸುತ್ತಿತ್ತಾದರೂ ಇದುವರೆಗೆ ಯಾರೊಬ್ಬರಿಗೂ ಸಮಸ್ಯೆ ಮಾಡಿರಲಿಲ್ಲ. ಹೀಗಾಗಿ ಈ ಆನೆ ಬಗ್ಗೆ ಸ್ಥಳೀಯರೂ ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ತನ್ನಷ್ಟಕ್ಕೆ ತಾನು ಸಂಚಾರ ನಡೆಸಿ ಆಹಾರ ತಿಂದು ಹೋಗುತ್ತಿತ್ತೇ ಹೊರತು ಆಸ್ತಿಪಾಸ್ತಿ ಹಾನಿಯುಂಟು ಮಾಡುತ್ತಿರಲಿಲ್ಲ. ಜೊತೆಗೆ ಯಾರ ಮೇಲೆಯೂ ದಾಳಿಗೆ ಮುಂದಾದ ಉದಾಹರಣೆ ಇರಲಿಲ್ಲ. ಸಾಧು ಸ್ವಭಾವದ ಆನೆ ಇದಾಗಿತ್ತು. ಆದರೆ ದುರಾದೃಷ್ಟವಶಾತ್ ಆನೆ ವಿದ್ಯುತ್ ಶಾಕ್‌ನಿಂದ ಮೃತಪಟ್ಟಿರುವುದು ನೋವನ್ನುಂಟು ಮಾಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಚಿಕ್ಕಮಗಳೂರು-ಕೊಳಗಾವೆ ಮಾರ್ಗದ ಎಡಭಾಗದಲ್ಲಿ ಭದ್ರಾ ಅಭಯಾರಣ್ಯದ ಪ್ರದೇಶವಿದ್ದರೆ ಬಲಭಾಗದಲ್ಲಿ ಕಾಫಿ ತೋಟಗಳಿವೆ. ಹೀಗಾಗಿ ಆನೆಗಳು ಭದ್ರಾ ಅಭಯಾರಣ್ಯದಿಂದ ಕಾಫಿ ತೋಟಗಳತ್ತ ಆಗಮಿಸುತ್ತವೆ. ಹೀಗೆ ಭದ್ರಾ ಅಭಯಾರಣ್ಯದಿಂದ ಆನೆಗಳು ಕಾಫಿ ತೋಟಗಳಿಗೆ ಆಗಮಿಸಿದ್ದರೂ ಈವರೆಗೆ ಅಷ್ಟಾಗಿ ದೊಡ್ಡ ಪ್ರಮಾಣದ ಹಾನಿ ಸಂಭವಿ ಸಿದ ಉದಾಹರಣೆಗಳಿಲ್ಲ. ಇದೇ ಕಾರಣಕ್ಕೆ ಈ ಭಾಗದ ಜನರೂ ಆನೆಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಬಂದ ಮಾರ್ಗ ದಲ್ಲೇ ಆನೆಗಳು ಮರಳಿ ಅಭಯಾರಣ್ಯಕ್ಕೆ ತೆರಳುತ್ತಿದ್ದರಿಂದ ಆನೆ ಹಾವಳಿಯೂ ಅಷ್ಟಾಗಿರಲಿಲ್ಲ. ಆದರೆ ಆನೆ ವಿದ್ಯುತ್ ಶಾಕ್‌ಗೆ ಬಲಿಯಾಗಿರುವುದು ಸಾರ್ವಜನಿಕರ ನೋವಿಗೆ ಕಾರಣವಾಗಿದೆ.--- ಬಾಕ್ಸ್--
ವಿದ್ಯುತ್ ತಂತಿ ತಗುಲಿದ ಪರಿಣಾಮ ಕೊಳಗಾವೆ ಸಮೀಪದ ಆರಾಧನಾ ಎಸ್ಟೇಟ್ ವ್ಯಾಪ್ತಿಯಲ್ಲಿ ಕಾಡಾನೆ ಮೃತಪಟ್ಟಿದೆ. ಮೃತ ಆನೆಗೆ 40 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ. ಭದ್ರಾ ಅಭಯಾರಣ್ಯದ ವ್ಯಾಪ್ತಿಯಿಂದ ನಾಲ್ಕೈದು ಆನೆಗಳು ಈ ಭಾಗಕ್ಕೆ ಆಗಾಗ್ಗೆ ಆಗಮಿಸುತ್ತವೆ. ಹೀಗೆಯೇ ಈ ಆನೆಯೂ ಬಂದಿದ್ದು ಅಡಕೆ ಮರ ತಳ್ಳಿದಾಗ ಅದು ವಿದ್ಯುತ್ ತಂತಿಗೆ ತಗುಲಿ ಅವಘಡ ಸಂಭವಿಸಿದೆ.- ರಮೇಶ್‌ಬಾಬು
ಡಿಎಫ್‌ಒ ಚಿಕ್ಕಮಗಳೂರು 27 ಕೆಸಿಕೆಎಂ 5---
27 ಕೆಸಿಕೆಎಂ 6ಚಿಕ್ಕಮಗಳೂರು ತಾಲೂಕು ಕೊಳಗಾವೆ ಸಮೀಪ ವಿದ್ಯುತ್ ಶಾಕ್‌ನಿಂದ ಮೃತಪಟ್ಟ 40 ವರ್ಷ ವಯಸ್ಸಿನ ಕಾಡಾನೆ.