ಕನ್ನಡಪ್ರಭವಾರ್ತೆ ಕುಶಾಲನಗರ(ಕೊಡಗು)
ದುಬಾರೆಯ ಶಿಬಿರದ ಸಮೀಪ ಕಾವೇರಿ ನದಿಯಲ್ಲಿ ನಡೆದ ಕಾಳಗದಿಂದ ಮಾರ್ತಾಂಡ ಆನೆಯ ಹೊಟ್ಟೆ ಮತ್ತು ತಲೆ ಭಾಗಗಳಿಗೆ ತೀವ್ರವಾಗಿ ಗಾಯವಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಆನೆ ಮೃತಪಟ್ಟಿರುವುದಾಗಿ ಶಿಬಿರದ ಅಧಿಕಾರಿಗಳು ತಿಳಿಸಿದ್ದಾರೆ. ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಶಿಬಿರಕ್ಕೆ ಭೇಟಿ ನೀಡಿ ಮಹಜರು ನಡೆಸಿದರು. ಪಶು ವೈದ್ಯಾಧಿಕಾರಿ ಡಾ.ಮುಜೀಬ್ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ದುಬಾರೆಯಲ್ಲೇ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಆನೆಗೆ ಮಾವುತ, ಕಾವಾಡಿಗರು ಸೇರಿದಂತೆ ಅಪಾರ ಪ್ರೇಮಿಗಳು ಕಣ್ಣೀರ ವಿದಾಯ ನೀಡಿದರು.
43 ವರ್ಷದ 4500 ಕೆ.ಜಿ. ತೂಕವಿದ್ದ ಮಾರ್ತಾಂಡ ಆನೆಯನ್ನು 2022ರಲ್ಲಿ ಹಾಸನದ ಸಲಕೇಶಪುರದಲ್ಲಿ ಸೆರೆ ಹಿಡಿದು ರೇಡಿಯೋ ಕಾಲರ್ ಹಾಕಿ ಮಲೆಮಹದೇಶ್ವರ ಬೆಟ್ಟಕ್ಕೆ ಬಿಡಲಾಗಿತ್ತು. ಇದಾದ ಬಳಿಕ 45 ದಿನದಲ್ಲಿ ಮತ್ತೆ ಸಕಲೇಶಪುರ ಭಾಗಕ್ಕೆ ಬಂದು ಸೇರಿಕೊಂಡಿತು. ನಂತರ ಸಾಕಾನೆಗಳ ಸಹಕಾರ ಮೂಲಕ ಸೆರೆ ಹಿಡಿದು ಅದನ್ನು ದುಬಾರೆಯಲ್ಲಿ ಪಳಗಿಸಲಾಗಿತ್ತು. ದುಬಾರೆಯಲ್ಲಿ ಯಾವುದೇ ತೊಂದರೆ ಕೊಡದೆ ಎಲ್ಲರಿಗೂ ಈ ಆನೆ ಅಚ್ಚುಮೆಚ್ಚಾಗಿತ್ತು. ಸೋಮವಾರಪೇಟೆ ಸಮೀಪದ ಕಾಜೂರು ಕರ್ಣ ಎಂಬ ಆನೆಯನ್ನು ಸೆರೆ ಹಿಡಿಯುವಲ್ಲಿ ಮಾರ್ತಾಂಡ ಆನೆ ಪ್ರಮುಖ ಪಾತ್ರ ವಹಿಸಿತ್ತು. ಇದಲ್ಲದೆ ಹೊರ ಜಿಲ್ಲೆಗಳಲ್ಲಿನ ಆನೆ ಸೆರೆ ಕಾರ್ಯಾಚರಣೆಯಲ್ಲೂ ಕೂಡ ಪಾಲ್ಗೊಂಡಿತ್ತು.ಇನ್ಮುಂದೆ ದಸರಾದಲ್ಲಿ ಕಂಜನ್ ಆನೆ ಬಳಕೆ ಇಲ್ಲ:ಐತಿಹಾಸಿಕ ಮೈಸೂರು ದಸರಾ ಮೆರವಣಿಗೆಯಲ್ಲಿ 3 ಬಾರಿ ಪಾಲ್ಗೊಂಡಿದ್ದ ಕಂಜನ್ ಆನೆಯನ್ನು ಮುಂದಿನ ವರ್ಷದಿಂದ ದಸರಾ ಮಹೋತ್ಸವಕ್ಕೆ ಬಳಸದಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.