ಪ್ರವಾಸಿ ಮಂದಿರದಲ್ಲಿ ಸಿಲುಕಿದ್ದ ಆನೆ ಕಾರ್ಯಾಚರಣೆ ಸಿಬ್ಬಂದಿ: ಸ್ಥಳೀಯರಿಂದ ರಕ್ಷಣೆ

KannadaprabhaNewsNetwork | Published : Jul 29, 2024 12:49 AM

ಸಾರಾಂಶ

ನರಸಿಂಹರಾಜಪುರ, ಅಧಿಕ ಮಳೆಯಿಂದ ದ್ವೀಪದಂತಾದ ಮುತ್ತಿನಕೊಪ್ಪ ಪ್ರವಾಸಿ ಮಂದಿರದಲ್ಲಿ ತಂಗಿದ್ದ ಆನೆ ಕಾರ್ಯಾಚರಣೆ ಪಡೆಯ ಸಿಬ್ಬಂದಿ ಜಲದಿಗ್ಬಂಧನಕ್ಕೆ ಒಳಗಾಗಿದ್ದು ನಂತರ ಸ್ಥಳೀಯರು ಅವರನ್ನು ರಕ್ಷಿಸಿದ ಘಟನೆ ನಡೆದಿದೆ.

ಶುಕ್ರವಾರ ರಾತ್ರಿ ಅಧಿಕ ಮಳೆಯಿಂದಾಗಿ ಜಲದಿಗ್ಬಂಧನ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಅಧಿಕ ಮಳೆಯಿಂದ ದ್ವೀಪದಂತಾದ ಮುತ್ತಿನಕೊಪ್ಪ ಪ್ರವಾಸಿ ಮಂದಿರದಲ್ಲಿ ತಂಗಿದ್ದ ಆನೆ ಕಾರ್ಯಾಚರಣೆ ಪಡೆಯ ಸಿಬ್ಬಂದಿ ಜಲದಿಗ್ಬಂಧನಕ್ಕೆ ಒಳಗಾಗಿದ್ದು ನಂತರ ಸ್ಥಳೀಯರು ಅವರನ್ನು ರಕ್ಷಿಸಿದ ಘಟನೆ ನಡೆದಿದೆ.

ಶುಕ್ರವಾರ ರಾತ್ರಿ ಅಧಿಕ ಮಳೆಯಿಂದಾಗಿ ತಾಲೂಕಿನ ಮುತ್ತಿನಕೊಪ್ಪದ ಪ್ರವಾಸಿ ಮಂದಿರ ಸುತ್ತಲೂ ಜಲಾವೃತ ಗೊಂಡು ಪ್ರವಾಸಿ ಮಂದಿರದಲ್ಲಿ ತಂಗಿದ್ದ ಆನೆ ಕಾರ್ಯಾಚರಣೆ ಪಡೆ ಟಾಸ್ಕ್ ಫೋರ್ಸ್ ಸಿಬ್ಬಂದಿ ಪ್ರವಾಸಿ ಮಂದಿರದಿಂದ ಹೊರಬರಲಾರದೆ ಜಲದಿಗ್ಬಂಧನಕ್ಕೆ ಒಳಗಾಗಿದ್ದರು. ಶನಿವಾರ ಬೆಳಿಗ್ಗೆ ಸ್ಥಳೀಯರಾದ ಸತೀಶ್ ಎಂಬುವವರು ತೋಟದ ಕಡೆ ಹೋಗಿದ್ದು ಪ್ರವಾಸಿ ಮಂದಿರದ 1 ಕಿ.ಮೀ ಸುತ್ತಳತೆಯಲ್ಲಿ ಅಡಕೆ ತೋಟಗಳೆಲ್ಲಾ ಜಲಾವೃತಗೊಂಡಿರುವುದನ್ನು ಕಂಡಿದ್ದಾರೆ.

ನಂತರ ಅಲ್ಲಿಯೇ ಆನೆ ಕಾರ್ಯಾಚರಣೆ ಪಡೆ ನಾಲ್ಕು ಸಿಬ್ಬಂದಿ ತೋಟದ ಬಳಿ ಇರುವುದನ್ನು ಕಂಡು ವಿಚಾರಿಸಿದ್ದಾರೆ. ಆಗ ಆ ಸಿಬ್ಬಂದಿ ಶುಕ್ರವಾರ ರಾತ್ರಿ ಅಧಿಕ ಮಳೆಯಿಂದ ನಾವು ತಂಗಿದ್ದ ಪ್ರವಾಸಿ ಮಂದಿರ ದ್ವೀಪದಂತಾಗಿದ್ದರಿಂದ ನಾವು ನಾಲ್ಕು ಜನರು ಮಾತ್ರ ಎದೆ ಮಟ್ಟಿಗೆ ಇದ್ದ ನೀರಿನಲ್ಲಿ ಈಚೆಗೆ ದಾಟಿಕೊಂಡು ಬಂದಿದ್ದೇವೆ. ಉಳಿದ ಸಿಬ್ಬಂದಿ ಅಲ್ಲಿಯೇ ಇದ್ದಾರೆ ಎಂದು ತಿಳಿಸಿದ್ದಾರೆ.

ಕೂಡಲೇ ಸತೀಶ್ ಅವರು ಅನ್ಸರ್ ಎಂಬುವವರಿಗೆ ಕರೆ ಮಾಡಿ ಆಟೋದಲ್ಲಿ ಉಕ್ಕುಡವನ್ನು ತರಿಸಿ ಉಕ್ಕುಡದಲ್ಲಿ ಹೋಗಿ ಉಳಿದ ಮೂರು ಸಿಬ್ಬಂದಿಯನ್ನು ರಕ್ಷಿಸಿ ದಡಕ್ಕೆ ಕರೆ ತಂದಿದ್ದಾರೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

--- ಬಾಕ್ಸ್---

ನರಸಿಂಹರಾಜಪುರ ವಲಯ ಅರಣ್ಯಾಧಿಕಾರಿ ಪ್ರವೀಣ್ ಸುದ್ದಿಗಾರರಿಗೆ ಮಾಹಿತಿ ನೀಡಿ, ಚಿಕ್ಕಮಗಳೂರಿನಿಂದ ಇತ್ತೀಚೆಗಷ್ಟೆ ಟಾಸ್ಕ್ ಫೋರ್ಸ್ ಸಿಬ್ಬಂದಿ ಮನವಿ ಮೇರೆಗೆ ಕರೆಸಿಕೊಳ್ಳಲಾಗಿತ್ತು. ಅವರು ವಸತಿ ಗೃಹದಲ್ಲಿ ತಂಗುವ ಬದಲು ಮುತ್ತಿನ ಕೊಪ್ಪ ಪ್ರವಾಸಿ ಮಂದಿರದಲ್ಲಿಯೇ ತಂಗುತ್ತೇವೆ ಎಂದು ಅಲ್ಲಿ ಉಳಿದಿದ್ದರು. ಭಾರೀ ಮಳೆ ಆಗಿ, ಏಕಾಏಕಿ ನೀರು ಆವರಿಸಿ ಕೊಂಡಿದ್ದರಿಂದ ಈ ರೀತಿ ಘಟನೆಯಾಗಿದೆ. ಇದೀಗ ಮುತ್ತೋಡಿಗೆ ಸಿಬ್ಬಂದಿ ತೆರಳಿದ್ದಾರೆ. ಮುಂದೆ ಅವರಿಗೆ ಚಿಕ್ಕಗ್ರಹಾರದ ಅರಣ್ಯ ಇಲಾಖೆ ವಸತಿ ಗೃಹದಲ್ಲಿ ತಂಗಲು ತಿಳಿಸಲಾಗಿದೆ.

Share this article