ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹನ್ನೊಂದು ಜೋಡಿ

KannadaprabhaNewsNetwork | Published : Nov 27, 2024 1:03 AM

ಸಾರಾಂಶ

ಹಾರೋಹಳ್ಳಿ: ತಾಲೂಕಿನ ಶ್ರೀ ಕಣಿವೆ ಮಹದೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಕಡೇ ಕಾರ್ತಿಕ ಮಾಸ ಮತ್ತು ಉಚಿತ ಸಾಮೂಹಿಕ ವಿವಾಹ ಸಂಭ್ರಮ, ಸಡಗರದಿಂದ ನೆರವೇರಿತು. ಈ ಬಾರಿ ವಿಶೇಷವಾಗಿ ಹನ್ನೊಂದು ಜೋಡಿ ದಾಂಪತ್ಯಕ್ಕೆ ಕಾಲಿಟ್ಟರು.

ಹಾರೋಹಳ್ಳಿ: ತಾಲೂಕಿನ ಶ್ರೀ ಕಣಿವೆ ಮಹದೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಕಡೇ ಕಾರ್ತಿಕ ಮಾಸ ಮತ್ತು ಉಚಿತ ಸಾಮೂಹಿಕ ವಿವಾಹ ಸಂಭ್ರಮ, ಸಡಗರದಿಂದ ನೆರವೇರಿತು. ಈ ಬಾರಿ ವಿಶೇಷವಾಗಿ ಹನ್ನೊಂದು ಜೋಡಿ ದಾಂಪತ್ಯಕ್ಕೆ ಕಾಲಿಟ್ಟರು.

ಸೋಮವಾರ ಕಣಿವೆ ಮಹದೇಶ್ವರಸ್ವಾಮಿ ಸೇವಾ ಮಂಡಳಿ ಹಾಗೂ ಸ್ನೇಹಮಯಿ ಫೌಂಡೇಷನ್ ಸಹಯೋಗದಲ್ಲಿ ಏರ್ಪಡಿಸಿದ್ದ ಉಚಿತ ಸಾಮೂಹಿಕ ವಿವಾಹದಲ್ಲಿ ಶ್ರೀಕ್ಷೇತ್ರ ಮರಳೆಗವಿ ಮಠದ ಶ್ರೀ ಮುಮ್ಮಡಿ ಶಿವರುದ್ರ ಸ್ವಾಮೀಜಿ ವಧು ವರರಿಗೆ ಆಶೀರ್ವಾದ ಮಾಡಿ ಶುಭ ಹಾರೈಸಿದರು. ಬೆಳಗ್ಗೆ 9ರಿಂದ 10.30ರ ವರೆಗೆ ಸಲ್ಲುವ ಶುಭ ಲಗ್ನ ಮುಹೂರ್ತದಲ್ಲಿ ವಧು ವರರು ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದರು. ಫೌಂಡೇಷನ್ ವತಿಯಿಂದ ವಧುವಿಗೆ ಸೀರೆ, ರವಕೆ ಹಾಗೂ ವರನಿಗೆ ಧೋತಿ, ಶಾಲು ಮಾಂಗಲ್ಯ ವಿತರಿಸಲಾಯಿತು.

ಈ ವೇಳೆ ಶ್ರೀ ಮುಮ್ಮಡಿ ಶಿವರುದ್ರ ಸ್ವಾಮೀಜಿ ಮಾತನಾಡಿ, ಮಹದೇಶ್ವರನ ಸನ್ನಿಧಿಯಲ್ಲಿ ಉಚಿತ ಸಾಮೂಹಿಕ ವಿವಾಹದಲ್ಲಿ ಗೃಹಸ್ತಾಶ್ರಮ ಗಟ್ಟಿಯಾಗಿರುತ್ತದೆ. ಈ ನೆಲದಲ್ಲಿ ಮಾತ್ರ ಇಂತಹ ಸಂಸ್ಕೃತಿ ಸಾಧ್ಯ. ನೂತನ ವಧುವರರು ಜೀವನದಲ್ಲಿ ಸೋಲಿಗೆ ಹೆದರದೆ ಏನೇ ಸಮಸ್ಯೆ ಬಂದರೂ ತಿದ್ದಿಕೊಂಡು ಸಹಬಾಳ್ವೆ ನಡೆಸಬೇಕು. ಸಾಮೂಹಿಕ ವಿವಾಹಗಳು ಬಡವರಿಗೆ ಅನುಕೂಲವಾಗುತ್ತದೆ. ಬಡವರು ದುಬಾರಿ ಮದುವೆಗಳಿಮದ ಸಾಲದ ಸುಳಿಯಲ್ಲಿ ಸಿಲುಕಬೇಕಾಗುತ್ತದೆ. ಇಂತಹ ಉಚಿತ ವಿವಾಹಗಳು ಸಮಾಜಕ್ಕೆ ಮಾದರಿಯಾಗಬೇಕು. ಗ್ರಾಮೀಣ ಪ್ರದೇಶದಲ್ಲೂ ಬಡವರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಇನ್ನು ಸೌಹಾರ್ದತೆ ಜೀವಂತವಾಗಿದೆ. ಸಾಮೂಹಿಕ ವಿಹಾಹಗಳನ್ನು ಬಡವರು ಸದ್ಬಳಕೆ ಮಾಡಿಕೊಳ್ಳಬೇಕು. ಆಡಂಬರದ ಮದುವೆಗಳನ್ನು ಮಾಡಿ ಸಾಲದ ಕೂಪಕ್ಕೆ ಸಿಲುಕುವ ಬದಲು ಸರಳವಾಗಿ ಮದುವೆ ಮಾಡಿಕೊಂಡು ಅದೇ ಹಣವನ್ನು ನವದಂಪತಿ ಬದುಕಿಗೆ ಆಸರೆ ಮಾಡಿಕೊಡುವಂತೆ ಸಲಹೆ ಮಾಡಿದರು.

ಮರಳವಾಡಿ ಶಿವಮಠದ ಶ್ರೀ ಮೃತ್ಯುಂಜಯ ಸ್ವಾಮೀಜಿ, ದೇಗುಲಮಠದ ಶ್ರೀ ಚನ್ನಬಸವ ಸ್ವಾಮೀಜಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಆಶೀರ್ವದಿಸಿದರು. ಹೊಸೂರು ಶಾಸಕ ವೈ.ಪ್ರಕಾಶ್, ಕಣಿವೆ ಮಹದೇಶ್ವರಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಪಾರ್ಥಸಾರಥಿ, ಉಪಾಧ್ಯಕ್ಷ ನವೀನ್, ಕಾರ್ಯದರ್ಶಿ ಶಿವನಪ್ಪ, ಸ್ನೇಹಮಯಿ ಫೌಂಡೇಷನ್ ಉಸ್ತುವಾರಿ ಚಿಕ್ಕಸಾದೇನಹಳ್ಳಿ ಈಶ್ವರ್, ಅಧ್ಯಕ್ಷ ಶಾಂತರಾಜು, ಪದಾಧಿಕಾರಿಗಳಾದ ಬಿ.ಎನ್.ಮಹದೇವ್, ಪರಮೇಶ್, ವೃಷಬೇಂದ್ರ, ಶ್ರೀನಿವಾಸ್ಪ್ರಸಾದ್, ಭೈರವ ಹಲವರು ಹಾಜರಿದ್ದರು. ಅದ್ಧೂರಿ ಕಡೇ ಕಾರ್ತಿಕ ಮಾಸ:

ತಟ್ಟೆಕೆರೆ ಕಣಿವೆ ಮಹದೇಶ್ವರಸ್ವಾಂಇ ಸನ್ನಿಧಿಯಲ್ಲಿ ಕಡೇ ಕಾರ್ತಿಕ ಸೋಮವಾರದ ಅಂಗವಾಗಿ ವಿಶೇಷ ಪೂಜೆ, ಅಲಂಕಾರ, ಜಗಜಗಿಸುವ ವಿದ್ಯುತ್ ದೀಪಗಳ ಅಲಂಕಾರದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು.

26ಕೆಆರ್ ಎಂಎನ್ 3.ಜೆಪಿಜಿ

ಹಾರೋಹಳ್ಳಿ ತಾಲೂಕಿನ ಶ್ರೀ ಕಣಿವೆ ಮಹದೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಕಡೇ ಕಾರ್ತಿಕ ಮಾಸ ಮತ್ತು ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಶ್ರೀ ಮುಮ್ಮಡಿ ಶಿವರುದ್ರ ಸ್ವಾಮೀಜಿ ಮಾತನಾಡಿದರು.

Share this article