-ಕನ್ನಡಪ್ರಭ ಪತ್ರಿಕೆ ವರದಿಯನ್ನಾಧರಿಸಿ ಮಕ್ಕಳ ಹಕ್ಕುಗಳ ಆಯೋಗದ ರಾಜ್ಯಾಧ್ಯಕ್ಷ ಶ್ರೀಧರ್ ಕೋಸುಂಬೆ ಡಿಸಿ, ಕೆಇಎಗೆ ಪತ್ರ
ಕನ್ನಡಪ್ರಭ ವಾರ್ತೆ ಕಲಬುರಗಿ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ 2026-27ನೇ ಸಾಲಿಗಾಗಿ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಮಕ್ಕಳು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಫೆ. 4ರ ಬುಧವಾರ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾಗಿರುವ ವಿಶೇಷ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಮಕ್ಕಳ ಹಕ್ಕುಗಳ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಪರೀಕ್ಷೆ ನಡೆಸುವ ಕೆಇಎ ಹಾಗೂ ಕಲಬುರಗಿ ಜಿಲ್ಲಾಡಳಿತಕ್ಕೆ ಪತ್ರ ಬರೆದು ತಕ್ಷಣ ಸಮಸ್ಯೆ ನಿವಾರಣೆಗೆ ಕೋರಿದೆ.ಕೆಇಎ ಎಪ್ರಿಲ್ 23, ಮತ್ತು 24 ರಂದು ನಡೆಸಲಿರುವ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಆ್ವಾನಿಸಿರುವ ಅರ್ಜಿ ಅಪಲೋಡ್ ಮಾಡುವಾಗ ಪಿಯುಸಿ ಓದುತ್ತಿರುವ ಮಕ್ಕಳು ಅನೇಕ ತೊಂದರೆ ಎದುರಿಸುತ್ತಿದ್ದಾರೆ. ವಿದ್ಯಾರ್ಥಿಗಳ ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಆಧಾರ್ ಕಾರ್ಡ್, ಜಾತಿ ಪತ್ರ, ಆದಾಯ ಪತ್ರಗಳಲ್ಲೆಲ್ಲಾ ತಂದೆ ಹೆಸರು, ವಿಳಾಸ ಇತ್ಯಾದಿಗಳಲ್ಲಿ ಅನೇಕ ಬದಲಾವಣೆಗಳಿರೋ ಕಾರಣದಿಂದ ಆನ್‌ಲೈನ್‌ನಲ್ಲಿ ತಮ್ಮ ಅರ್ಜಿ ಸ್ವೀಕಾರವಾಗದೆ ಪರದಾಡುವಂತಾಗಿದೆ. ದಾಖಲೆ ಸರಿಪಡಿಸಲು ಸಮಯ ಬೇಕು, ಆದರೆ, ಅವರಿಗೆ ಸಮಯವಿಲ್ಲವೆಂದು ಕನ್ನಡಪ್ರಭ ಮಕ್ಕಳ ತೊಂದರೆಗಳನ್ನು ವಿಸ್ತೃತವಾಗಿ ವರದಿ ಮಾಡಿ ಗಮನ ಸೆಳೆದಿತ್ತು.
ಕಲಂ 371 ಜೆನಂತಹ ಪ್ರಮಾಣ ಪತ್ರ ಸೇರಿದಂತೆ ಜಾತಿ, ಆದಾಯ ಪತ್ರ, ಆದಾರ್ ಕರೆಕ್ಷನ್ ಇವೆಲ್ಲದಕ್ಕೂ ವಿಳಂಬವಿಲ್ಲದಂತೆ ಸಿಇಟಿ ಅರ್ಜಿ ಸಲ್ಲಿಸುವ ಮಕ್ಕಳಿಗೆ ಅನುಕೂಲ ಮಾಡಿಕೊಡುವಂತೆ ತಹಸೀಲ್ದಾರ್‌ಗಳು, ಉಪ ವಿಭಾಗೀಯ ಸಹಾಯಕ ಆಯುಕ್ತರು ಎಲ್ಲರಿಗೂ ತಾವು ನಿರ್ದೇಶನ ನೀಡುವಂತೆ ಆಯೋಗದ ಪತ್ರದಲ್ಲಿ ಅಧ್ಯಕ್ಷ ಶಶಿಧರ್ ಕೋಸುಂಬೆ ಜಿಲ್ಲಾಧಿಕಾರಿಗಳನ್ನು ಕೋರಿದ್ದಾರೆ.