ಬ್ಯಾಡಗಿ: ಪ್ರಾದೇಶಿಕ ಅಸಮತೋಲನ ಸರ್ಕಾರದ ಮುಂದಿರುವ ಬಹುದೊಡ್ಡ ಸವಾಲಾಗಿದ್ದು, ಹಳ್ಳಿಗಳಲ್ಲಿನ ಜನರು ಪಟ್ಟಣದ ಕಡೆಗೆ ಮುಖ ಮಾಡದಂತೆ ಗ್ರಾಮೀಣ ಪ್ರದೇಶದ ಜನರಿಗೆ ಮೂಲ ಸೌಕರ್ಯ ಕಲ್ಪಿಸಲು ಸರ್ಕಾರ ಅದ್ಯತೆ ನೀಡುತ್ತಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.
ತಾಲೂಕಿನ ಮೋಟೆಬೆನ್ನೂರು ಗ್ರಾಪಂ ಆಶ್ರಯದಲ್ಲಿ ಬಾಲಕಿಯರ ಶಾಲೆಗೆ ಅಕ್ಷರ ದಾಸೋಹ ಕೊಠಡಿ, ಎನ್‌ಆರ್‌ಎಲ್‌ಎಂ ಶೆಡ್ ಹಾಗೂ ನವೀಕರಿಸಿದ ಗ್ರಾಪಂ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದರು.ಮೂಲ ಸೌಕರ್ಯಗಳ ಕೊರತೆಯಿಂದ ಹಳ್ಳಿಗಳು ನಲುಗುತ್ತಿವೆ. ಕೃಷಿ ಪ್ರಧಾನ ಕಸುಬಾಗಿದ್ದರೂ ಅತಿವೃಷ್ಟಿ ಹಾಗೂ ಅನಾವೃಷ್ಟಿಗಳಿಂದ ಕೃಷಿಕರ ಬದುಕು ದುಸ್ತರವಾಗಿದೆ. ಇದರಿಂದ ಹಳ್ಳಿಗಳಲ್ಲಿರುವ ಕೂಲಿ ಕಾರ್ಮಿಕರು ಸಹಜವಾಗಿ ಪಟ್ಟಣಗಳತ್ತ ಮುಖ ಮಾಡುವ ಮೂಲಕ ಹಳ್ಳಿಗಳನ್ನು ತೊರೆಯುತ್ತಿದ್ದಾರೆ ಎಂದು ಖೇದ ವ್ಯಕ್ತಪಡಿಸಿದರು.
ಯಾಂತ್ರಿಕೃತದತ್ತ ಕೃಷಿಕರ ಬದುಕು: ಕೂಲಿ ಕಾರ್ಮಿಕರ ಸಮಸ್ಯೆ ಸೇರಿದಂತೆ ಕೃಷಿ ಸರಣಿ ವೈಫಲ್ಯ ಸೇರಿದಂತೆ ಕೃಷಿ ಚಟುವಟಿಕೆಗಳ ಯಾಂತ್ರಿಕೃತವಾಗುತ್ತಿವೆ, ಕನಿಷ್ಠ ರೈತರ ಮನೆಯಲ್ಲಿ ಜಾನುವಾರುಗಳಿಲ್ಲದೇ ಕೃಷಿ ನಡೆಯುತ್ತಿದೆ. ಒಂದು ಜಾನುವಾರುಗಳಿದ್ದಲ್ಲಿ ಅವುಗಳ ನಿರ್ವಹಣೆಗೆ ಕನಿಷ್ಠ ಒಬ್ಬ ಕೂಲಿ ಕಾರ್ಮಿಕನ ಅವಶ್ಯಕತೆ ಬೀಳುತ್ತಿತ್ತು. ಆದರೆ ಹಾಗಾಗುತ್ತಿಲ್ಲ. ಹೀಗಾಗಿ ಉದ್ಯೋಗ ಖಾತ್ರಿ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುತ್ತಿದೆ ಎಂದರು.ಜವಾಬ್ದಾರಿಯಿಂದ ನಿರ್ವಹಿಸಿ: ಬಾಲಕಿಯರ ಶಾಲೆಗೆ ಅಡುಗೆ ಕೋಣೆಗಳನ್ನು ನಿರ್ಮಿಸಿಕೊಡಲಾಗಿದ್ದು, ಅಡುಗೆ ಸಿಬ್ಬಂದಿ ಮೊದಲು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಬಳಿಕ ಶುದ್ಧ ಮತ್ತು ಶುಚಿಯಾದ ಆಹಾರ ತಯಾರಿಕೆಗೆ ಮುಂದಾಗಬೇಕು. ಇವೆಲ್ಲವುಗಳ ನಡುವೆ, ಯಾವುದೇ ಅಗ್ನಿ ಅವಘಡಗಳು ನಡೆಯದಂತೆ ಸಿಲಿಂಡರ್‌ಗಳ ಬಳಕೆ ಮಾಡುವ ಮೂಲಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದರು.
ಗ್ರಾಮದ ಮುಖಂಡರಾದ ಶಿವಬಸಪ್ಪ ಕುಳೇನೂರ, ನಾಗರಾಜ ಆನ್ವೇರಿ, ಶಿವಪುತ್ರಪ್ಪ ಅಗಡಿ, ವಿಜಯಭರತ ಬಳ್ಳಾರಿ, ಸತೀಶ ಪಾಟೀಲ, ಮಂಜಣ್ಣ ಎಲಿ, ಶಿವಕುಮಾರಗೌಡ ಪಾಟೀಲ, ಗ್ರಾಪಂ ಅಧ್ಯಕ್ಷೆ ಪಾರ್ವತೆವ್ವ ನಾಯಕ, ಉಪಾಧ್ಯಕ್ಷೆ ಮೀನಾಕ್ಷಮ್ಮ ಅಂಗಡಿ, ಸದಸ್ಯರಾದ ಮಾರುತಿ ಬ್ಯಾಟಪ್ಪನವರ, ರಾಜು ಹಾವನೂರ, ರಮೇಶ ಬಟ್ಟಲಕಟ್ಟಿ, ವೀಣಾ ನೆಗಳೂರು, ಶ್ರಿದೇವಿ ನೆಗಳೂರ, ಉಮೇಶ ಹಾವೇರಿ ಶಿವಕುಮಾರ, ದಾನಪ್ಪ ಬಳ್ಳಾರಿ, ಹೂವಕ್ಕ ಹಿತ್ತಲಮನಿ, ಗದಿಗೆವ್ವ ಹಾದರಗೇರಿ, ಶಿವಪ್ಪ ಕುಳೇನೂರ, ಪಾರ್ವತೆಮ್ಮ ಬಳಿಗಾರ ಲಲಿತಾ ಎಲಿ, ಮಮ್ತಾಜ್ ಬಿ. ದೇವಿಹೋಸೂರ, ಗಂಗಮಾಳವ್ವ ಪಸಿಗೇರ, ಅನಿತಾ ಕುರುಡಮ್ಮನವರ, ಟಿಇಒ ಕೆ.ಎಂ. ಮಲ್ಲಿಕಾರ್ಜುನ ಪಿಡಿಒ ಮಲ್ಲೇಶ ಮೋಟೆಬೆನ್ನೂರ ಬಿಇಒ ಎಸ್.ಜಿ. ಕೋಟಿ ಇತರರಿದ್ದರು.