ಸರಸ್ವತಿಪುರಂ ಬಡಾವಣೆ ಭೀಮ್ ಯುವ ಸೇನೆಯಿಂದ 134ನೇ ಅಂಬೇಡ್ಕರ್, ಜಗಜೀವನರಾಂ ಜಯಂತಿ ಅದ್ಧೂರಿ ಆಚರಣೆ
ಕನ್ನಡಪ್ರಭ ವಾರ್ತೆ, ಬೀರೂರು.ಮಾನವತವಾದಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನರಾಂ ಜಯಂತಿ ಆಚರಿಸುವ ಮೂಲಕ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಬೇಕು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.ಪಟ್ಟಣದ ಸರಸ್ವತಿಪುರಂ ಬಡಾವಣೆ ಭೀಮ್ ಯುವ ಸೇನೆಯಿಂದ ಭಾನುವಾರ ಸಂಜೆ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬುಜಗಜೀವನರಾಂ ಅವರ ಜನ್ಮದಿನದ ಅಂಗವಾಗಿ ಕೆ.ಎಸ್.ಆರ್.ಟಿ.ಸಿ ಮುಂಭಾಗದ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.ಜಯಂತಿಯಂದು ಮಾತ್ರ ನೆನಪು ಮಾಡಿಕೊಳ್ಳವುದರಲ್ಲಿ ಅರ್ಥವಿಲ್ಲ, ಅವರಿಗೆ ಗೌರವ ಕೊಡುವುದೆ ಆದರೆ ಮೊದಲು ಅಂಬೇಡ್ಕರ್ ವಿಚಾರಧಾರೆ ತಿಳಿದುಕೊಂಡು ಸಮಾಜ ಮುಖಿಯಾಗಿ ಕೆಲಸ ಮಾಡಬೇಕು. ನಮ್ಮ ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ಮಾಡಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರಬೇಕು. ಜಗತ್ತಿನ ಅತಿಶ್ರೇಷ್ಠ ಲಿಖಿತ ಸಂವಿಧಾನ ರಚಿಸಿದ ಡಾ.ಬಿ.ಆರ್.ಅಂಬೇಡ್ಕರ್ ರವರನ್ನು ಇಡೀ ಜಗತ್ತೇ ಗೌರವಿಸುವಂತಾಗಿದ್ದು, ಮಹಾನಾಯಕ ಧಾರವಾಹಿಯ ಮೂಲಕ ಅವರ ಜೀವನದ ಕಟು ಸತ್ಯಗಳು ಅರ್ಥವಾಗಿ, ದೇಶದ ಪ್ರತಿಯೊಬ್ಬರು ಗೌರವದಿಂದ ಅವರನ್ನು ಕಾಣುವಂತಾಗಿದೆ ಎಂದರು.ಮಾಜಿ ಶಾಸಕ ವೈ.ಎಸ್.ವಿ.ದತ್ತ ಮಾತನಾಡಿ, ನಮ್ಮ ಏಳಿಗೆಯ ನೇತಾರರು ನಾವೇ, ನಮ್ಮ ದಾಸ್ಯವನ್ನು ತೊಲಗಿಸಲು ನಾವೇ ಮುಂದಾಗಬೇಕೇ ಹೊರತು ಬೇರೆಯವರ ಸಹಕಾರ ನಿರೀಕ್ಷಿಸುವುದು ದೌರ್ಬಲ್ಯದ ಸಂಕೇತ. ಇದಕ್ಕಾಗಿ ಶಿಕ್ಷಣದ ಸಾರ್ವತ್ರೀಕರಣ ಪ್ರಮುಖ ಅಗತ್ಯ ಎಂದು ಪ್ರತಿಪಾದಿಸಿ, ಶೋಷಿತರನ್ನು ಶಿಕ್ಷಣದ ಮೂಲಕವೇ ಜಾಗೃತಗೊಳಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎನ್ನುವ ಆಶಯದೊಂದಿಗೆ ಬಾಳಿದ ಮಹಾನ್ಚೇತನ ಡಾ.ಅಂಬೇಡ್ಕರ್'''''''' ಎಂದು ತಿಳಿಸಿದರು.ಡಾ. ಬಾಬಾಸಾಹೇಬರು ತಮ್ಮ ಚಿಂತನೆ ಮತ್ತು ವಿಶ್ವದ ಎಲ್ಲ ಸಂವಿಧಾನಗಳನ್ನು ಅಭ್ಯಸಿಸಿ ಅದರ ಆಧಾರದ ಮೇಲೆ ನಮ್ಮ ದೇಶಕ್ಕೆ ಲಿಖಿತ ಸಂವಿಧಾನ ರೂಪಿಸಿದ ಆಶಯಗಳು ಇಂದು ಹಲವು ಸಂದರ್ಭದಲ್ಲಿ ದುರ್ಬಲವಾಗುವ ಸ್ಥಿತಿ ಎದುರಾಗಿದೆ. ಜೊತೆಗೆ ಸ್ವಾತಂತ್ರ್ಯ ದೊರೆತು ಹಲವು ವರ್ಷಗಳು ಸಮೀಪಿಸುತ್ತಿದ್ದರೂ ದಲಿತರು, ದಮನಿತರು ಮೀಸಲಾತಿ ಆಧಾರದಲ್ಲಿ ಬದುಕು ಸಾಗಿಸುವಂತಾಗಿದೆಯೇ ಹೊರತು, ಅವರು ಸಮಾಜದ ಮುಖ್ಯವಾಹಿನಿ ಪ್ರಮುಖ ಭಾಗವಾಗಲು ಸಾಧ್ಯ ವಾಗದಿರುವುದು ದುರಂತವೇ ಸರಿ. ಎಂತಹ ಸಂದರ್ಭ ಬಂದರೂ ಅಂಬೇಡ್ಕರ್ ವಿಚಾರಧಾರೆ ಬತ್ತದಂತೆ ಎಚ್ಚರ ವಹಿಸ ಬೇಕಾದ ಜವಾಬ್ದಾರಿ ಯುವಸಮೂಹದ ಮೇಲಿದೆ. ಅವರ ಆಶಯ ಈಡೇರಿಸುವಲ್ಲಿ ಸಮಾಜ ಪ್ರಜ್ಞಾಪೂರ್ವಕ ಕಾಳಜಿ ತೋರಿಸಲಿದೆ ಎನ್ನುವ ಭರವಸೆಯೊಂದಿಗೆ ಮುನ್ನಡೆಯೋಣ ಎಂದು ಹೇಳಿದರು. ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಶಂಕರ್ ಮಾತನಾಡಿ, ಸರ್ಕಾರಿ ಹುದ್ದೆಗಳಲ್ಲಿ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಮೀಸಲಾತಿ ಇದ್ದರೆ ಮಾತ್ರ ಶೋಷಿತ ಸಮುದಾಯಗಳು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ. ಸರ್ಕಾರ ಮೀಸಲಾತಿ, ಬಡ್ತಿ ವಿಷಯಗಳಲ್ಲಿ ದಲಿತ ವಿರೋಧಿ ನೀತಿ ಅನುಸರಿಸುವ ಮಾತುಗಳು ಕೇಳಿ ಬರುತ್ತಿವೆ. ಸಂವಿಧಾನ ನಮಗೆ ಕಲ್ಪಿಸಿರುವ ಹಕ್ಕುಗಳ ಮೂಲಕವಾದರೂ ನಮಗೆ ಸಮಾನತೆ ದೊರೆಯುವಂತಾದರೆ ಡಾ. ಅಂಬೇಡ್ಕರ್ ಅವರ ಹೋರಾಟಕ್ಕೆ, ಚಿಂತನೆಗಳಿಗೆ ಬೆಲೆ ಬರಲಿದೆ ಎಂದರು.
ಅಂಬೇಡ್ಕರ್ ಮತ್ತು ಜಗಜೀವನರಾಂ ಭಾವಚಿತ್ರಗಳಿಗೆ ಹೂಗಳಿಂದ ಅಲಂಕರಿಸಿ ಟ್ರಾಕ್ಟರ್ ನಲ್ಲಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು.ಪುರಸಭಾ ಸದಸ್ಯ ಬಿ.ಕೆ.ಶಶಿಧರ್, ಪಿಎಸೈ ಸಜಿತ್ ಕುಮಾರ್, ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೇವಾಲಯದ ಮುಖಂಡ ಶಿವಣ್ಣ, ಬಿ.ಜಿ.ಮೈಲಾರಪ್ಪ, ದಕ್ಷಿಣಮೂರ್ತಿ, ಜಯಣ್ಣ, ಕುಮಾರ್,ಎಂ.ಆರ್.ಎಚ್.ಎಸ್ ಮುಖಂಡ ಬಿ.ಟಿ.ಚಂದ್ರಶೇಖರ್, ನಾಮಿನಿ ಸದಸ್ಯ ಮಲ್ಲಿಕಾರ್ಜುನ್, ಭೀಮ್ ಯುವ ಸೇನೆಯ ಸುನಿಲ್, ದಿಲೀಪ್, ಮಲ್ಲಿಕ್,ಪವನ್ ಅಂಜನ್, ಮಲ್ಲಿಕಾರ್ಜುನ್, ಭೋಜರಾಜು , ಲೋಕೇಶ್,ಪುರಸಭೆ ಸದಸ್ಯರಾದ ಬಿ.ಆರ್.ಮೋಹನ್ ಕುಮಾರ್, ಲೋಕೇಶಪ್ಪ, ಜಿಮ್ ರಾಜು, ಕಡೂರು ಶಂಕರ್, ಕೃಷ್ಣಪ್ಪ, ಸೇರಿದಂತೆ ಸರಸ್ವತಿಪುರಂ ಬಡಾವಣೆ ಯುವಕರು ಮತ್ತಿತರರು ಇದ್ದರು.28 ಬೀರೂರು 1ಬೀರೂರಿನ ಸರಸ್ವತಿಪುರಂ ಬಡಾವಣೆ ಭೀಮ್ ಯುವ ಸೇನೆಯಿಂದ ಭಾನುವಾರ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬುಜಗಜೀವನರಾಂ ಜಯಂತಿ ಆಚರಿಸಲಾಯಿತು.ಶಾಸಕ ಕೆ.ಎಸ್.ಆನಂದ್, ವೈ.ಎಸ್.ವಿ.ದತ್ತ, ಬಿ.ಕೆ.ಶಶಿಧರ್, ಅಧ್ಯಕ್ಷ ಶಂಕರ್ ಸೇರಿದಂತೆ ಮತ್ತಿತರಿದ್ದರು.