ಕನ್ನಡಪ್ರಭ ವಾರ್ತೆ ಬೇಲೂರು ಕನ್ನಡ ರಾಜ್ಯೋತ್ಸವವು ಕೇವಲ ಆಚರಣೆ ಆಗದೆ ನಮ್ಮ ಏಕತೆ, ಪರಂಪರೆ ಮತ್ತು ಭಾಷಾ ಪ್ರೇಮದ ಸಂದೇಶ ಸಾರುವ ಸಂಕಲ್ಪ ಮಾಡಬೇಕು ಎಂದು ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಹೇಳಿದರು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ೭೦ನೇ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನಡೆಸಿ ಶುಭ ಹಾರೈಸಿ ಮಾತನಾಡಿ, ಕನ್ನಡ ರಾಜ್ಯೋತ್ಸವವು ಕೇವಲ ಉತ್ಸವವಲ್ಲ, ಅದು ಕನ್ನಡಿಗರ ಏಕತಾ ದಿನ ಎಂದರು. ಕನ್ನಡ ಪ್ರೇಮ ನವೆಂಬರ್ ತಿಂಗಳಿಗಷ್ಟೇ ಸೀಮಿತವಾಗದೆ ನಿತ್ಯವೂ ಜೀವಂತವಾಗಿರಬೇಕು. ತಾಲೂಕಿನ ಹಲ್ಮಿಡಿ ಗ್ರಾಮದಲ್ಲಿ ಕನ್ನಡದ ಪ್ರಥಮ ಶಿಲಾಶಾಸನ ಸಿಕ್ಕಿರುವುದನ್ನು ಉಲ್ಲೇಖಿಸಿ, ಈ ನಾಡು ಕನ್ನಡ ಸಂಸ್ಕೃತಿಯ ತವರೂರಾಗಿದೆ. ಸಾಹಿತಿಗಳು ಮಾತ್ರವಲ್ಲದೆ ಎಲ್ಲ ವೃತ್ತಿಜೀವಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಕನ್ನಡವನ್ನು ಬಳಸಿ ಬೆಳೆಸುವ ಬದ್ಧತೆಯನ್ನು ತೋರಬೇಕು ಎಂದರು.ಶಾಸಕ ಎಚ್ ಕೆ ಸುರೇಶ್ ನಾಡಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕನ್ನಡ ರಾಜ್ಯೋತ್ಸವವು ನಮ್ಮ ಆತ್ಮಗೌರವದ ಹಬ್ಬವಾಗಿದೆ. ಕನ್ನಡ ನಮ್ಮ ಗುರುತು, ನಮ್ಮ ಅಸ್ತಿತ್ವ ಮತ್ತು ನಮ್ಮ ನಾಡಿನ ಆತ್ಮವನ್ನೇ ಪ್ರತಿಬಿಂಬಿಸುತ್ತದೆ. ಕನ್ನಡದ ಬೆಳವಣಿಗೆ ಕೇವಲ ಸರ್ಕಾರದ ಹೊಣೆಗಾರಿಕೆ ಅಲ್ಲ, ಪ್ರತಿ ನಾಗರಿಕನ ಕರ್ತವ್ಯವೂ ಆಗಿದೆ. ತಂತ್ರಜ್ಞಾನ, ಶಿಕ್ಷಣ, ವ್ಯಾಪಾರ ಮತ್ತು ಆಡಳಿತದ ಎಲ್ಲಾ ಕ್ಷೇತ್ರಗಳಲ್ಲಿ ಕನ್ನಡ ಬಳಕೆಯನ್ನು ವಿಸ್ತರಿಸಬೇಕೆಂದು ಅವರು ಕರೆ ನೀಡಿದರು. ಯುವ ಪೀಳಿಗೆ ಕನ್ನಡದ ಮೂಲಗಳನ್ನು ತಿಳಿದು, ಅದರ ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಹೆಮ್ಮೆಪಟ್ಟು ಬದುಕಬೇಕು. “ಕನ್ನಡದಲ್ಲಿ ಕೆಲಸ ಮಾಡುವುದು ಗೌರವ, ಕನ್ನಡದಲ್ಲಿ ಬದುಕುವುದು ಅಭಿಮಾನ” ಎಂಬ ಸಂದೇಶವನ್ನು ಅವರು ನೀಡಿದರು.ರಾಷ್ಟ್ರೀಯ ಹಬ್ಬಗಳ ಆಚರಣೆ ಮಾಡಲು ಸರ್ಕಾರಿ ಶಾಲಾ ಮೈದಾನ ಅವಶ್ಯಕವಾಗಿದೆ. ಇಲ್ಲಿಯ ಬಲಾಢ್ಯರ ಕಪಿಮುಷ್ಠಿಯಿಂದ ಇದನ್ನು ಉಳಿಸಿಕೊಳ್ಳಲು ಹೋರಾಟ ಮಾಡುತ್ತಿರುವ ಸಂಘಟನೆಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ನಾನು ಅಭಿನಂಧನೆ ಸಲ್ಲಿಸುತ್ತೇನೆ. ಅಲ್ಲದೆ ಈ ಮೈದಾನವನ್ನು ರಕ್ಷಣೆ ಮಾಡಲು ಸುತ್ತಲೂ ಕಾಂಪೌಂಡ್ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದ್ದು ಹಲ್ಮಿಡಿ ಗ್ರಾಮಕ್ಕೆ ಸುಮಾರು ೯ ಕೋಟಿ ರು. ವೆಚ್ಚದಲ್ಲಿ ರಸ್ತೆ ಕಾಮಗಾರಿಯನ್ನು ಮಾಡಿದ್ದು ಹಲ್ಮಿಡಿ ಶಾಸನಕ್ಕೆ ಹಾಗೂ ಕಲಾಭವನಕ್ಕೆ ಹೆಚ್ಚಿನ ಅನುದಾನ ತಂದು ಅತಿ ಶೀಘ್ರದಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ ಎಂದರು.ನಂತರ ಪುರಸಭೆ ಅಧ್ಯಕ್ಷೆ ಉಷಾ ಸತೀಶ್ ಕನ್ನಡ ಹೋರಾಟಗಾರರ ಫಲವಾಗಿ ಇಂದು ೭೦ನೇ ರಾಜ್ಯೋತ್ಸವ ಆಚರಿಸುತ್ತಿದ್ದು ಕೇವಲ ಇದು ಒಂದು ದಿನಕ್ಕೆ ಮೀಸಲಾದರೆ ಸಾಲದು. ೭ ಕೋಟಿ ಕನ್ನಡಿಗರ ಮನೆಮನಗಳಲ್ಲಿ ಹಬ್ಬದ ರೀತಿಯಲ್ಲಿ ಪ್ರತಿನಿತ್ಯ ಆಚರಿಸಬೇಕು ಎಂದು ನುಡಿದರು.ಈ ವೇಳೆ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು. ಜೊತೆಗೆ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಯಿತು. ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ಸೈಯದ್ ತೌಫಿಕ್, ಪುರಸಭೆ ಸದಸ್ಯೆ ತೀರ್ಥಕುಮಾರಿ, ಭರತ್, ಮೀನಾಕ್ಷಿ, ಕರವೇ ವಿ ಎಸ್ ಭೋಜೇಗೌಡ, ಚಂದ್ರಶೇಖರ್, ರಾಜಣ್ಣ, ತೀರ್ಥಂಕರ, ಕಸಾಪ ಮಾನ ಮಂಜೇಗೌಡ, ಬಿಇಒ ಭಾಗ್ಯಮ್ಮ, ಮುಖ್ಯಾಧಿಕಾರಿ ಬಸವರಾಜು ಶಿಗ್ಗಾಂವಿ, ಪತ್ರಕರ್ತರ ಸಂಘದ ಕಾರ್ಯದರ್ಶಿ ಬಿ ಬಿ ಶಿವರಾಜು ಇತರರು ಹಾಜರಿದ್ದರು.