ಅಧಿಕಾರದ ಆಸೆಗೆ ತುರ್ತು ಪರಿಸ್ಥಿತಿ ಘೋಷಿಸಿದ್ದ ಇಂದಿರಾ: ಪ್ರಹ್ಲಾದ ಜೋಶಿ

KannadaprabhaNewsNetwork | Published : Jun 29, 2025 1:32 AM

ರಾಣಿಬೆನ್ನೂರು ನಗರದ ಎರೇಕುಪ್ಪಿ ರಸ್ತೆಯ ನೀಲಕಂಠೇಶ್ವರ ದೇವಸ್ಥಾನದ ಸಭಾಭವನದಲ್ಲಿ ಶನಿವಾರ ಸಂಜೆ ಸಿಟಿಜನ್ಸ್ ಫಾರ್ ಸೋಶಿಯಲ್ ಜಸ್ಟೀಸ್ ವತಿಯಿಂದ ಏರ್ಪಡಿಸಿದ್ದ ತುರ್ತು ಪರಿಸ್ಥಿತಿ ಕರಾಳ ದಿನಗಳ ವಿರುದ್ಧ ನಡೆದಿರುವ ರೋಚಕ ಕಥೆ ಅನಾವರಣ ಕಾರ್ಯಕ್ರಮ ನಡೆಯಿತು.

ರಾಣಿಬೆನ್ನೂರು: ನ್ಯಾಯಾಲಯ ನೀಡಿದ ತೀರ್ಪನ್ನು ನಿರ್ಲಕ್ಷಿಸಿ ಇಂದಿರಾ ಗಾಂಧಿ ತಮ್ಮ ಅಧಿಕಾರ ಉಳಿಸಿಕೊಳ್ಳುವ ಆಸೆಯಿಂದ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿದ ಪರಿಣಾಮ ದೇಶದ ಜನರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯಿತು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ನಗರದ ಎರೇಕುಪ್ಪಿ ರಸ್ತೆಯ ನೀಲಕಂಠೇಶ್ವರ ದೇವಸ್ಥಾನದ ಸಭಾಭವನದಲ್ಲಿ ಶನಿವಾರ ಸಂಜೆ ಸಿಟಿಜನ್ಸ್ ಫಾರ್ ಸೋಶಿಯಲ್ ಜಸ್ಟೀಸ್ ವತಿಯಿಂದ ಏರ್ಪಡಿಸಿದ್ದ ತುರ್ತು ಪರಿಸ್ಥಿತಿ ಕರಾಳ ದಿನಗಳ ವಿರುದ್ಧ ನಡೆದಿರುವ ರೋಚಕ ಕಥೆ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಂದಿನ ಚುನಾವಣೆಗೆ ₹35 ಸಾವಿರ ಖರ್ಚು ಮಾಡುವ ಬದಲಿಗೆ ಲಕ್ಷಾಂತರ ಖರ್ಚು ಮಾಡಿದರು. ಅಲಹಾಬಾದ್ ಹೈಕೋರ್ಟ್ ನ್ಯಾಯಧೀಶ ಸಿಂಹ ಅವರು ಇಂದಿರಾ ಗಾಂಧಿ ಆಯ್ಕೆಯನ್ನು ಅಸಿಂಧುಗೊಳಿಸಿ ತೀರ್ಪು ನೀಡಿದರು. ಆದರೆ ಅವರು ನೀಡಿದ ತೀರ್ಪನ್ನು ಸಹ ಕಾಣೆ ಮಾಡಿದರು. ರಾಜೀನಾಮೆ ನೀಡುವ ಬದಲು ತುರ್ತು ಪರಿಸ್ಥಿತಿ ಹೇರುವ ಕಾಯ್ದೆ ಜಾರಿಗೆ ತಂದರು. ಇದನ್ನು ಸಹ ಕೋರ್ಟ್‌ನಲ್ಲಿ ಪ್ರಶ್ನೆ ಮಾಡುವಂತಿಲ್ಲ ಎಂದರು. ದೇಶದ ಪ್ರಧಾನಮಂತ್ರಿ, ಉಪರಾಷ್ಟ್ರಪತಿ ಹಾಗೂ ಸ್ಪೀಕರ್ ಅವರ ಚುನಾವಣೆಯನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂಬ ಅಧಿಕಾರವನ್ನು ತಂದರು. 38 ಹಾಗೂ 39 ವಿಧೇಯಕ ತಿದ್ದುಪಡಿ ಮಾಡಿ ಅಧಿಕಾರ ನಡೆಸಿದರು. ಒಂದೇ ದಿನದಲ್ಲಿ 15 ರಾಜ್ಯಗಳು ಇದಕ್ಕೆ ಸಹಕಾರ ನೀಡಿದವು. ನ್ಯಾಯಾಲಯದ ತೀರ್ಪು ಬರುವ ಎರಡು ದಿನ ಮೊದಲು ತಿದ್ದುಪಡಿ ಮಾಡಿದರು. ಸಂವಿಧಾನ ಶೇ. 60 ಭಾಗವನ್ನು ರಿರೈಟ್ ಮಾಡಿದರು. 21 ತಿಂಗಳಲ್ಲಿ 45 ಸುಗ್ರೀವಾಜ್ಞೆ ಕಾಯ್ದೆಗಳನ್ನು ತಂದರು. ಇದರ ಬಗ್ಗೆ ಮಾತನಾಡುವರನ್ನು ಒಳಗೆ ಹಾಕುವ ಕೆಲಸ ಮಾಡುತ್ತಿದ್ದರು. ಕಾನೂನು ತಿರುಚುವ ಮೂಲಕ ದೇಶದ ಜನರಿಗೆ ಅನ್ಯಾಯ ಮಾಡಿದರು. 2 ಲಕ್ಷಕ್ಕೂ ಹೆಚ್ಚು ಜನರನ್ನು ಬಂಧಿಸಿದರು. ಬಲವಂತದಿಂದ ಸಂತಾನಹರಣ ಚಿಕಿತ್ಸೆ ಮಾಡಲಾಯಿತು. ನೌಕರರನ್ನು ಸೇವೆಯಿಂದ ತೆಗೆದುಹಾಕಲಾಯಿತು. ಚುನಾಯಿತ ಸರ್ಕಾರಗಳನ್ನು ಕಿತ್ತು ಎಸೆಯಲಾಯಿತು ಎಂದರು.

ತುರ್ತು ಪರಿಸ್ಥಿತಿ ಘೋಷಿಸಿದ ಸಂದರ್ಭದಲ್ಲಿ ಮೂರು ದಿನಗಳ ಕಾಲ ಪತ್ರಿಕೆಗಳು ಸಹ ಮುದ್ರಣವಾಗದಂತೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಯಿತು. ರಾಮಕೃಷ್ಣ ಹೆಗಡೆ, ಎಲ್‌.ಕೆ. ಆಡ್ವಾಣಿ, ಅಟಲ್ ಬಿಹಾರಿ ವಾಜಪೇಯಿ, ಜಾರ್ಜ್ ಫರ್ನಾಂಡಿಸ್, ಯಡಿಯೂರಪ್ಪ ಸೇರಿದಂತೆ ಅನೇಕರು ಜೈಲುವಾಸ ಅನುಭವಿಸಿದರು. ಹಂದಿಗಳು ಇರದಂತಹ ಸ್ಥಿತಿಯಲ್ಲಿ ಅವರನ್ನು ಇರಿಸಿದರು. ದೇಶದ ಪ್ರಜಾಪ್ರಭುತ್ವ ಉಳಿಸಿಕೊಳ್ಳಲು ಇದನ್ನು ನೆನಸಿಕೊಳ್ಳಬೇಕಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಸಂವಿಧಾನ ಬದಲಾವಣೆ ತಂದಿದೆ. ದೇಶದ ಸಂವಿಧಾನ ಮೂಲಕ್ಕೆ ವಿರುದ್ಧವಾಗಿ ತುರ್ತು ಪರಿಸ್ಥಿತಿ ಹೇರಲಾಗಿದೆ. ಹೀಗಾಗಿ ಇದರ ಬಗ್ಗೆ ಜನರಿಗೆ ತಿಳಿಸಿ ಪ್ರಜಾಪ್ರಭುತ್ವದ ಉಳಿಸಿ ಎಂದರು.

ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ನಾನು ಹಾಗೂ ಅನಂತಕುಮಾರ ಅಧ್ಯಯನ ಮಾಡುತ್ತಿದ್ದ ಸಮಯದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಯಿತು. ಇದರ ಬಗ್ಗೆ ಹೋರಾಟ ಮಾಡಲು ತೀರ್ಮಾನ ಮಾಡಲಾಯಿತು. ಇಂದಿರಾ ಅಂದರೆ ಅಂದರ್‌ ಆಗುತ್ತಿದ್ದರು. ನಾವು ರಸ್ತೆ ತಡೆ ಮಾಡಿದ ಸಮಯದಲ್ಲಿ ಕೆಲವರು ಬಸ್‌ಗೆ ಬೆಂಕಿ ಹಚ್ಚಿದರು. ಅದು ದೇಶದಲ್ಲಿ ದೊಡ್ಡ ಸುದ್ದಿಯಾಯಿತು.

ಪಾರ್ಲಿಮೆಂಟ್‌ನಲ್ಲಿ ಚರ್ಚೆಯಾಗದೇ ರಾತ್ರೋರಾತ್ರಿ ಸಹಿ ಹಾಕಿಸಿ, ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಯಿತು. ಆಡ್ವಾಣಿ, ಯಡಿಯೂರಪ್ಪ, ವಾಜಪೇಯಿ ಜೈಲಿನಲ್ಲಿದ್ದರು. ಹೇಳದೇ ಕೇಳದೆ ಜೈಲಿಗೆ ಹಾಕುವ ಪರಿಸ್ಥಿತಿ ತಂದರು. ಆರ್‌ಎಸ್‌ಎಸ್ ಹಾಗೂ ಜನಸಂಘದ ಕಾರ್ಯಕರ್ತರ ಮೇಲೆ ಹೆಚ್ಚು ಕೇಸ್ ದಾಖಲಿಸಲಾಯಿತು. ಇಂದಿನ ಪ್ರಧಾನಿ ಮೋದಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿದ್ದರು. ಗುಲಾಮಗಿರಿ ಕಾಂಗ್ರೆಸ್‌ನಲ್ಲಿ ಆಳವಾಗಿದೆ. ಸಿದ್ದರಾಮಯ್ಯ ಅವರು ತುರ್ತು ಪರಿಸ್ಥಿತಿಯಲ್ಲಿ ಎಲ್ಲಿದ್ದರು? ಅಧಿಕಾರದ ಆಸೆಗಾಗಿ ಕುಟುಂಬದ ರಕ್ಷಣೆಗೆ ನಿಂತಿದ್ದಾರೆ. ಅಂಥವರು ಸಂವಿಧಾನದ ಬಗ್ಗೆ ಮಾತನಾಡುತ್ತಿದ್ದಾರೆ. ತುಷ್ಟೀಕರಣ ರಾಜಕಾರಣ ಮಾಡಲು ಹೊರಟವರು ಇವರು. ಸಿದ್ದರಾಮಯ್ಯ ಅವರೇ ನಿಮಗೇ ಅಂಬೇಡ್ಕರ್ ಸಂವಿಧಾನ ಬೇಕಾ? ಇಂದಿರಾ ಗಾಂಧಿ ಸಂವಿಧಾನ ಬೇಕಾ ಎಂದು ಪ್ರಶ್ನಿಸಿದರು.

ಅಧಿಕಾರ ಶಾಶ್ವತವಲ್ಲ, ಅಧಿಕಾರದ ಅವಧಿಯಲ್ಲಿ ಜನಪರ ಕೆಲಸಗಳು ಕೈಹಿಡಿಯುತ್ತವೆ. 2026ಕ್ಕೆ ಮಧ್ಯಂತರ ಚುನಾವಣೆ ಬಂದು ಕಮಲ ಅಧಿಕಾರಕ್ಕೆ ಬರಲಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅಧ್ಯಕ್ಷತೆ ವಹಿಸಿದ್ದರು.

ಮಾಜಿ ಸಚಿವ ಬಿ.ಸಿ. ಪಾಟೀಲ, ಮಾಜಿ ಶಾಸಕ ಅರುಣಕುಮಾರ ಪೂಜಾರ, ತುರ್ತು ಪರಿಸ್ಥಿತಿ 50 ವರ್ಷ ರಾಜ್ಯ ಸಮಿತಿ ಸಂಚಾಲಕ ಮಹೇಂದ್ರ ಕೌತಾಳ, ತುರ್ತು ಪರಿಸ್ಥಿತಿ ಸಮಯದಲ್ಲಿ ಕಾರಾಗೃಹ ಶಿಕ್ಷೆ ಅನುಭವಿಸಿದ ರಾಮಕೃಷ್ಣ ತಾಂಬೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಇದೇ ಸಂದರ್ಭದಲ್ಲಿ ತುರ್ತು ಪರಿಸ್ಥಿತಿ ಸಮಯದಲ್ಲಿ ಕಾರಾಗೃಹ ಶಿಕ್ಷೆ ಅನುಭವಿಸಿದ ರಾಮಕೃಷ್ಣ ತಾಂಬೆ ಹಾಗೂ ರವೀಶ ಕರ್ನೂರ ಅವರನ್ನು ಸನ್ಮಾನಿಸಲಾಯಿತು.