ಶಿಕಾರಿಪುರ: ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಜನತೆ ಬ್ರಿಟೀಷರಿಂದ ಅನುಭವಿಸಿದ ನೋವು, ದೌರ್ಜನ್ಯಕ್ಕಿಂತ ತುರ್ತು ಪರಿಸ್ಥಿತಿಯಲ್ಲಿನ ಅವಧಿಯಲ್ಲಿ ಅನುಭವಿಸಿದ ನೋವು ತೀವ್ರ ಭಯಾನಕವಾಗಿತ್ತು ಎಂದು ಖ್ಯಾತ ಅಂಕಣಕಾರ, ಹಿರಿಯ ಪರ್ತಕರ್ತ ದು.ಗು.ಲಕ್ಷ್ಮಣ್ ತಿಳಿಸಿದರು.
ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಜೈಲಿಗೆ ತೆರಳಿದ ಪ್ರತಿಯೊಬ್ಬರೂ ವಾಪಾಸ್ ಮನೆಗೆ ಮರಳುವ ಭರವಸೆ ಕಳೆದುಕೊಂಡಿದ್ದರು. ಸೆರೆವಾಸದಲ್ಲಿ ಅನುಭವಿಸಿದ ನೋವು, ದೌರ್ಜನ್ಯ ಬ್ರಿಟೀಷರು ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಜನತೆಗೆ ನೀಡಿದ ಕಿರುಕುಳಕ್ಕಿಂತ ವಿಪರೀತವಾಗಿತ್ತು ಎಂದು ವಿವರಿಸಿದರು.ಸಮಂಜಸ ಮಾಹಿತಿ ನೀಡದೆ ಜೈಲಿಗೆ ತಳ್ಳಲ್ಪಟ್ಟ ಸ್ವಯಂಸೇವಕರು ಎಲ್ಲ ರೀತಿ ಕಿರುಕುಳ ಅನುಭವಿಸಿದ್ದು, ಕೆಲವರು ಕಿರುಕುಳ ತಾಳಲಾರದೆ 3 ಅಂತಸ್ತಿನ ಜೈಲು ಕಟ್ಟಡದಿಂದ ಜಿಗಿದು ಶಾಶ್ವತವಾಗಿ ಅಂಗ ವೈಕಲ್ಯ ಅನುಭವಿಸಿದ್ದಾರೆ ಎಂದ ಅವರು, ಮಳೆ, ಗಾಳಿ, ಚಳಿಯಿಂದ ಬಳಲುತ್ತಿದ್ದ ಸೆರೆವಾಸಿಗಳಿಗೆ ವಾಂತಿ ಮತ್ತಿತರ ಕಲ್ಮಷಯುಕ್ತ ಹರಕು ಕಂಬಳಿ ನೀಡಲಾಗುತ್ತಿದ್ದು ಇಂತಹ ಪರಿಸ್ಥಿತಿಯನ್ನು ಜೈಲುವಾಸಿಗಳು ತುರ್ತು ಪರಿಸ್ಥಿತಿಯಲ್ಲಿ ಅನುಭವಿಸಿದ್ದಾರೆ ಎಂದು ತಿಳಿಸಿದರು.ತುರ್ತು ಪರಿಸ್ಥಿತಿಯಲ್ಲಿ ಪತ್ರಿಕಾ ಕ್ಷೇತ್ರ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸಿದ್ದು, ಜೈಲಿನಲ್ಲಿದ್ದ ನಾಯಕರ ಸಂದೇಶವನ್ನು ಗುಪ್ತವಾಗಿ ಜನತೆಗೆ ತಲುಪಿಸುವ ಕಾರ್ಯವನ್ನು ಹಲವು ಪತ್ರಿಕೆಗಳು ಸಮರ್ಥವಾಗಿ ನಿಭಾಯಿಸಿವೆ. ಈ ದಿಸೆಯಲ್ಲಿ ಬೆಂಗಳೂರು, ಮಂಗಳೂರು ಮತ್ತಿತರ ನಗರದಲ್ಲಿ ಕ್ಲಿಷ್ಟಕರವಾಗಿದ್ದ ಕಾರ್ಯವನ್ನು ಶಿಕಾರಿಪುರದಲ್ಲಿ ಹಿರಿಯ ಪರ್ತಕರ್ತ ಎಸ್.ಬಿ,ಮಠದ್ ನಿರ್ಭೀತಿಯಿಂದ ಮುದ್ರಿಸಿ ವಿತರಿಸಿದ್ದಾರೆ ಎಂದು ಶ್ಲಾಘಿಸಿದರು.ಸಂಸದ ರಾಘವೇಂದ್ರ ಮಾತನಾಡಿ, ಇಂದಿರಾ ಗಾಂಧಿ ಸರ್ಕಾರ ಸ್ವಾರ್ಥ ಸಾಧನೆಗಾಗಿ ಸಂವಿಧಾನದ ಬುಡಕ್ಕೆ ಕೊಡಲಿ ಪೆಟ್ಟು ನೀಡಿ ಜಾರಿಗೊಳಿಸಿದ್ದ ಕರಾಳ ತುರ್ತು ಪರಿಸ್ಥಿತಿಯಲ್ಲಿನ ಪ್ರಜಾಪ್ರಭುತ್ವ ವಿರೋಧಿ ನೀತಿ ಬಗ್ಗೆ ಇಂದಿನ ಪೀಳಿಗೆಗೆ ಸಮಗ್ರವಾದ ವಸ್ತುನಿಷ್ಠ ಮಾಹಿತಿ ನೀಡುವಲ್ಲಿ ಪುಸ್ತಕ ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೋತ್ಥಾನ ಬಳಗದ ರಾಜ್ಯಾಧ್ಯಕ್ಷ, ಉದ್ಯಮಿ ಎಂ.ಪಿ.ಕುಮಾರ್ ಮಾತನಾಡಿ, ತುರ್ತು ಪರಿಸ್ಥಿತಿಯಲ್ಲಿ ನಾಯಕರು ಭೂಗತರಾಗಿದ್ದ ಸಂದರ್ಭದಲ್ಲಿ ತಾಲೂಕಿನಲ್ಲಿ ರಾತ್ರಿ ವೇಳೆಯಲ್ಲಿ ಪತ್ರಿಕೆ ವಿತರಿಸಿದ ಸಂದರ್ಭವನ್ನು ಮೆಲುಕು ಹಾಕಿದರು.
ವೇದಿಕೆಯಲ್ಲಿ ಎಂಎಡಿಬಿ ಮಾಜಿ ಅಧ್ಯಕ್ಷ ಪದ್ಮನಾಭಭಟ್, ಗುರುಮೂರ್ತಿ, ಹಿರಿಯ ಪರ್ತಕರ್ತ ಎಸ್.ಬಿ ಮಠದ್, ಅಬ್ಬಯ್ಯಮಠ, ಹಾದಿಗಲ್ಲು ಲಕ್ಷ್ಮಿನಾರಾಯಣ, ನಾರಾಯಣರಾವ್, ವೀರಣ್ಣ, ವಿಶ್ವನಾಥ್, ಚನ್ನವೀರಪ್ಪ, ವಸಂತಗೌಡ ಮತ್ತಿತರರಿದ್ದರು.