ಪ್ರಕೃತಿ ವಿಕೋಪ ಸಂದರ್ಭದಲ್ಲಿ ತುರ್ತು ಕಾರ್ಯಾಚರಣೆ: ಡಿಸಿ ಮೀನಾ

KannadaprabhaNewsNetwork |  
Published : Jan 20, 2024, 02:04 AM IST
ಚಿಕ್ಕಮಗಳೂರಿನ ಅಂಬಳೆ ಕೈಗಾರಿಕಾ ಪ್ರದೇಶದಲ್ಲಿರುವ ಲೈಫ್ ಲೈನ್ ಫೀಡ್ಸ್‌ನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಮೀನಾ ನಾಗರಾಜ್‌ ಉದ್ಘಾಟಿಸಿದರು. | Kannada Prabha

ಸಾರಾಂಶ

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಶ್ರಯದಲ್ಲಿ ಜನವರಿ 26ರ ವರೆಗೆ ಜಿಲ್ಲೆಯಲ್ಲಿ ಆಯೋಜಿಸಲಾಗಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್.ಡಿ.ಆರ್.ಎಫ್) ಕಾರ್ಯಾಗಾರಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಮೀನಾ ನಾಗರಾಜ್‌ ಅತಿವೃಷ್ಟಿ, ಪ್ರವಾಹ, ಸುನಾಮಿ ಅಂತಹ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ತುರ್ತು ಪರಿಸ್ಥಿತಿಯಲ್ಲಿ ಕೈಗೊಳ್ಳ ಬೇಕಾದ ಕಾರ್ಯಾಚರಣೆ ಕುರಿತು ಜಿಲ್ಲೆಯ ತಾಲೂಕುಗಳಲ್ಲಿ ಎನ್‌ಡಿಆರ್‌ಎಫ್ ತಂಡ ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸಲಿದೆ ಎಂದು ಹೇಳಿದರು.

ಚಿಕ್ಕಮಗಳೂರಿನಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್.ಡಿ.ಆರ್.ಎಫ್) ಕಾರ್ಯಾಗಾರ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಅತಿವೃಷ್ಟಿ, ಪ್ರವಾಹ, ಸುನಾಮಿ ಅಂತಹ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ತುರ್ತು ಪರಿಸ್ಥಿತಿಯಲ್ಲಿ ಕೈಗೊಳ್ಳ ಬೇಕಾದ ಕಾರ್ಯಾಚರಣೆ ಕುರಿತು ಜಿಲ್ಲೆಯ ತಾಲೂಕುಗಳಲ್ಲಿ ಎನ್‌ಡಿಆರ್‌ಎಫ್ ತಂಡ ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸಲಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದರು.

ಅಂಬಳೆ ಕೈಗಾರಿಕಾ ಪ್ರದೇಶದಲ್ಲಿರುವ ಲೈಫ್ ಲೈನ್ ಫೀಡ್ಸ್‌ನ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಶ್ರಯದಲ್ಲಿ ಜನವರಿ 26ರ ವರೆಗೆ ಜಿಲ್ಲೆಯಲ್ಲಿ ಆಯೋಜಿಸಲಾಗಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್.ಡಿ.ಆರ್.ಎಫ್) ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಚಿಕ್ಕಮಗಳೂರು ಜಿಲ್ಲೆ ಹಲವಾರು ವರ್ಷಗಳಿಂದ ಭೂ ಕುಸಿತ, ಪ್ರವಾಹ ಮತ್ತು ಬರಗಾಲ ಸೇರಿದಂತೆ ಅನೇಕ ಪ್ರಾಕೃತಿಕ ದುರಂತಗಳನ್ನು ಎದುರಿಸಿಕೊಂಡು ಬಂದಿದೆ. 2019 ನೇ ಸಾಲಿನಲ್ಲಿ ಉಂಟಾದ ಭೂ ಕುಸಿತ, ಪ್ರವಾಹ ಪರಿಸ್ಥಿತಿಯನ್ನು ಪ್ರಸ್ತಾಪಿಸಿದ ಅವರು, ಈ ಸಂದರ್ಭದಲ್ಲಿ ಜಿಲ್ಲಾಡಳಿತ ಕೈಗೊಂಡ ಕಾರ್ಯ ಶ್ಲಾಘನೀಯ. ಜಿಲ್ಲೆಯ ಸಾರ್ವಜನಿಕರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸರ್ಕಾರೇತರ ಸಂಸ್ಥೆಗಳು ಕಾರ್ಯಾಗಾರದ ಸದುಪಯೋಗ ಪಡೆದು ಕೊಳ್ಳಬೇಕು ಎಂದು ತಿಳಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗೋಪಾಲಕೃಷ್ಣ ಮಾತನಾಡಿ, ಚಿಕ್ಕಮಗಳೂರು, ಮೂಡಿಗೆರೆ, ಕಳಸ, ಶೃಂಗೇರಿ ಹಾಗೂ ಕೊಪ್ಪ ತಾಲೂಕಿನಲ್ಲಿ ಪ್ರಾತ್ಯಕ್ಷಿಕೆ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸ ಲಾಗುವುದು. ಜ. 26 ರಂದು ಚಿಕ್ಕಮಗಳೂರು ತಾಲೂಕಿನಲ್ಲಿ ಕಾರ್ಯಾಗಾರ ಮುಕ್ತಾಯವಾಗಲಿದೆ. ಎಲ್ಲರೂ ಈ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳುವಂತೆ ಹೇಳಿದರು.

ಎನ್ ಡಿ ಆರ್ ಎಫ್ ತಂಡದ ಇನ್ಸ್‌ಪೆಕ್ಟರ್ ಅಜಯ್ ಕುಮಾರ್ ಮಾತನಾಡಿ, ಸಮುದಾಯದಲ್ಲಿ ವಿವಿಧ ಅವಘಡಗಳು ಸಂಭವಿಸಿದಾಗ ಪ್ರಥಮ ಹಂತದಲ್ಲಿ ಕೈಗೊಳ್ಳಬೇಕಾದ ಕಾರ್ಯಾಚರಣೆ ಕುರಿತು ಆಂಧ್ರಪ್ರದೇಶದ ವಿಜಯವಾಡದ 10ನೇ ಬೆಟಾಲಿಯನ್ ಎನ್ ಡಿ ಆರ್ ಎಫ್ ತಂಡದಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅರಿವು ಮೂಡಿಸಲಾಗುತ್ತಿದೆ. ಶಾಲೆ-ಕಾಲೇಜು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದರು. ಬಹು ಮಹಡಿಗಳ ಕಟ್ಟಡಗಳಲ್ಲಿ ಅವಘಡಗಳು ಸಂಭವಿಸಿದಾಗ ಹಾಗೂ ಪ್ರಕೃತಿ ವಿಕೋಪಗಳು ಉಂಟಾದಾಗ ಸ್ಥಳೀಯ ವಾಗಿ ಸಿಗುವ ವಸ್ತುಗಳನ್ನು ಬಳಸಿಕೊಂಡು ಪ್ರವಾಹದಿಂದ ದಡ ಸೇರುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಿದರು. ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ಚಿಕ್ಕಮಗಳೂರು ತಾಲೂಕು ತಹಸೀಲ್ದಾರ್ ಡಾ. ಸುಮಂತ್, ಲೈಫ್ ಲೈನ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕಿಶೋರ್ ಕುಮಾರ್, ಪೊಲೀಸ್ ಇಲಾಖೆ, ಅಗ್ನಿ ಶಾಮಕ ಠಾಣೆ, ಆರೋಗ್ಯ ಇಲಾಖೆ, ಅರಣ್ಯ ಇಲಾಖೆ ಹಾಗೂ ಲೈಫ್ ಲೈನ್ ಸಂಸ್ಥೆ ಸಿಬ್ಬಂದಿ ಕಾರ್ಯಾಗಾರದಲ್ಲಿ ಹಾಜರಿದ್ದರು. 19 ಕೆಸಿಕೆಎಂ 2ಚಿಕ್ಕಮಗಳೂರಿನ ಅಂಬಳೆ ಕೈಗಾರಿಕಾ ಪ್ರದೇಶದಲ್ಲಿರುವ ಲೈಫ್ ಲೈನ್ ಫೀಡ್ಸ್‌ನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಮೀನಾ ನಾಗರಾಜ್‌ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ