ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ಅರಮನೆ ಉತ್ತರ ದ್ವಾರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಎದುರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಭಾನುವಾರ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಬೃಹತ್ ಮಾನವ ಸರಪಳಿ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡ ಭಾರತ ಇಂದು ಪ್ರಜಾಪ್ರಭುತ್ವದ ಅತೀ ದೊಡ್ಡ ದೇಶವಾಗಿದೆ. ರಾಜ್ಯದ ಬೀದರಿಂದ ಹಿಡಿದು ಚಾಮರಾಜನಗರದವರೆಗೆ ಮಾನವ ಸರಪಳಿ ನಿರ್ಮಿಸಿ ಇತಿಹಾಸ ಸೃಷ್ಟಿಸುವುದಕ್ಕೆ ಸಾಕ್ಷಿಯಾಗಿದ್ದು, ಇದರ ಉದ್ದೇಶ ಸಂವಿಧಾನವನ್ನು ಇನ್ನೂ ಗಟ್ಟಿಗೊಳಿಸಲು, ಅದರ ಅರಿವು ಮೂಡಿಸುವುದಾಗಿದೆ ಎಂದು ಅವರು ಹೇಳಿದರು.ಡಾ.ಬಿ.ಆರ್. ಅಂಬೇಡ್ಕರ್ ದೇಶಕ್ಕೆ ಅತ್ಯುತ್ತಮ ಸಂವಿಧಾನವನ್ನು ನೀಡಿದ್ದಾರೆ. ಅದನ್ನು ನಾವೆಲ್ಲರೂ ನಮಗಾಗಿ ಅರ್ಪಿಸಿಕೊಂಡು ಶಾಸನವಾಗಿ ಒಪ್ಪಿಕೊಂಡಿದ್ದೇವೆ. ಕೈಹಿಡಿದು ನಿಲ್ಲುವುದರೊಂದಿಗೆ, ಪರಸ್ಪರ ಸಹಾಯ ಹಸ್ತ ಚಾಚುವುದನ್ನು ಎಲ್ಲರೂ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆಯನ್ನು ಸಾಮೂಹಿಕವಾಗಿ ಓದಿಸಲಾಯಿತು. ಮಾನವ ಸರಪಳಿಯಲ್ಲಿ ಪಾಲ್ಗೊಂಡವರು ಕೈ ಕೈ ಹಿಡಿದುಕೊಂಡು ತಮ್ಮ ಎರಡು ಕೈಗಳನ್ನು ಮೇಲಕ್ಕೆ ಎತ್ತಿ ಹಿಡಿದು ಜೈ ಹಿಂದ್, ಜೈ ಕರ್ನಾಟಕ ಎಂಬ ಘೋಷಣೆಗಳನ್ನು ಕೂಗಿದರು. ಭಾನುವಾರ ಬೆಳಗ್ಗೆ ನಡಿಗೆ ತಾಲೀಮು ಮುಗಿಸಿ ಅರಮನೆಗೆ ವಾಪಸಾಗುತ್ತಿದ್ದ ದಸರಾ ಆನೆಗಳು ಕೂಡ ಸಾಲಿನಲ್ಲಿ ನಿಲ್ಲಿಸಿದ್ದು ವಿಶೇಷವಾಗಿತ್ತು. ಜಿಲ್ಲೆಯಲ್ಲಿ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಸುಮಾರು 60 ಸಾವಿರ ಜನರು ಭಾಗವಹಿಸಿದ್ದರು.
----
ಜಾತಿ ಯಾವುದೇ ಇರಬಹುದು. ಯಾವ ಮನುಷ್ಯನೂ ಅರ್ಜಿ ಹಾಕಿಕೊಂಡು ಹುಟ್ಟಿಲ್ಲ. ನಾವು ಸೃಷ್ಟಿಸಿರುವ ಜಾತಿಯಲ್ಲಿ ಮಾನವೀಯ ಮೌಲ್ಯಗಳಿಗೆ ಮಾನವ ಸಂಬಂಧಗಳಿಗೆ ಹೆಚ್ಚು ಆದ್ಯತೆ ನೀಡೋಣ.
----
- ಡಾ.ಡಿ. ತಿಮ್ಮಯ್ಯ, ವಿಧಾನಪರಿಷತ್ ಸದಸ್ಯ